Advertisement

ಫ್ಲೈ ಓವರ್‌ ಕೆಳಭಾಗ ಸದ್ಬ ಳಕೆಗೆ ಮುಂದಡಿ

06:51 PM Mar 28, 2021 | Team Udayavani |

ಹುಬ್ಬಳ್ಳಿ: ಕಸ ಸುರಿಯುವ ತೊಟ್ಟಿ, ಬೇಕಾಬಿಟ್ಟಿ ಜಾಹಿರಾತು ಭಿತ್ತಿಪತ್ರಗಳನ್ನು ಅಂಟಿಸುವ ತಾಣವಾಗಿರುವ ಫ್ಲೈಓವರ್‌ಗಳಿಗೆ ಹೊಸ ಸ್ಪರ್ಶ ನೀಡಲು ಬಿಆರ್‌ಟಿಎಸ್‌ ಮುಂದಾಗಿದೆ. ಬಿಆರ್‌ಟಿಎಸ್‌ ಉತ್ತಮವಾಗಿದ್ದರೂ ಅನುಷ್ಠಾನದಲ್ಲಾದ ನ್ಯೂನತೆಗಳಿಂದ ಅವೈಜ್ಞಾನಿಕ ಯೋಜನೆ ಎನ್ನುವ ಭಾವನೆ ಜನರಲ್ಲಿದೆ. ಆಗಿರುವ ಒಂದಿಷ್ಟು ತಪ್ಪು ತಿದ್ದಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

Advertisement

ಯೋಜನೆ ಆರಂಭದಿಂದಲೂ ಫ್ಲೈಓವರ್‌ ಕೆಳಭಾಗ ಸದ್ಬಳಕೆ ಮಾಡಿಕೊಳ್ಳಬೇಕೆನ್ನುವ ಚರ್ಚೆಗೆ ಈಗ ರೂಪ ದೊರೆತಿದ್ದು, ನಗರ ಭೂ ಸಾರಿಗೆ ನಿರ್ದೇಶನಾಲಯ ಈ ಯೋಜನೆ ಸಾಕಾರಗೊಳಿಸಲು ಮುಂದಾಗಿದೆ. ಹುಬ್ಬಳ್ಳಿ-ಧಾರವಾಡದ ಮಧ್ಯದಲ್ಲಿ ಉಣಕಲ್ಲ ಕ್ರಾಸ್‌, ಉಣಕಲ್ಲ ಕೆರೆ ಹಾಗೂ ನವನಗರದ ಬಳಿ ಸುಮಾರು 1.8 ಕಿಮೀ ಫ್ಲೈಓವರ್‌ಗಳಿವೆ. ಈ ಭಾಗವನ್ನು ಯಾವುದಾದರೂ ಒಂದು ಉದ್ದೇಶಕ್ಕೆ ಸದ್ಬಳಕೆ ಮಾಡಿಕೊಳ್ಳದ ಪರಿಣಾಮ ಜನರು ಕಸ ಹಾಕುತ್ತಿದ್ದಾರೆ. ಇನ್ನು ಬೇಕಾಬಿಟ್ಟಿಯಾಗಿ ಜಾಹಿರಾತು ಭಿತ್ತಿ ಪತ್ರಗಳನ್ನು ಅಂಟಿಸಲಾಗುತ್ತಿದೆ. ಈ ಹಿಂದೆ ತಳ್ಳು ಗಾಡಿಗಳ ಫುಡ್‌ ಸ್ಟ್ರೀಟ್‌ ಆಗಿ ಮಾರ್ಪಾಡಾಗಿತ್ತು. ಇನ್ನು ಹಾಕಿದ ಕಸಕ್ಕೆ ಬೆಂಕಿ ಹಾಕುವುದು, ಬಿಡಾಡಿಗಳ ದನಗಳ ಆಶ್ರಯ ತಾಣವಾಗಿದೆ. ಇರುವ ಜಾಗ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಜನರ ಬಿಆರ್‌ಟಿಎಸಿ ಕಂಪನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಉದಾಹರಣೆಗಳೂ ಇವೆ. ಇದೀಗ ಈ ಎಲ್ಲಾ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಸೌಂದರ್ಯೀಕರಣಕ್ಕೆ ಆದ್ಯತೆ ನೀಡಲಾಗಿದೆ.

1.8 ಕಿಮೀ ಫ್ಲೈಓವರ್‌

ಮೂರು ಕಡೆ ದೊರೆಯುವ ಸುಮಾರು 1.8 ಕಿಮೀ ಫ್ಲೈಓವರ್‌ ಕೆಳಭಾಗದ ಬಳಕೆಯಾಗದ ಸ್ಥಳದಲ್ಲಿ ಉದ್ಯಾನ ನಿರ್ಮಿಸುವುದು ಪ್ರಮುಖವಾಗಿದೆ. ಬೆಂಗಳೂರು -ವಿಜಯವಾಡದಲ್ಲಿ ಆಗಿರುವ ಮಾದರಿಯಲ್ಲಿ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಬೆಟ್ಟದ ಆಕಾರದಲ್ಲಿ ಹಾಸುಹುಲ್ಲು, ಹೂವಿನ ಸಸಿಗಳು, ಕೂಡಲು ಒಂದಿಷ್ಟು ಬೆಂಚ್‌, ವಾಕಿಂಗ್‌ ಹೀಗೆ ಹಲವು ಚಟುವಟಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸುವ ಗುರಿಯಿದೆ. ಇದಕ್ಕಾಗಿ ವಿನ್ಯಾಸ ಸಿದ್ಧಪಡಿಸಲು ಟೆಂಡರ್‌ ಕರೆಯಲಾಗಿದೆ. ವಿನ್ಯಾಸ ಸಿದ್ಧಪಡಿಸುವ ಸಂಸ್ಥೆಯೇ ಯೋಜನೆ ಅನುಷ್ಠಾನದ ಮೇಲ್ವಿಚಾರಣೆ ನಡೆಸಲಿದೆ.

