ಧಾರವಾಡ: ಬಿಆರ್‌ಟಿಎಸ್ ರಸ್ತೆಯ ಫುಟ್‌ಪಾತ್ ಒತ್ತುವರಿ ತೆರವು ಹಾಗೂ ಫುಟ್‌ಪಾತ್ ಅತಿಕ್ರಮಿಸಿ ನಿರ್ಮಿಸಿರುವ ವಿವಿಧ ರೀತಿಯ ಗೋಡೆ, ಕಟ್ಟಡ, ಬೋರ್ಡ್‌ಗಳನ್ನು ತೆರವುಗೊಳಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಿಆರ್‌ಟಿಎಸ್ ರಸ್ತೆಯಲ್ಲಿ ಖಾಸಗಿ ವಾಹನಗಳು ಓಡಾಡದಂತೆ ಮಹಾನಗರ ಪೊಲೀಸ್ ಆಯುಕ್ತರ ಸಹಾಯದಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಫೆಬ್ರವರಿ ಮಾಹೆಯಲ್ಲಿ ನಿಯಮ ಉಲ್ಲಂಘಿಸಿ ಬಿಆರ್‌ಟಿಎಸ್ ರಸ್ತೆಯಲ್ಲಿ ಸಂಚರಿಸಿದ ಒಟ್ಟು 2,400 ವಾಹನಗಳಿಗೆ ನೋಟಿಸ್ ನೀಡಿ, ಪ್ರತಿ ವಾಹನಕ್ಕೆ 500 ರೂ.ಗಳ ದಂಡ ವಿಧಿ ಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಕಠಿಣ ಕ್ರಮ ಕೈಗೊಂಡು ಬಿಆರ್‌ಟಿಎಸ್ ರಸ್ತೆಯಲ್ಲಿ ಅನುಮತಿ ಇಲ್ಲದೆ ಸಂಚರಿಸುವ ಬೈಕ್, ಕಾರ್ ಸೇರಿದಂತೆ ಎಲ್ಲ ರೀತಿಯ ವಾಹನಗಳ ಚಾಲಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಬಿಆರ್‌ಟಿಎಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಇತರ ರಸ್ತೆಗಳಿಗೆ ರಸ್ತೆ ವಿಭಜಕಗಳನ್ನು ನಿರ್ಮಿಸಲಾಗಿದೆ. ಎಚ್ಚರಿಕೆ ಸಂದೇಶವಿರುವ ಫಲಕ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ, ಬೀದಿ ದೀಪಗಳನ್ನು ಅಳವಡಿಸಬೇಕೆಂದು ಬಿಆರ್‌ಟಿಎಸ್ ಅಧಿಕಾರಿಗಳಿಗೆ ಸೂಚಿಸಿದರು. ಮಹಾನಗರ ಪೊಲೀಸ್ ಆಯುಕ್ತ ಲಾಬೂರಾಮ ಮಾತನಾಡಿ, ಕಳೆದ ಸಭೆಯಲ್ಲಿ ಸೂಚಿಸಿದ ಕಾರ್ಯಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರ, ಬಿಆರ್‌ಟಿಎಸ್ ಸಂಸ್ಥೆ ಮತ್ತು ನಂದಿ ಇನಾ ಸ್ಟ್ರಕ್ಚರ್ ಡೆವಲೆಪ್‌ಮೆಂಟ್ ಕಂಪನಿ ಕೈಗೊಂಡಿದೆ. ಇದು ಇನ್ನೂ ಪರಿಣಾಮಕಾರಿಯಾಗಿ ಎಚ್ಚರಿಕೆ ಸಂದೇಶಗಳ ಫಲಕಗಳನ್ನು, ರಸ್ತೆ ವಿಭಜಕ(ರಬ್ಬರ್)ಗಳನ್ನು ಅಳವಡಿಸುವ ಕುರಿತು ಮತ್ತು ಬೈಪಾಸ್ ರಸ್ತೆಯಲ್ಲಿ ಬರುವ ಸಂಪರ್ಕ ರಸ್ತೆಗಳಲ್ಲಿ ಅಪಘಾತಗಳು ಆಗದಂತೆ ಸೂಕ್ತ ಮುಂಜಾಗ್ರತಾ ಕ್ರಮ ವಹಿಸುವಂತೆ ಸೂಚಿಸಿದರು.
ಜಿಪಂ ಸಿಇಒ ಡಾ|ಸುಶೀಲಾ ಬಿ., ಎಸ್‌ಪಿ ಪಿ. ಕೃಷ್ಣಕಾಂತ ಮಾತನಾಡಿದರು. ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್ .ಬಿ. ಚೌಡಣ್ಣವರ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ ವಿವೇಕಾನಂದ ವಿಶ್ವಜ್ಞ, ಬಿಆರ್‌ಟಿಎಸ್ ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಬಸವರಾಜ, ನಂದಿ ಇನಾಫ್ರಾ ಸ್ಟ್ರಕ್ಚರ್ ಡೆವಲೆಪ್‌ಮೆಂಟ್ ಕಂಪನಿ ಧಾರವಾಡದ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್ ಎಸ್.ಎಂ., ಹಿರಿಯ ಮೋಟಾರು ವಾಹನ ನಿರೀಕ್ಷಕ ಆರ್.ಎ. ಕಿತ್ತೂರ, ಅಬಕಾರಿ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ಇಲಾಖೆ ಅ ಧಿಕಾರಿಗಳು ಇದ್ದರು. ಸಾರಿಗೆ ಇಲಾಖೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ. ಶಂಕ್ರಪ್ಪ ಸ್ವಾಗತಿಸಿ, ಸಭೆ ನಿರ್ವಹಿಸಿದರು.