ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಯೋಜನೆ ಅನುದಾನದಲ್ಲಿ ಬಿಆರ್‌ಟಿಎಸ್ ವತಿಯಿಂದ ಕೈಗೊಳ್ಳಲಾಗುವ ಕಾಮಗಾರಿಗಳ ಪೂರ್ಣ ಮಾಹಿತಿ ನೀಡುವಲ್ಲಿ ವಿಫಲರಾದ ಬಿಆರ್‌ಟಿಎಸ್ ಅಧಿಕಾರಿಗಳನ್ನು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ತರಾಟೆಗೆ ತೆಗೆದುಕೊಂಡರು.
ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ: ಬಿಆರ್‌ಟಿಎಸ್ ಅತ್ಯುತ್ತಮ ಯೋಜನೆ. ಆದರೆ ಅನುಷ್ಠಾನ ಸಂಪೂರ್ಣ ವಿಫಲವಾಗಿದೆ. ಫ್ಲೈಓವರ್ ಹಾಗೂ ರಸ್ತೆ ನಿರ್ಮಾಣ ಮಾಡಿ ಒಂದು ವರ್ಷ ಕಳೆಯುವುದರಲ್ಲಿ ಹದಗೆಟ್ಟಿವೆ. ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿಗಳ ವೈಫಲ್ಯವೂ ಕಾರಣ. ಸಾಕಷ್ಟು ಕಡೆಗಳಲ್ಲಿ ಮಳೆ ನೀರು ನಿಲ್ಲುತ್ತಿದ್ದು, ಜನರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಗುತ್ತಿಗೆದಾರರಿಗೆ ನೋಟಿಸ್ ನೀಡಿ ಕಪ್ಪುಪಟ್ಟಿಗೆ ಶಿಫಾರಸು ಮಾಡಬೇಕು. ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸೈಕಲ್ ಮಾರ್ಗ ಬೇಡ: ಸ್ಮಾರ್ಟ್‌ಸಿಟಿಯಲ್ಲಿ ಅನುದಾನವಿದೆ ಎನ್ನುವ ಕಾರಣಕ್ಕೆ ಬೇಕಾಬಿಟ್ಟಿ ಖರ್ಚು ಸಲ್ಲ. ಗೋಕುಲ ರಸ್ತೆಯಲ್ಲಿ ಸೈಕಲ್ ಮಾರ್ಗ ನಿರ್ಮಾಣ ಸದ್ಯಕ್ಕೆ ಬೇಡ. ಟೆಂಡರ್‌ಶ್ಯೂರ್ ರಸ್ತೆಯ ಸೈಕಲ್ ಮಾರ್ಗದ ಪ್ರಯೋಜನ ನೋಡಿಕೊಂಡು ಮುಂದೆ ನಿರ್ಧಾರ ಕೈಗೊಳ್ಳಬಹುದು. ರಸ್ತೆ ವಿಭಜಕ ಸುಂದರವಾಗಿ ನಿರ್ಮಿಸಬೇಕು. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಡಾಂಬರ್‌ಗಿಂತ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಸಚಿವ ಜೋಶಿ ಅಧಿಕಾರಿಗಳಿಗೆ ಸೂಚಿಸಿದರು.
2ನೇ ಹಂತದ ಬಿಆರ್‌ಟಿಎಸ್: ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಮಾತನಾಡಿ, ಸ್ಮಾರ್ಟ್‌ಸಿಟಿ ಅನುದಾನದಲ್ಲಿ ಬಿಆರ್‌ಟಿಎಸ್ ಯೋಜನೆಯನ್ನು ಗೋಕುಲ ರಸ್ತೆ ಭಾಗಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ. 12 ಕೋಟಿ ರೂ. ವೆಚ್ಚದಲ್ಲಿ ಇನ್ಫೋಸಿಸ್ ಕಟ್ಟಡದಿಂದ ಹೊಸೂರು ವೃತ್ತದವರೆಗೆ 11 ಬಸ್ ನಿಲ್ದಾಣ, 12 ಕೋಟಿ ರೂ. ವೆಚ್ಚದಲ್ಲಿ ವಾಣಿ ವಿಲಾಸ ವೃತ್ತ, ಸುಮಾರು 40 ಕೋಟಿ ರೂ. ಸ್ಮಾರ್ಟ್‌ಸಿಟಿ, ಬಿಆರ್‌ಟಿಎಸ್ ಹಾಗೂ ವಾಯವ್ಯ ಸಾರಿಗೆ ಸಂಸ್ಥೆ ಅನುದಾನ ಸೇರಿದಂತೆ ಒಟ್ಟು 90 ಕೋಟಿ ರೂ. ವೆಚ್ಚದಲ್ಲಿ ಹಳೇ ಬಸ್‌ನಿಲ್ದಾಣ ಮರುಜನ್ಮಕ್ಕೆ ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
