Advertisement

ಅಣ್ತಮ್ಮ ಕಿತ್ತಾಟ; ದೋಸ್ತಿ ಸರ್ಕಾರಕ್ಕೆ ಸಂಕಟ

11:23 PM Apr 24, 2019 | Team Udayavani |

ಬೆಳಗಾವಿ: ರಾಜ್ಯ ರಾಜಕಾರಣದ ಮೇಲೆ ಮತ್ತೆ ಆತಂಕದ ಕಾರ್ಮೋಡ ಮೂಡಿಸಿರುವ ಜಾರಕಿಹೊಳಿ ಸಹೋದರರು ಸತತ ಎರಡನೇ ದಿನವೂ ವಾಕ್ಸಮರ ಮುಂದುವರಿಸಿದ್ದಾರೆ. ಏಕವಚನದಲ್ಲೇ ಪರಸ್ಪರ ಟೀಕೆ ಮಾಡಿರುವ ರಮೇಶ ಹಾಗೂ ಸತೀಶ ಜಾರಕಿಹೊಳಿ, ಲೋಕಸಭೆ ಚುನಾವಣೆಯ ಮತ ಎಣಿಕೆಗೂ ಮೊದಲೇ ಸರ್ಕಾರಕ್ಕೆ ಅಪಾಯ ಎದುರಾಗುವ ಸುಳಿವು ನೀಡಿದ್ದಾರೆ.

Advertisement

“ಸತೀಶನಿಂದಲೇ ಬಂಡಾಯ ಆರಂಭವಾಗಿದ್ದು. ಅವನಿಂದ ನಾನು ಮೋಸ ಹೋದೆ’ ಎಂದು ರಮೇಶ ಜಾರಕಿಹೊಳಿ ನೇರ ವಾಗ್ಧಾಳಿ ನಡೆಸಿದರೆ, “ರಮೇಶ ಒಬ್ಬ ಬೇಜವಾಬ್ದಾರಿ ಹಾಗೂ ಬದ್ಧತೆ ಇಲ್ಲದ ಶಾಸಕ. ನನ್ನ ಮೇಲಿನ ಆರೋಪ ನಿರಾಧಾರ. ಯಾವುದೋ “ವಸ್ತು’ ಕಳೆದುಕೊಂಡಿದ್ದಕ್ಕೆ ಹತಾಶರಾಗಿದ್ದಾರೆ’ ಎಂದು ಸತೀಶ ಪ್ರತಿದಾಳಿ ನಡೆಸಿದ್ದಾರೆ.

ಸತೀಶ್‌ ವಿರುದ್ಧ ರಮೇಶ್‌ ವಾಗ್ಧಾಳಿ: ಬುಧವಾರ ಬೆಂಗಳೂರಿಗೆ ತೆರಳುವುದಕ್ಕೂ ಮುನ್ನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರಮೇಶ ಜಾರಕಿಹೊಳಿ, ನಮ್ಮಲ್ಲಿ ಭಿನ್ನಮತ ಆರಂಭಕ್ಕೆ ಸತೀಶ ಜಾರಕಿಹೊಳಿಯೇ ನೇರ ಕಾರಣ. ಅವನೊಬ್ಬ ಗೋಮುಖ ವ್ಯಾಘ್ರ. ನಾನು ಸಚಿವನಾಗಿ ಆರಾಮಾಗಿದ್ದೆ. ಮನೆಗೆ ಅಳುತ್ತ ಬಂದ ಸತೀಶ, ರಾಜಕೀಯ ಭವಿಷ್ಯದ ದೃಷ್ಟಿಯಿಂದ ಪ್ರಚೋದನೆ ಕೊಟ್ಟರು. ಅವರಿಂದಲೇ ನಾನು ಮೋಸ ಹೋದೆ. ಭಿನ್ನಮತಕ್ಕೆ ಪ್ರಚೋದನೆ ನೀಡಿದ್ದೇ ಸತೀಶ್‌ ಎಂದರು.

