ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ರಿಮೋಟ್ ಕಂಟ್ರೋಲ್ ಮೂಲಕ ತೆಲಂಗಾಣದ ಬಿಆರ್‌ಎಸ್ ಸರಕಾರವನ್ನು ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ವಾದ್ರಾ ಆರೋಪಿಸಿದ್ದಾರೆ.
ತೆಲಂಗಾಣದ ಮುಳುಗು ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, “ಪ್ರತಿ ಕುಟುಂಕ್ಕೆ ಉದ್ಯೋಗ ಕಲ್ಪಿಸಲಾಗುವುದು ಎಂದು ಕಳೆದ ಚುನಾವಣೆ ಸಮಯದಲ್ಲಿ ನೀಡಿದ ಆಶ್ವಾಸನೆಯನ್ನು ಪೂರೈಸುವಲ್ಲಿ ಸಿಎಂ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಸರಕಾರ ವಿಫಲವಾಗಿದೆ. ಇದರಿಂದ ರಾಜ್ಯದಲ್ಲಿ 40 ಲಕ್ಷ ಯುವಕರು ನಿರುದ್ಯೋಗಿಗಳಾಗಿದ್ದಾರೆ’ ಎಂದು ದೂರಿದರು.
“ಬಿಜೆಪಿಯೊಂದಿಗೆ ಬಿಆರ್‌ಎಸ್ ಕೈಜೋಡಿಸಿದೆ. ರಿಮೋಟ್ ಕಂಟ್ರೋಲ್‌ನಲ್ಲಿ ತೆಲಂಗಾಣ ಸರ್ಕಾರವನ್ನು ಪ್ರಧಾನಿ ಮೋದಿ ಅವರು ನಡೆಸುತ್ತಿದ್ದಾರೆ. ಬಿಆರ್‌ಎಸ್ ಸರಕಾರ ಭ್ರಷ್ಟಾಚಾರ ಮತ್ತು ಲೂಟಿಯಲ್ಲಿ ತೊಡಗಿದೆ’ ಎಂದು ಪ್ರಿಯಾಂಕ ವಾದ್ರಾ ಆರೋಪಿಸಿದ್ದಾರೆ.
ಬಸ್ ಯಾತ್ರೆಗೆ ಚಾಲನೆ: ಇದಕ್ಕೂ ಮುನ್ನ ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಸ್ ಯಾತ್ರೆಗೆ ಪ್ರಿಯಾಂಕ ವಾದ್ರಾ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಾಲನೆ ನೀಡಿದರು. ಬಳಿಕ ಮುಳುಗು ಜಿಲ್ಲೆಯ ಐತಿಹಾಸಿಕ ರಾಮಪ್ಪ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು, ಪ್ರಚಾರ ಅಭಿಯಾನ ಆರಂಭಿಸಿದರು.
ಎರಡನೇ ಪಟ್ಟಿ ಬಿಡುಗಡೆ: ಛತ್ತೀಸಗಢ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 53 ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್ ಬಿಡುಗಡೆಗೊಳಿಸಿದೆ.
ಚುನಾವಣೆ ಮುಂದೂಡಿ: ಛತ್ತೀಸಗಢದಲ್ಲಿ ಎರಡನೇ ಹಂತದ ಮತದಾನವನ್ನು ನ.17ರಂದು ಚುನಾವಣಾ ಆಯೋಗ ನಿಗದಿಪಡಿಸಿದೆ. ಆದರೆ ಛತ್ ಹಬ್ಬದ ಹಿನ್ನೆಲೆಯಲ್ಲಿ ಮತದಾನ ದಿನಾಂಕವನ್ನು ಮುಂದೂಡಬೇಕು ಎಂದು ಬಿಜೆಪಿ ಉಪಾಧ್ಯಕ್ಷ ರಮಣ್ ಸಿಂಗ್ ಮನವಿ ಮಾಡಿದ್ದಾರೆ.