Advertisement

ಅಣ್ತಮ್ಮ ಕಾದಾಟದಲ್ಲಿ ತೆನೆ ಹೊತ್ತ ಪೂಜಾರಿ?

10:57 PM Nov 17, 2019 | mahesh |

ಬೆಳಗಾವಿ: ಜಾರಕಿಹೊಳಿ ಸಹೋದರರ ಗುದ್ದಾಟದ ನಡು ವೆಯೇ ಬಿಜೆಪಿಯಿಂದ ಬಂಡಾಯ ಎದ್ದಿರುವ ಅಶೋಕ ಪೂಜಾರಿ ಮತ್ತೆ ತೆನೆ ಹೊತ್ತು “ಗೋಕಾಕದಲ್ಲಿ ಮತ ರಾಶಿ’ ಮಾಡಲು ಮುಂದಾಗಿದ್ದಾರೆ. ಬಿಜೆಪಿಯ ಘಟಾನುಘಟಿ ನಾಯಕರ ಮನವೊಲಿಕೆಗೂ ಬಗ್ಗದೆ ಜೆಡಿಎಸ್‌ನತ್ತ ವಾಲಿರುವ ಬಗ್ಗೆ ದಳಪತಿಗಳು ಸ್ಪಷ್ಟಪಡಿಸಿದ್ದಾರೆ. ಗೋಕಾಕ ಕ್ಷೇತ್ರ ಪ್ರತಿ ಚುನಾವಣೆಯಲ್ಲಿಯೂ ಒಂದಿಲ್ಲೊಂದು ಹೊಸ ಬೆಳವಣಿಗೆಗೆ ಕಾರಣವಾಗುತ್ತದೆ.

Advertisement

ಗೋಕಾಕ ಎಂದರೆ ಜಾರಕಿಹೊಳಿ, ಜಾರಕಿಹೊಳಿ ಎಂದರೆ ಗೋಕಾಕ ಎನ್ನುವಷ್ಟರ ಮಟ್ಟಿಗೆ ಹೆಸರು ಗಳಿಸಿಕೊಂಡ ಇಲ್ಲಿ ಈಗ ಲಿಂಗಾಯತ ಸಮುದಾಯದ ಅಶೋಕ ಪೂಜಾರಿ ಮತ್ತೂಮ್ಮೆ ತೊಡೆ ತಟ್ಟಲು ಸಿದ್ಧರಾಗಿದ್ದಾರೆ. ರಮೇಶ ಹಾಗೂ ಲಖನ್‌ ಜಾರಕಿಹೊಳಿ ನಡುವಿನ ವಾಕ್ಸಮರ ಮುಗಿಲು ಮುಟ್ಟಿದ್ದು, ಇಂಥದರಲ್ಲಿ ಅಶೋಕ ಅಖಾಡಕ್ಕೆ ಇಳಿಯಲು ಸಿದ್ಧರಾಗಿದ್ದು, ಕ್ಷೇತ್ರ ಮತ್ತಷ್ಟು ರಂಗು ಪಡೆದುಕೊಳ್ಳಲಿದೆ. ಆದರೆ ಭಾನುವಾರ ರಾತ್ರಿವರೆಗೂ ಈ ಬಗ್ಗೆ ಅಧಿಕೃತವಾಗಿ ಅಶೋಕ ಪೂಜಾರಿ ಒಪ್ಪಿಕೊಳ್ಳಲಿಲ್ಲ.

ಕರದಂಟಿನ ಸ್ವಾದ ಖಡಕ್‌: ಬಿಜೆಪಿ ಅಧಿಕೃತ ಅಭ್ಯರ್ಥಿ ಯಾಗಿ ರಮೇಶ ಜಾರಕಿಹೊಳಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಯಾಗಿ ಲಖನ್‌ ಜಾರಕಿಹೊಳಿ ಹೆಸರು ಘೋಷಣೆ ಆಗಿದೆ. ಇತ್ತ ಅಶೋಕ ಪೂಜಾರಿ ಭಾನುವಾರ ರಾತ್ರಿಯಾದರೂ ಮಾಧ್ಯಮದ ಎದುರು ಬಾಯಿ ಬಿಟ್ಟಿಲ್ಲ. ಗೋಕಾಕದಲ್ಲಿ ಈವರೆಗೆ ರಮೇಶ ವಿರುದ್ಧ ಲಖನ್‌ ಮಾತ್ರ ಎಂಬ ಮಾತು ಕೇಳಿ ಬರುತ್ತಿತ್ತು. ಈಗ ಪೂಜಾರಿ ಎಂಟ್ರಿ ಕೊಡುತ್ತಿರು ವುದರಿಂದ ಕರದಂಟಿನ ಸ್ವಾದ ಮತ್ತಷ್ಟು ರುಚಿ ಕೊಡಲಿದೆ.

