ಉಡುಪಿ: ಒಂದೇ ದಿನದ ಅಂತರದಲ್ಲಿ ಸಹೋದರರು ನಿಧನ ಹೊಂದಿದ ಘಟನೆ ನಡೆದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಐಡಿಬಿಐ ನಿವೃತ್ತ ಜನರಲ್ ಮೆನೇಜರ್ ಉಡುಪಿ ಅನಂತಪದ್ಮನಾಭ ಆಚಾರ್ಯ (90) ಮತ್ತು ಮಹಾರಾಷ್ಟ್ರ ರಾಜ್ಯದ ನಿವೃತ್ತ ಪ್ರಧಾನ ಅಕೌಂಟೆಂಟ್ ಜನರಲ್ ಉಡುಪಿ ಶ್ರೀನಿವಾಸ ಆಚಾರ್ಯ (88) ಕ್ರಮವಾಗಿ ಅ. 19, ಅ. 18ರಂದು ನಿಧನ ಹೊಂದಿದ ಸಹೋದರರು. ಇವರಿಬ್ಬರ ನಿಧನದ ಅಂತರದ ಅವಧಿ 7 ಗಂಟೆ ಮಾತ್ರ. ಇದು ನಿಧನದ ಸುದ್ದಿ ಕೇಳಿ ಆಘಾತಗೊಂಡು ನಡೆದ ಘಟನೆ ಅಲ್ಲ, ಸಹಜವಾಗಿ ನಡೆದ ಘಟನೆ.
ಯು.ಎ. ಆಚಾರ್ಯರು ರಾಣಿಬೆನ್ನೂರಿನಲ್ಲಿ ಕಾರ್ಪೊರೇಶನ್ ಬ್ಯಾಂಕ್ ಉದ್ಯೋಗಿಯಾಗಿ ಸೇರಿ ಬಳಿಕ ಆರ್‌ಬಿಐಗೆ ಸೇರ್ಪಡೆಯಾದರು. ಮುಂಬಯಿ, ದಿಲ್ಲಿ, ಜೈಪುರ, ಲಕ್ನೋದಲ್ಲಿ ಸೇವೆ ಸಲ್ಲಿಸಿದ ಆಚಾರ್ಯರು ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯ (ಐಡಿಬಿಐ) ಮತ್ತು ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯ (ಎಸ್‌ಐಡಿಬಿಐ)ದಲ್ಲಿ ಜನರಲ್ ಮೆನೇಜರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು. ಶಿಸ್ತುಬದ್ಧ ಅಧಿಕಾರಿಯಾಗಿ ಹೆಸರು ಗಳಿಸಿದ್ದರು. ನಿವೃತ್ತಿಯಾದ ಬಳಿಕ ಮಣಿಪಾಲದ ರಾಹುಲ್‌ನಗರದಲ್ಲಿ ನೆಲೆಸಿದ್ದರು. ಕೃಷಿ, ಕರ್ನಾಟಕ ಸಂಗೀತದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಯು.ಎಸ್. ಆಚಾರ್ಯರು ಸೆಂಟ್ರಲ್ ರೈಲ್ವೆ ಇಲಾಖೆಗೆ ಉದ್ಯೋಗಿಯಾಗಿ ಸೇರಿ ಬಳಿಕ ನಾಗರಿಕ ಸೇವೆಗೆ ಸೇರ್ಪಡೆಯಾದರು. ಮುಂಬಯಿಯಲ್ಲಿ ಸಹಾಯಕ ಅಕೌಂಟೆಂಟ್ ಜನರಲ್, ಮಣಿಪುರ ರಾಜ್ಯದ ಮೊದಲ ಉಪ ಅಕೌಂಟೆಂಟ್ ಜನರಲ್ ಆದರು. ಮಣಿಪುರ, ಕೇರಳ, ತಮಿಳುನಾಡು, ಕರ್ನಾಟಕ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ದಿಲ್ಲಿಯ ಕೈಗಾರಿಕ ಸಚಿವಾಲಯದಲ್ಲಿ ಸೇವೆ ಸಲ್ಲಿಸಿದ್ದರು. ಸ್ಟೇಟ್ ಟ್ರೇಡಿಂಗ್ ಕಾರ್ಪೊರೇಶನ್, ಕರ್ನಾಟಕ ಪವರ್ ಕಾರ್ಪೊರೇಶನ್ ಹಣಕಾಸು ನಿರ್ದೇಶಕ, ಬನಾರಸ್ ಹಿಂದೂ ವಿ.ವಿ. ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಮಹಾರಾಷ್ಟ್ರ ರಾಜ್ಯದ ಪ್ರಧಾನ ಅಕೌಂಟೆಂಟ್ ಜನರಲ್ ಆಗಿ ನಿವೃತ್ತಿ ಹೊಂದಿದ್ದರು.
ಬಳಿಕ ಉಡುಪಿ ಕುಂಜಿಬೆಟ್ಟಿನಲ್ಲಿ ನೆಲೆ ನಿಂತ ಆಚಾರ್ಯರು ದತ್ತಿ ಸಂಸ್ಥೆಗಳಿಗೆ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ಪರಿಸರ- ಪ್ರಾಣಿದಯಾ ಸಂಸ್ಥೆಗಳಿಗೆ ನೆರವು ನೀಡುತ್ತಿದ್ದರು. ಮೃತರು ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.