ಸತೀಶನದ್ದು ಮುಗಿದು ಹೋದ ಕಥೆ. ನಮ್ಮಷ್ಟಕ್ಕೆ ನೆಮ್ಮದಿಯಾಗಿದ್ದವರನ್ನು ಸತೀಶ ಪ್ರಚೋದನೆ ಮಾಡಿದ. ಇದರ ಬಗ್ಗೆ ಬೇಕಿದ್ದರೆ ಶಾಸಕ ಡಾ.ಸುಧಾಕರ ಆವರನ್ನೇ ಕೇಳಿ. ಸತೀಶ ಈಗಾಗಲೇ ಸೋಲು ಒಪ್ಪಿಕೊಂಡಿದ್ದಾರೆ. ಹತಾಶ ಭಾವನೆಯಿಂದ ಅಂಬಿರಾವ್‌ ಪಾಟೀಲ ಮೇಲೆ ಆರೋಪ ಮಾಡುತ್ತಿದ್ದಾರೆ. ಅಂಬಿರಾವ್‌ ನನ್ನ ಅಳಿಯ. ಹೀಗಾಗಿ, ಸಹಜವಾಗಿಯೇ ನನಗೆ ಆಪ್ತರು. ಅಷ್ಟನ್ನು ಬಿಟ್ಟರೆ ಬೇರೆ ಯಾವುದೇ ಮಹತ್ವ ಇಲ್ಲ. ಸತೀಶ ಹತಾಶರಾಗಿದ್ದರಿಂದ ಈ ರೀತಿ ಸುಳ್ಳು ಆರೋಪ ಮಾಡಿದ್ದಾರೆ ಎಂದರು.

ನಮ್ಮ ರಾಜೀನಾಮೆ ಬಗ್ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದು ತೋಳ ಬಂತು ತೋಳ ಮಾತು ನಿಜ. ನಾನೂ ಅದನ್ನು ಒಪ್ಪುತ್ತೇನೆ. ಒಬ್ಬನೇ ರಾಜೀನಾಮೆ ನೀಡುವುದು ಬೇಡ. ಎಲ್ಲರೂ ಕೂಡಿಕೊಂಡು ಸಾಮೂಹಿಕ ರಾಜೀನಾಮೆ ನೀಡಬೇಕು ಎಂದು ಕಾದಿದ್ದೇವೆ. ಸದ್ಯದಲ್ಲೇ ರಾಜೀನಾಮೆ ನೀಡುತ್ತೇವೆ. ರಾಜೀನಾಮೆ ನಂತರ ನಡೆಯುವ ಉಪಚುನಾವಣೆಯಲ್ಲಿ ನಾನು ಗೋಕಾಕದಿಂದ ಸ್ಪರ್ಧೆ ಮಾಡುತ್ತೇನೆ. ನಂತರ ಬರುವ ವಿಧಾನಸಭೆ ಚುನಾವಣೆಯಲ್ಲಿ ಯಮಕನಮರಡಿ ಇಲ್ಲವೇ ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಉದ್ದೇಶ ಇದೆ. ಲಖನ್‌ಗೆ ಗೋಕಾಕ ಬಿಟ್ಟುಕೊಡುತ್ತೇನೆ ಎಂದರು.

Advertisement

ಹೆಬ್ಬಾಳಕರ ಬಗ್ಗೆ ಹೇಳ್ಳೋದು ಬಹಳವಿದೆ: ತಮ್ಮ ಬಗ್ಗೆ ಹೇಳಿಕೆ ನೀಡಿರುವ ಶಾಸಕಿ ಹೆಬ್ಬಾಳಕರ ಅವರ ಬಗ್ಗೆ ಮಾತನಾಡುವುದು ಬಹಳ ಇದೆ. ಎದುರು ಬದುರು ಮಾತನಾಡಿ ಅವರ ಕುಟುಂಬ ಹಾಗೂ ನನ್ನ ಕುಟುಂಬದ ಹಿನ್ನೆಲೆಯ ಬಗ್ಗೆ ವಿವರವಾಗಿ ಹೇಳುತ್ತೇನೆ. ಬಳ್ಳಾರಿ ಜಿಲ್ಲೆಯ ಶಾಸಕ ಕಂಪ್ಲಿ ಗಣೇಶಗೆ ಜಾಮೀನು ಸಿಕ್ಕಿದ್ದು ಸಂತೋಷ. ರಾಜಕೀಯ ದುರುದ್ದೇಶದಿಂದ ಘಟನೆ ನಡೆದಿತ್ತು ಎಂದರು.