ಲಿಂಗಾಯತ ಮತಗಳಿಗಾಗಿ ಪ್ರಯತ್ನ: ಯಾವುದೇ ಕಾರ ಣಕ್ಕೂ ಅಶೋಕ ಪೂಜಾರಿ ಸ್ಪರ್ಧಿಸದಂತೆ ಕಾಳಜಿ ವಹಿಸಿದ್ದ ಬಿಜೆಪಿಗೆ ಈಗ ತಲೆನೋವಾಗಿದೆ. ಲಿಂಗಾಯತ ಮತಗಳನ್ನು ಕ್ರೋಢೀಕರಿಸಲು ಬಿಜೆಪಿ ಬಹಳ ಪ್ರಯತ್ನ ಪಡುತ್ತಿದೆ. ಗೋಕಾಕ ನಗರ ಸೇರಿ ಸುತ್ತಲಿನ ಹಳ್ಳಿಗಳಲ್ಲಿ ಅಲ್ಲಲ್ಲಿ ಲಿಂಗಾಯತ ಸಮುದಾಯದ ಮತಗಳಿವೆ. ಮೊದಲಿನಿಂದಲೂ ಪೂಜಾರಿ ಇಲ್ಲಿ ವರ್ಚಸ್ಸು ಹೊಂದಿದ್ದರಿಂದ ತನ್ನತ್ತ ಸೆಳೆದು ಕೊಳ್ಳಲು ಲಿಂಗಾಯತ ಮುಖಂಡರೊಂದಿಗೆ ಬಿಜೆಪಿ ಹಾಗೂ ಜೆಡಿಎಸ್‌ ವರಿಷ್ಠರು ಮಾತುಕತೆಯ ಪ್ರಯತ್ನ ನಡೆಸಿದ್ದಾರೆ.

ಕಮಲಕ್ಕೆ ಬಿಗ್‌ ಶಾಕ್‌: ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಸುರೇಶ ಅಂಗಡಿ, ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿ ಹೊಳಿ, ವಿಜಯಪುರ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಸೇರಿ ಅನೇಕರು ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಇವರ ಮಾತಿಗೂ ಬೆಲೆ ಕೊಡದೆ ಪೂಜಾರಿ ತಮ್ಮ ಮೂಲ ಪಕ್ಷ ಜೆಡಿಎಸ್‌ನತ್ತ ವಾಲುವ ಸಾಧ್ಯತೆ ಇರುವುದರಿಂದ ಇದು ಕಮಲಕ್ಕೆ ಬಿಗ್‌ ಶಾಕ್‌ ಆಗಲಿದೆ. ಅಶೋಕ ಪೂಜಾರಿಯಿಂದ ಗೋಕಾಕದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸುಮಾರು 15 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದ ಪೂಜಾರಿ ಈಗ ಮತ್ತೂಮ್ಮೆ ಅಗ್ನಿಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ.

