Advertisement

ನವೆಂಬರ್‌ ವೇಳೆಗೆ ಬಿಆರ್‌ಟಿಎಸ್‌ ಪೂರ್ಣ: ದರ್ಪಣ ಜೈನ್‌ ವಿಶ್ವಾಸ

02:27 PM Jun 24, 2017 | |

ಹುಬ್ಬಳ್ಳಿ: ತ್ವರಿತ ಗತಿಯಲ್ಲಿ ಬಿಆರ್‌ಟಿಎಸ್‌ ಕಾಮಗಾರಿ ನಡೆದಿದ್ದು, ಇದೇ ಗತಿಯಲ್ಲಿ ಕಾಮಗಾರಿ ಮುಂದುವರಿದರೆ ನವೆಂಬರ್‌ ತಿಂಗಳಿನಲ್ಲಿ ಬಿಆರ್‌ಟಿಎಸ್‌ ಬಸ್‌ ಸೇವೆ ಆರಂಭಗೊಳ್ಳಲಿದೆ ಎಂದು ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತ ದರ್ಪಣ ಜೈನ್‌ ತಿಳಿಸಿದರು. 

Advertisement

ನಗರದ ಗೋಕುಲ ರಸ್ತೆಯ ಬಿಆರ್‌ ಟಿಎಸ್‌ ಡೀಪೋ ಕಾಮಗಾರಿ ಪರಿವೀಕ್ಷಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಭೂ ಸ್ವಾಧೀನ, ಕೆಲ ಗುತ್ತಿಗೆದಾರರ ನಿಧಾನ ಗತಿಯ ಕಾಮಗಾರಿಯಿಂದಾಗಿ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ. ಸದ್ಯದ ಸ್ಥಿತಿಯನ್ನು ಪರಿಶೀಲಿಸಿದರೆ ನವೆಂಬರ್‌ನಲ್ಲಿ ಯೋಜನೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು. 

ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್‌ 800 ಕೋಟಿ ರೂ. ಯೋಜನೆಯಾಗಿದ್ದು, ಅದರಲ್ಲಿ  ಈಗಾಗಲೇ 72 ಎಕರೆ ಭೂ ಸ್ವಾಧೀನಕ್ಕಾಗಿ 300 ಕೋಟಿ ವೆಚ್ಚ ತಗುಲಿದೆ. ಅವಳಿ ನಗರದ ಮಧ್ಯೆ 8 ಫ‌ುಟ್‌ ಓವರ್‌ ಬ್ರಿಡ್ಜ್ ನಿರ್ಮಿಸಲಾಗುತ್ತಿದ್ದು, ಅದರಲ್ಲಿ 6 ಫ‌ುಟ್‌ ಓವರ್‌ ಬ್ರಿಡ್ಜ್ಗಳ ಕಾಮಗಾರಿ ಮುಗಿಯುವ ಹಂತದಲ್ಲಿದೆ ಎಂದರು. 

ಮುಂದಿನ 20 ವರ್ಷಗಳಲ್ಲಿ ಅವಳಿ ನಗರದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗುತ್ತಿದೆ. ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಆದ್ಯತೆ ನೀಡಿದರೆ ಸಂಚಾರ ದಟ್ಟಣೆ ನಿಯಂತ್ರಿಸಲು ಸಾಧ್ಯವಾಗುತ್ತದೆ. ಆಗ ಜನರು ಕಾರ್‌, ಬೈಕ್‌ ಕಡಿಮೆ ಮಾಡಿ ಸಾರ್ವಜನಿಕ ಸಂಚಾರ ಬಳಕೆ ಮಾಡುತ್ತಾರೆ ಎಂದು ತಿಳಿಸಿದರು. 