ರಮೇಶ ಡ್ರಾಮಾ ಮಾಸ್ಟರ್‌ – ಸತೀಶ: ರಮೇಶ ಜಾರಕಿಹೊಳಿ ಆರೋಪಕ್ಕೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಸತೀಶ ಜಾರಕಿಹೊಳಿ, ರಮೇಶ ಜಾರಕಿಹೊಳಿ ಹೇಳಿಕೆಯನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅವನೊಬ್ಬ ಅಪ್ಪಟ ಸುಳ್ಳುಗಾರ. ಬದ್ಧತೆ ಇಲ್ಲದ ಶಾಸಕ. ಯಾವತ್ತೂ ನುಡಿದಂತೆ ನಡೆದವನಲ್ಲ. ಅದು ಅವನ ಸ್ಪೆಷಾಲಿಟಿ ಎಂದರು.

ನಾನು ಅಳುವುದಿಲ್ಲ. ರಮೇಶನೇ ದೊಡ್ಡ ಡ್ರಾಮಾ ಮಾಸ್ಟರ್‌. ಬಹುಶ: ಯಾವುದೋ “ವಸ್ತು’ ಕಳೆದುಕೊಂಡಿದ್ದಾನೆ. ಅದಕ್ಕಾಗಿಯೇ ಈ ರೀತಿ ವರ್ತನೆ ಮಾಡುತ್ತಿದ್ದಾನೆ. ನಾನೇನು ಅವರ ಮಂತ್ರಿಗಿರಿ ಕಸಿದುಕೊಂಡಿಲ್ಲ. ನಾನು ಮೂರು ವರ್ಷ ಸಚಿವ ಸ್ಥಾನ ಇಲ್ಲದೇ ಸುಮ್ಮನಿದ್ದೆ. ರಮೇಶ ಯಾವುದೋ ವಸ್ತುವಿನ ಮೇಲಿನ ಸಿಟ್ಟನ್ನು ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ. ನಾನು ಯಾವುದೇ ಪರಿಸ್ಥಿತಿಯನ್ನು ಸವಾಲನ್ನಾಗಿ ಸ್ವೀಕರಿಸಿ ಅದನ್ನು ಎದುರಿಸುವ ಶಕ್ತಿ ಬೆಳೆಸಿಕೊಂಡಿದ್ದೇನೆ ಎಂದರು.

ಬೆಳಗಾವಿ ತಾಲೂಕಿನ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ವಿಚಾರದಲ್ಲಿ ಸಿಎಂ ನೇತೃತ್ವದಲ್ಲಿ ಭಿನ್ನಮತ ಶಮನ ಸಭೆ ನಡೆಯಿತು. ಡಿ.ಕೆ.ಶಿವಕುಮಾರ ಜಿಲ್ಲೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ರಮೇಶ ಜೊತೆ ಮಾತುಕತೆ ನಡೆದಿದ್ದು ನಿಜ. ಆದರೆ, ಮಾತುಕತೆ ನಂತರವೂ ರಮೇಶ ಭಿನ್ನಮತ ಮುಂದುವರಿಸಿದರು. ಅವನೊಬ್ಬ ಜವಾಬ್ದಾರಿ ಇಲ್ಲದ ವ್ಯಕ್ತಿ.

ಇವತ್ತು ಈ ರೀತಿ ಹೇಳುತ್ತಾನೆ, ನಾಳೆ ಮತ್ತೂಂದು ಹೇಳುತ್ತಾನೆ. ಯಮಕನಮರಡಿ ಚುನಾವಣೆಗೆ ಇನ್ನೂ ಸಾಕಷ್ಟು ಕಾಲಾವಕಾಶ ಇದೆ. ಆವಾಗ ಏನಾಗುತ್ತೋ ನೋಡೋಣ. ಸದ್ಯಕ್ಕೆ ಅದರ ಬಗ್ಗೆ ಚರ್ಚೆ ಬೇಡ. ರಮೇಶ ಮೊದಲು ಯಾವುದಾದರೂ ಒಂದು ಪಕ್ಷವನ್ನು ಆಯ್ಕೆ ಮಾಡಲಿ. ಆದರೆ, ಕಾಂಗ್ರೆಸ್‌ನಲ್ಲಿದ್ದುಕೊಂಡು ಬಿಜೆಪಿ ಪರ ಪ್ರಚಾರ ಮಾಡುವುದು ಸರಿಯಲ್ಲ. ಅವರ ರಾಜೀನಾಮೆಯಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next