Advertisement
ಕೆಯುಐಡಿಎಫ್‌ಸಿ ಸಭಾಂಗಣದಲ್ಲಿ ಸೋಮವಾರ ನಡೆದ ಸ್ಮಾರ್ಟ್‌ಸಿಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಸ್ಮಾರ್ಟ್‌ಸಿಟಿ ಅನುದಾನದಡಿ ಕೈಗೊಳ್ಳಲು ನಿರ್ಧರಿಸಿದ ಕಾಮಗಾರಿಗಳ ಮಾಹಿತಿ ನೀಡುವಂತೆ ಸೂಚಿಸಿದರು. ಇಲ್ಲಿನ ಹಳೇ ಬಸ್‌ನಿಲ್ದಾಣದ ಕಟ್ಟಡ ನಿರ್ಮಾಣ, ವಾಣಿವಿಲಾಸ ವೃತ್ತ ಅಭಿವೃದ್ಧಿ ಹಾಗೂ ಎರಡನೇ ಹಂತದ ಬಿಆರ್‌ಟಿಎಸ್ ಯೋಜನೆ ಸೇರಿದಂತೆ 60 ಕೋಟಿ ರೂ. ಬೇಡಿಕೆ ಸಲ್ಲಿಸಲಾಗಿದೆ ಎಂದು ಬಿಆರ್‌ಟಿಎಸ್ ಅಧಿಕಾರಿಗಳು ಮಾಹಿತಿ ನೀಡಿದರು. ವಿವರವಾದ ಮಾಹಿತಿ ಕೊಡಿ ಎಂದು ಹೇಳುತ್ತಿದ್ದಂತೆ ನೀಲನಕ್ಷೆ ಹಾಗೂ ಹಾಗೂ ವಿಸ್ತೃತ ವರದಿ ತಯಾರಿಸದ ಪರಿಣಾಮ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪರಿಪೂರ್ಣ ಮಾಹಿತಿ ಇಲ್ಲದೆ ಹಣ ಕೊಡಿ ಎಂದರೆ ಹೇಗೆ. ಸಭೆಯ ಬಗ್ಗೆ ನಿಮಗೆ ಗಂಭೀರತೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Related Articles
Advertisement
ಬೃಹತ್-ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ದೀಪಾ ಚೋಳನ್, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಡಿಸಿಪಿ ಡಾ| ಶಿವಕುಮಾರ ಗುಣಾರೆ, ಸ್ಮಾರ್ಟ್‌ಸಿಟಿ ಎಂಡಿ ಶಕೀಲ್ ಅಹ್ಮದ್ ಇನ್ನಿತರರಿದ್ದರು.
ಏಕಕಾಲಕ್ಕೆ ದರ್ಗಾ-ದೇವಸ್ಥಾನ ತೆರವಿಗೆ ಸೂಚನೆ:
ಉಣಕಲ್ಲ ಶ್ರೀ ರಾಮೇಶ್ವರ ದೇವಸ್ಥಾನ ಹಾಗೂ ಭೈರಿದೇವರಕೊಪ್ಪದ ದರ್ಗಾ ತೆರವುಗೊಳಿಸುವ ಕುರಿತು ಸಂಬಂಧಿಸಿದವರೊಂದಿಗೆ ಚರ್ಚಿಸಿ ಮನವಿ ಮಾಡಿ. ಒಂದು ವೇಳೆ ಒಪ್ಪದಿದ್ದರೆ ಕಾನೂನು ಪ್ರಕಾರ ಎರಡನ್ನೂ ಏಕಕಾಲಕ್ಕೆ ತೆರವುಗೊಳಿಸಬೇಕು. ಇದನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸಚಿವ ಜೋಶಿ ಸೂಚಿಸಿದರು. ಹೊಸೂರು ವೃತ್ತದಲ್ಲಿ ರಸ್ತೆಗೆ ಅಂಟಿಕೊಂಡು ಗಣೇಶ ಗುಡಿ ನಿರ್ಮಿಸುತ್ತಿದ್ದು, ಕೂಡಲೇ ಸ್ಥಗಿತಗೊಳಿಸಿ ತೆರವುಗೊಳಿಸಬೇಕು ಎಂದು ಹೇಳಿದರು. ಸಚಿವ ಜಗದೀಶ ಶೆಟ್ಟರ ಮಾತನಾಡಿ, ಪಿಬಿ ರಸ್ತೆಯಲ್ಲೂ ಧಾರ್ಮಿಕ ಕೇಂದ್ರಗಳಿಂದ ರಸ್ತೆ ಕಿರಿದಾಗಿದ್ದು, ರಸ್ತೆ ಒತ್ತುವರಿಯಾಗಿದ್ದರೆ ಕೂಡಲೇ ತೆರವುಗೊಳಿಸಬೇಕು ಎಂದು ಪ್ರಸ್ತಾಪಿಸಿದರು. ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ ಎಂದರು. ಅಭಿವೃದ್ಧಿ ವಿಚಾರದಲ್ಲಿ ಜನಪ್ರತಿನಿಧಿಗಳು ಮಧ್ಯಪ್ರವೇಶ ಹಾಗೂ ರಾಜಕಾರಣ ಮಾಡುವುದು ಬೇಡ. ಅಧಿಕಾರಿಗಳು ಮುಕ್ತವಾಗಿ ನಿರ್ಧಾರ ಕೈಗೊಳ್ಳಲು ಅವಕಾಶ ನೀಡೋಣ ಎಂದು ಶೆಟ್ಟರ ಹೇಳಿದರು.