Advertisement

ಇಂದು ನಾಮಪತ್ರ ಸಲ್ಲಿಕೆ ಭರಾಟೆ: ಗೋಕಾಕ, ಕಾಗವಾಡ ಹಾಗೂ ಅಥಣಿ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನ. 18ರಂದು ದಿನಾಂಕ ನಿಗದಿ ಪಡಿಸಿಕೊಂಡಿದ್ದಾರೆ. ಒಂದೇ ದಿನ ಎಲ್ಲ ಅಭ್ಯರ್ಥಿಗಳು ಕಣಕ್ಕೆ ಧುಮುಕಲಿದ್ದಾರೆ. ಗೋಕಾಕದಿಂದ ರಮೇಶ ಜಾರಕಿಹೊಳಿ, ಲಖನ್‌ ಜಾರಕಿಹೊಳಿ, ಅಶೋಕ ಪೂಜಾರಿ, ಕಾಗವಾಡದಿಂದ ಶ್ರೀಮಂತ ಪಾಟೀಲ, ರಾಜು ಕಾಗೆ, ಅಥಣಿಯಿಂದ ಮಹೇಶ ಕುಮಟಳ್ಳಿ, ಗಜಾನನ ಮಂಗಸೂಳಿ ನಾಮಪತ್ರ ಸಲ್ಲಿಸಲಿದ್ದಾರೆ.

ಜಿದ್ದಾಜಿದ್ದಿ ಹೋರಾಟ: ಗೋಕಾಕ ವಿಧಾನಸಭೆ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ವಿರುದ್ಧ ಈ ಹಿಂದೆ ಸಹೋದರ ಭೀಮಶಿ ಜಾರಕಿಹೊಳಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ನಂತರದ ಚುನಾವಣೆಗಳಲ್ಲಿ ಅಶೋಕ ಪೂಜಾರಿ ನೇರ ಸ್ಪರ್ಧೆ ಒಡ್ಡಿದ್ದರೂ ಗೆಲ್ಲಲು ಆಗಿರಲಿಲ್ಲ. 2018ರ ಚುನಾವಣೆ ಯಲ್ಲಿಯೂ ಬಿಜೆಪಿ ಅಭ್ಯರ್ಥಿ ಆಗಿದ್ದ ಅಶೋಕ ಪೂಜಾರಿ ಪರ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರೋಡ್‌ ಶೋ ನಡೆಸಿದ್ದರು. ಈಗ ಮತ್ತೂಮ್ಮೆ ಪೂಜಾರಿ ಕಣಕ್ಕಿಳಿದರೆ ಜಿದ್ದಾಜಿದ್ದಿ ಹೆಚ್ಚಾಗಲಿದೆ. ಜೆಡಿಎಸ್‌ ಪರ ಕುಮಾರಸ್ವಾಮಿ ಪ್ರಚಾರಕ್ಕೆ ಬರುವ ಸಾಧ್ಯತೆಯೂ ಇದೆ.

ಗೋಕಾಕದಲ್ಲಿ ಜಾರಕಿಹೊಳಿ ಸಹೋದರರ ರಾಜಕಾರಣಕ್ಕೆ ಮತದಾರರು ಬೇಸತ್ತಿದ್ದಾರೆ. ಹೀಗಾಗಿ ಅಶೋಕ ಪೂಜಾರಿ ಅವರನ್ನು ಮತ್ತೆ ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಸೋಮವಾರ ನಾಮಪತ್ರ ಸಲ್ಲಿಸಲು ಮಾಜಿ ಸಿಎಂ ಕುಮಾರಸ್ವಾಮಿ ಆಗಮಿಸಲಿದ್ದಾರೆ. ಪೂಜಾರಿ ಜೆಡಿಎಸ್‌ ಸೇರಿದ್ದು, ಗೆಲುವು ಖಚಿತ.
-ಶಂಕರ ಮಾಡಲಗಿ, ಜೆಡಿಎಸ್‌ ಜಿಲ್ಲಾಧ್ಯಕ್ಷ

ಗೋಕಾಕ ಕ್ಷೇತ್ರದಲ್ಲಿ ಅಶೋಕ ಪೂಜಾರಿ ಚುನಾವಣೆಗೆ ನಿಲ್ಲುತ್ತಾರೆ. ಹೇಗೆ ನಿಲ್ಲುತ್ತಾ ರೆಯೋ ಗೊತ್ತಿಲ್ಲ. ಅವರಂತೂ ಚುನಾವಣೆಗೆ ನಿಲ್ಲೋದು ಖಚಿತ. ಜೆಡಿಎಸ್‌ ಸೇರ್ಪಡೆ ನಿರೀಕ್ಷಿತ.
-ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸದಸ್ಯ

* ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next