ಪಾರ್ಕಿಂಗ್‌-ಫುಡ್‌ಸ್ಟ್ರೀಟ್‌ ಕಷ್ಟ

Advertisement

ಬಿಆರ್‌ಟಿಎಸ್‌ ಕಂಪೆನಿಗೆ ಅನ್ಯ ಆದಾಯದ ಮೂಲ ಗಳಿಲ್ಲ. ಹೀಗಾಗಿ ಫ್ಲೈಓವರ್‌ ಅನ್ನು ಆದಾಯದ ಮೂಲವಾಗಿ ಸದ್ಬಳಕೆ ಮಾಡಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಅಗತ್ಯ ಸ್ಥಳಗಳಲ್ಲಿ ಯಾವುದೇ ಸಂಚಾರಕ್ಕೆ ಅಡೆತಡೆಯಾಗದಂತೆ ಜಾಹೀರಾತು ಫಲಕ ಅಳವಡಿಸಿ ಆದಾಯ ಕಂಡುಕೊಳ್ಳುವ ಉದ್ದೇಶವೂ ಇದೆ.

ಫ್ಲೈಓವರ್‌ ಕೆಳಗಿನ ಖಾಲಿ ಜಾಗವನ್ನು ಪಾರ್ಕಿಂಗ್‌ ಸ್ಥಳವನ್ನಾಗಿ ಬಳಸಲು ಹಲವು ಸಲಹೆಗಳು ಬಂದಿದ್ದವು. ಆದರೆ ಎರಡೂ ಕಡೆಗಳಲ್ಲಿ ರಸ್ತೆಗಳು, ವಾಹನ ದಟ್ಟಣೆ ಇರುವುದರಿಂದ ಇದು ಕಷ್ಟ ಸಾಧ್ಯ ಮತ್ತು ಆ ಉದ್ದೇಶಕ್ಕೆ ಬಳಕೆ ಮಾಡಬಾರದೆನ್ನುವ ನಿಯಮಗಳಿಂದ ಇದು ಅಸಾಧ್ಯವಾಗಿದೆ. ಇನ್ನು ಫುಡ್‌ಸ್ಟ್ರೀಟ್‌ ಮಾದರಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕೆನ್ನುವ ಚಿಂತನೆಗೂ ಹಿನ್ನಡೆಯಾಗಿದೆ. ಬಿಆರ್‌ಟಿಎಸ್‌ ಯೋಜನೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿಸಲು ಫ್ಲೈಓವರ್‌ ಕೆಳಗಿರುವ ಖಾಲಿ ಸ್ಥಳ ಸದ್ಬಳಕೆ ಮಾಡಿಕೊಳ್ಳಲು ಉದ್ಯಾನವನ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಇರುವ ಸ್ಥಳವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬಹುದೆನ್ನುವ ಕಾರಣಕ್ಕೆ ವಿನ್ಯಾಸ ತಯಾರಿಸಲು ಟೆಂಡರ್‌ ಕರೆಯಲಾಗಿದೆ. ಇದೊಂದು ಉತ್ತಮ ಸ್ಥಳವಾಗಿ ಬದಲಾಗಿದೆ. ಇದರೊಂದಿಗೆ ಬಿಆರ್‌ ಟಿಎಸ್‌ ಕಂಪನಿಗೆ ಆದಾಯಕ್ಕೆ ಒತ್ತು ನೀಡಲಾಗಿದೆ. ಕೃಷ್ಣ ಬಾಜಪೇಯಿ, (ವ್ಯವಸ್ಥಾಪಕ ನಿರ್ದೇಶಕ, ಬಿಆರ್‌ಟಿಎಸ್‌)

ಬಿಆರ್‌ಟಿಎಸ್‌ ಕಾರಿಡಾರ್‌ ನೋಡಿದರೆ ನಿರ್ವಹಣೆ ಕೊರತೆ ದೊಡ್ಡ ಪ್ರಮಾಣದಲ್ಲಿದೆ. ಪುನಃ ಉದ್ಯಾನ, ಅದರ ನಿರ್ವಹಣೆಗೆ ಒಂದಿಷ್ಟು ಖರ್ಚು ಮಾಡುವುದು ವ್ಯರ್ಥ. ಇದರ ಬದಲು ಒಂದಿಷ್ಟು ಮಾರ್ಪಾಡು ಮಾಡಿ ಪಾರ್ಕಿಂಗ್‌ಗೆ ಬಳಸಬಹುದು. ಇಲ್ಲವೇ ವಾಣಿಜ್ಯ ಉದ್ದೇಶಕ್ಕೆ ಬಳಬಹುದು. ಇದರಿಂದ ಒಂದಿಷ್ಟು ಯುವಕರಿಗೆ ಉದ್ಯೋಗ ದೊರೆಯಲಿದೆ. ಬಿಆರ್‌ಟಿಎಸ್‌ಗೆ ಆದಾಯ ಬರಲಿದೆ. ಶಶಿಕುಮಾರ ಸುಳ್ಳದ, (ಆಮ್‌ ಆದ್ಮಿ ಪಕ್ಷದ ಮುಖಂಡ)

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next