ಅವಳಿ ನಗರದ ಮಧ್ಯೆ ಒಟ್ಟು 130 ಬಸ್‌ಗಳ ಸೇವೆ ಒದಗಿಸಲಾಗುವುದು. 100 ಸ್ಟಾಂಡರ್ಡ್‌ ಬಸ್‌ಗಳು ಹಾಗೂ 30 ಆರ್ಟಿಕ್ಯುಲೇಟೆಡ್‌ ಬಸ್‌ಗಳು ಸಂಚರಿಸಲಿವೆ. ಇಂಟಲಿಜೆಂಟ್‌ ಟ್ರಾನ್ಸ್‌ಪೊàರ್ಟ್‌ ಸಿಸ್ಟಮ್‌ ಇದಾಗಿದೆ. ನೂತನ ಬಸ್‌ಗಳು ಲೋ ಫ್ಲೋರ್‌ ಬಸ್‌ಗಳಾಗಿದ್ದು, ಪ್ರಯಾಣಿಕರು ಕೂಡಲು ಉತ್ತಮ ಆಸನ ವ್ಯವಸ್ಥೆಯಿದೆ.

Advertisement

ಕಡಿಮೆ ನಿಲುಗಡೆ ಹಾಗೂ ಹೆಚ್ಚು ನಿಲುಗಡೆಯ ಸೇವೆಯನ್ನು ಒದಗಿಸಲಾಗುವುದು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ  60 ಚಾಲಕರಿಗೆ ವೋಲ್ವೊ ಕಂಪನಿಯಿಂದ ತರಬೇತಿ ಕೊಡಿಸಲಾಗುತ್ತಿದೆ ಎಂದು ತಿಳಿಸಿದರು. ಪಾದಚಾರಿಗಳು ರಸ್ತೆ ದಾಟಲು ಸಿಗ್ನಲ್‌ಗ‌ಳ ವ್ಯವಸ್ಥೆಯಿದ್ದು, ಕೆಲವೆಡೆ ಫ‌ುಟ್‌ ಓವರ್‌ ಬ್ರಿಡ್ಜ್ ಕಲ್ಪಿಸಲಾಗಿದೆ.

ಬಿಆರ್‌ಟಿಎಸ್‌ ಆರಂಭಗೊಂಡ ನಂತರ ವಾಹನಗಳು ವೇಗದ ಗತಿಯಲ್ಲಿ ಸಾಗುವುದರಿಂದ ಜಾಗರೂಕತೆಯಿಂದ ಸಂಚರಿಸುವ ಕುರಿತು ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ಸದ್ಯ ಪ್ರತಿನಿತ್ಯ 1 ಲಕ್ಷ ಜನರು ಅವಳಿ ನಗರದ ಮಧ್ಯೆ ಸಂಚರಿಸುತ್ತಿದ್ದಾರೆ.

ಮುಂದೆ ಅವಳಿ ನಗರದ ಮಧ್ಯೆ ಸಂಚರಿಸುವವರ ಸಂಖ್ಯೆ ಹೆಚ್ಚಾಗಿ ಪ್ರತಿ ದಿಕ್ಕಿನಲ್ಲಿ ಗಂಟೆಗೆ 10,000 ಜನರು ಸಂಚರಿಸಲು ಕೂಡ ಯೋಜನೆ ಪೂರಕವಾಗಿದೆ. ಬೆಳಗ್ಗೆ 6ರಿಂದ ಸಂಚಾರ ಸೇವೆ ಆರಂಭಿಸಿ ರಾತ್ರಿ 10ರವರೆಗೆ ಸೇವೆ ನೀಡಬೇಕೋ ಅಥವಾ ಮಧ್ಯರಾತ್ರಿ 12ರ ವರೆಗೆ ಸೇವೆ ನೀಡಬೇಕೋ ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ದರ್ಪಣ ಜೈನ್‌ ಧಾರವಾಡದ ಬಿಆರ್‌ಟಿಎಸ್‌ ಬಸ್‌ ನಿಲ್ದಾಣ, ಹೊಸೂರಿನ ಬಸ್‌ ನಿಲ್ದಾಣ ಪರಿವೀಕ್ಷಣೆ ಮಾಡಿದರು. ರಾಯಾಪುರದ ಬಿಆರ್‌ಟಿಎಸ್‌ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಕುರಿತು ಚರ್ಚಿಸಿದರು. ಬಿಆರ್‌ಟಿಎಸ್‌ ವಿಶೇಷ ಅಧಿಕಾರಿ ಮುರಳಿಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ಎಂ.ಜಿ. ಹಿರೇಮಠ, ಉಪಪ್ರಧಾನ ವ್ಯವಸ್ಥಾಪಕ ಬಸವರಾಜ ಕೇರಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next