ಉಡುಪಿ: ಮಳೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿರುವ ಬೆನ್ನಲ್ಲೇ ಸ್ಥಳೀಯ ಕುಚ್ಚಲು ಅಕ್ಕಿಯನ್ನು ಈ ವರ್ಷ ಪಡಿತರ ವ್ಯವಸ್ಥೆ ಮೂಲಕ ವಿತರಣೆಗೆ ಪೂರಕವಾಗಿ ಕೇಂದ್ರ ಸರಕಾರದಿಂದ ಅನುಮತಿ ಕೋರಲು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅಧ್ಯಕ್ಷತೆಯ ಕಾರ್ಯಪಡೆ ಸಭೆ ನಡೆಸಿ, ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದೆ.
ಕಳೆದ ವರ್ಷ ಕೇಂದ್ರ ಸರಕಾರದಿಂದ ಅನುಮತಿ ಸಿಗುವಾಗಲೇ ವಿಳಂಬವಾಗಿತ್ತು. ಇದರಿಂದ ಸ್ಥಳೀಯ ಕುಚ್ಚಲು ಅಕ್ಕಿಯನ್ನು ಬೆಂಬಲ ಬೆಲೆಯಡಿ ಖರೀದಿಸಿ ಸಾರ್ವಜನಿಕರ ಪಡಿತರ ವ್ಯವಸ್ಥೆಯಡಿ ವಿತರಿಸಲು ಸಾಧ್ಯವಾಗಿರಲಿಲ್ಲ. ಈ ವರ್ಷವೂ ಅದೇ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶದಿಂದ ಈಗಾಗಲೇ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲೆಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ಸರಕಾರದ ಸೂಚನೆ ನೀಡಿತ್ತು. ಅದರಂತೆ ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಕಾರ್ಯಪಡೆ ಸಭೆ ನಡೆಸಿ ಪ್ರಸ್ತಾವನೆಯನ್ನು ಅಂತಿಮಗೊಳಿಸಿ ರಾಜ್ಯ ಸರಕಾರಕ್ಕೆ ಸಲ್ಲಿಸಿದೆ.
ರಾಜ್ಯ ಸರಕಾರದಿಂದ ಈ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುತ್ತದೆ. ಕೇಂದ್ರ ಸರಕಾರದಿಂದ ಅದನ್ನು ಪರಿಶೀಲಿಸಿ, ಅನುಮತಿ ನೀಡುವ ಬಗ್ಗೆ ನಿರ್ಧರಿಸಲಿದೆ. ದ.ಕ.ದಿಂದ ಪ್ರಸ್ತಾವನೆಯ ಇನ್ನಷ್ಟೇ ಹೋಗಬೇಕಿದೆ. ಜಿಲ್ಲಾ ಮಟ್ಟದ ಕಾರ್ಯಪಡೆಯ ಸಭೆಯ ಅನಂತರ ಪ್ರಸ್ತಾವನೆ ರವಾನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಅನುಮತಿ ನೀಡಿರುವುದರಿಂದ ಈ ವರ್ಷವೂ ಅನುಮತಿ ಸುಲಭವಾಗಿ ಸಿಗಲಿದೆ ಮತ್ತು ಕೇಂದ್ರ ಕೃಷಿ ಸಚಿವೆ (ರಾಜ್ಯಖಾತೆ) ಶೋಭಾ ಕರಂದ್ಲಾಜೆ ಕೂಡ ಗಮನ ಹರಿಸಲಿದ್ದಾರೆ ಎನ್ನಲಾಗಿದೆ.
ಈಗಾಲೇ ನೇಜಿ ನಾಟಿ ಆರಂಭವಾಗಿದೆ. ಕಟಾವು ಆರಂಭವಾಗುತ್ತಿದ್ದಂತೆ ಬೆಂಬಲ ಬೆಲೆಯಡಿ ಭತ್ತ ಖರೀದಿಗೆ ಸರಕಾರದಿಂದ ಖರೀದಿ ಕೇಂದ್ರವನ್ನು ತೆರೆಯಬೇಕಾಗುತ್ತದೆ. ಕಳೆದ ಬಾರಿ ಖರೀದಿ ಪ್ರಕ್ರಿಯೆ ವಿಳಂಬವಾಗಿದ್ದರಿಂದ ರೈತರು ನೋಂದಣಿ ಮಾಡಿಕೊಂಡಿರಲಿಲ್ಲ. ಈ ವರ್ಷ ಸೆಪ್ಟಂಬರ್ ಅಥವಾ ಅಕ್ಟೋಬರ್ ಒಳಗಾಗಿ ಕೇಂದ್ರದಿಂದ ಅನುಮತಿ ಸಿಕ್ಕರಷ್ಟೇ ಸ್ಥಳೀಯ ಕುಚ್ಚಲು ಅಕ್ಕಿ ವಿತರಣೆ ಸಾಧ್ಯವಾಗುತ್ತದೆ. ಖರೀದಿ ಕೇಂದ್ರದಲ್ಲಿ ರೈತರು ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಎಲ್ಲ ಪ್ರಕ್ರಿಯೆಗಳು ಅಕ್ಟೋಬರ್ ಅಂತ್ಯದೊಳಗೆ ಆರಂಭವಾದರೆ ಮಾತ್ರ ಉಡುಪಿ, ದ.ಕ. ಜನರಿಗೆ ಪಡಿತರ ವ್ಯವಸ್ಥೆಯಲ್ಲಿ ಸ್ಥಳೀಯ ಕುಚ್ಚಲು ಅಕ್ಕಿ ಸಿಗಲಿದೆ. ಇಲ್ಲವಾದರೆ ಈಗ ಸಿಗುತ್ತಿರುವ ಆಂಧ್ರ ಪ್ರದೇಶ ಕುಚ್ಚಲು ಅಕ್ಕಿಯನ್ನೇ ಪಡೆಯಬೇಕಾಗುತ್ತದೆ.
ಪ್ರಸ್ತಾವನೆ ಕಳುಹಿಸಿದ್ದೇವೆ :
ಸರಕಾರದ ಸೂಚನೆಯಂತೆ ವಿವಿಧ ಇಲಾಖೆಯೊಂದಿಗೆ ಚರ್ಚಿಸಿ ಪ್ರಸ್ತಾವನೆಯನ್ನು ರಾಜ್ಯಕ್ಕೆ ಸಲ್ಲಿಸಿದ್ದೇವೆ. ಅಲ್ಲಿ ಪರಿಶೀಲಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಲಾಗುತ್ತದೆ. ಕೇಂದ್ರದಿಂದ ಅನುಮತಿ ಸಿಕ್ಕ ಅನಂತರದಲ್ಲಿ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದು ಇಲಾಖೆಯ ಉಡುಪಿ ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಮೊಹಮ್ಮದ್ ಇಸಾಕ್ ಅವರು ಮಾಹಿತಿ ನೀಡಿದರು.