ಬೆಂಗಳೂರು:ಬಿಜೆಪಿ ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು ಬುಧವಾರ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಮಾತುಕತೆ ವೇಳೆ ಡಿಕೆಶಿ ಮತ್ತು ಯಡಿಯೂರಪ್ಪ ಮಾತ್ರ ಜತೆಗಿದ್ದಿದ್ದು, ಬೇರೆ ಯಾರಿಗೂ ಒಳಗಿರಲು ಅವಕಾಶ ಕೊಟ್ಟಿರಲಿಲ್ಲವಾಗಿತ್ತು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿಎಸ್ ವೈ, ಸಿಗಂಧೂರು ಸೇತುವೆ ನಿರ್ಮಾಣದ ಕುರಿತು ಚರ್ಚಿಸಲು ಡಿಕೆಶಿ ಅವರನ್ನು ಭೇಟಿಯಾಗಿರುವುದಾಗಿ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಡಿಕೆ ಶಿವಕುಮಾರ್ ನನಗೆ 101%ದಷ್ಟು ಸ್ನೇಹಿತ ಎಂದು ನಗೆ ಚಟಾಕಿ ಹಾರಿಸಿದರು.
ಯಡಿಯೂರಪ್ಪ ಜೊತೆ ಶಾಸಕ ಬಿವೈ ರಾಘವೇಂದ್ರ, ಹರತಾಳು ಹಾಲಪ್ಪ ಜೊತೆಗಿದ್ದರು. ಆದರೆ ಮಾತುಕತೆ ವೇಳೆ ಇವರಿಬ್ಬರನ್ನು ಹೊರಗೆ ಕಳುಹಿಸಲಾಗಿತ್ತು. ರಾಜಕೀಯ ಚರ್ಚೆಯ ಬಗ್ಗೆ ನಿಮ್ಮ ಮುಂದೆ ಹೇಳೋಕ್ಕೆ ಆಗುತ್ತಾ ಎಂದು ಹೇಳುವ ಮೂಲಕ ಉತ್ತರ ನೀಡುವುದರಿಂದ ನುಣುಚಿಕೊಂಡರು.