ದಂಡ ವಸೂಲಿಯೇ ಮುಖ್ಯವಾಗಬಾರದು:
ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದು ಒಳಿತು. ನಗರದಲ್ಲಿ ದಂಡ ವಸೂಲಿ ಮಾಡುವುದೇ ಸಂಚಾರ ಠಾಣೆ ಪೊಲೀಸರಿಗೆ ದೊಡ್ಡ ಕೆಲಸವಾದಂತಾಗಿದೆ. ಶೇ.10 ಸಿಬ್ಬಂದಿ ಸಂಚಾರ ನಿರ್ವಹಣೆ ಮಾಡುತ್ತಿದ್ದರೆ ಶೇ.90 ಸಿಬ್ಬಂದಿ ದಂಡ ಸಂಗ್ರಹಕ್ಕೆ ಓಡಾಡುತ್ತಿರುತ್ತಾರೆ. ಇದು ಸರಿಯಾದ ವ್ಯವಸ್ಥೆಯಲ್ಲ. ಸರಕು ವಾಹನಗಳಲ್ಲಿ ಪ್ರಯಾಣ ಹಾಗೂ ಹೆಚ್ಚುವರಿ ಮಕ್ಕಳನ್ನು ಆಟೋ ರಿಕ್ಷಾದಲ್ಲಿ ಸಾಗಿಸುವವರ ಮೇಲೆ ಕ್ರಮ ಕೈಗೊಳ್ಳಲು ನಮ್ಮ ತಕರಾರಿಲ್ಲ. ಉದ್ದೇಶಪೂರ್ವಕವಾಗಿ ವಾಹನಗಳನ್ನು ತಡೆದು ದಂಡದ ಹಾಕುವುದು ಸರಿಯಲ್ಲ ಎಂದು ಡಿಸಿಸಿ ಡಾ| ಶಿವಕುಮಾರ ಗುಣಾರೆ ಅವರಿಗೆ ಸಚಿವ ಜೋಶಿ ಸೂಚಿಸಿದರು.
ಮೊದಲು ನಾಲಾ ಒತ್ತುವರಿ ತೆರವು ಮಾಡಿ:
ಉಣಕಲ್ಲ ನಾಲಾ ಸಾಕಷ್ಟು ಒತ್ತುವರಿಯಾಗಿದ್ದು, ಇಂತಹ ಸಂದರ್ಭದಲ್ಲಿ 130 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನ ಮಾಡುವುದು ಸೂಕ್ತವಲ್ಲ. ಮೊದಲು ಒತ್ತುವರಿ ತೆರವುಗೊಳಿಸಿ ಆಮೇಲೆ ಟೆಂಡರ್ ಸೇರಿದಂತೆ ಇತರೆ ಪ್ರಕ್ರಿಯೆ ಕೈಗೊಳ್ಳಬೇಕು. ನಾಲಾ ಸರ್ವೇ ಕಾರ್ಯ ಯಾವುದೇ ಕಾರಣಕ್ಕೆ ಸ್ಥಗಿತಗೊಳಿಸಬಾರದು. ಪೂರ್ಣ ಸರ್ವೇ ಮಾಡಿಸಿ ಯಾವುದೇ ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸಬೇಕು. ಕಟ್ಟಡ ಪರವಾನಗಿ, ಸಿಸಿ ನೀಡಿದ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು. ಒಂದು ವೇಳೆ ನಿವೃತ್ತಿಯಾಗಿದ್ದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇದರಲ್ಲಿ ಯಾವುದೇ ಕಾರಣಕ್ಕೆ ಅಧಿಕಾರಿಗಳು ಹಿಂದೇಟು ಹಾಕಬಾರದು ಎಂದು ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.