Advertisement
ತಮಿಳುನಾಡಿನ ಖ್ವಾಜಾ ಮೊಹಮದ್ ಮತ್ತು ಬೆಂಗಳೂರಿನ ಮೆಹಬೂಬ್ ಪಾಷಾನ ಆಪ್ತನಾಗಿರುವ ಮನ್ಸೂರ್ ಖಾನ್ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಂಚಿನಲ್ಲಿ ಕೈಜೋಡಿಸಿದ್ದ. ಆರಂಭದಲ್ಲಿ ತಮ್ಮ ನಿಲುವುಗಳಿಗೆ ಬದ್ಧರಾಗುವ ಯುವಕರಿಗೆ ತಲಾಷೆ ನಡೆಸಿದ ಈ ತಂಡ ತಮ್ಮ ಕುಟುಂಬಗಳಿಗೆ ಸಂಬಂಧಿಕರಾದ ಯುವಕರನ್ನು ಗೊರಗುಂಟೆಪಾಳ್ಯದ ಮನ್ಸೂರ್ ಮನೆಗೆ ಕರೆಸಿಕೊಳ್ಳುತ್ತಿತ್ತು. ಸಭೆಗಳಲ್ಲಿ ಯುವಕರಿಗೆ “ಜೆಹಾದ್’ ವಿಚಾರಗಳನ್ನು ತುಂಬಿ ಮಾನಸಿಕವಾಗಿ ಅವರನ್ನು ಸಜ್ಜುಗೊಳಿಸುತ್ತಿದ್ದರು ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ. ಮನ್ಸೂರ್ ಖಾನ್ ತನ್ನ ಸ್ವಂತ ಸಹೋದರ, ಕಾರು ಚಾಲಕ ಮೊಹಮದ್ ಹನೀಫ್ ಖಾನ್‌ಗೆ ಜೆಹಾದ್ ವಿಚಾರಗಳನ್ನು ತುಂಬತೊಡಗಿದ್ದ. ಅಣ್ಣನ ಮಾತುಗಳಿಗೆ ತಲೆಯಾಡಿಸಿದ್ದ ಹನೀಫ್ ಕೆಲವೇ ದಿನಗಳಲ್ಲಿ “ಜೆಹಾದ್’ ಸಲುವಾಗಿ “ಆತ್ಮಾಹುತಿ ಬಾಂಬರ್’ ಆಗಲೂ ತಾನು ಸಿದ್ಧ ಎಂಬ ನಿಲುವಿಗೆ ಬಂದಿದ್ದ ಎಂದು ತನಿಖಾ ಮೂಲಗಳು ತಿಳಿಸಿವೆ.
ತಮಿಳುನಾಡು ಪೊಲೀಸರು ನೀಡಿದ್ದ ಸುಳಿವಿನ ಮೇರೆಗೆ ರಾಜ್ಯ ಆಂತರಿಕ ಭದ್ರತಾ ದಳ (ಐಎಸ್‌ಡಿ), ಸಿಸಿಬಿಯ ಒಂದು ತಂಡ ಖ್ವಾಜಾ ಮೊಹಮದ್‌ನ ತಂಡದ ಬಗ್ಗೆ ಮಾಹಿತಿ ಕಲೆ ಹಾಕುತ್ತಿತ್ತು. ಕೆ.ಆರ್. ಪುರದಲ್ಲಿ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹನೀಫ್ ಬಗ್ಗೆ ಬಾಯ್ಬಿಟ್ಟಿದ್ದ. ಡಿಸೆಂಬರ್ ಅಂತ್ಯದಲ್ಲಿ ಚನ್ನಪಟ್ಟಣದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಹನೀಫ್ ಭಾಗಿಯಾಗಿರುವ ಸುಳಿವಿನ ಮೇರೆಗೆ ಅಲ್ಲಿಗೆ ತೆರಳಲಾಗಿತ್ತು. ಆತನನ್ನು ಹೊರಗಡೆ ಕರೆಯಿಸಿ ವಶಕ್ಕೆ ಪಡೆಯಲಾಗಿತ್ತು.
Related Articles
ಪ್ರಮುಖ ಆರೋಪಿಗಳಾದ ಮೆಹಬೂಬ್ ಪಾಷಾ ಹಾಗೂ ಮನ್ಸೂರ್ ಖಾನ್ ಬೆಂಗಳೂರಿನಲ್ಲಿರುವ ಟ್ರಸ್ಟ್‌ವೊಂದರಲ್ಲಿ ಪ್ರಭಾವಿಗಳಾಗಿದ್ದಾರೆ. ಅದೇ ಟ್ರಸ್ಟ್ ಮೂಲಕ ಯುವಕರನ್ನು ಸೇರಿಸುತ್ತಿದ್ದರಲ್ಲದೆ ಹಣ ಸಂಗ್ರಹಿಸುತ್ತಿದ್ದರು. ಕೆಲವು ಯುವಕರನ್ನು ಮೈಂಡ್ ವಾಶ್ ಮಾಡಿ ಸಭೆಗಳಿಗೆ ಬರುವಂತೆ ನೋಡಿಕೊಳ್ಳುತ್ತಿದ್ದರು. ಸಭೆಗಳಲ್ಲಿ ಸ್ಫೋಟಕ ಕೃತ್ಯ, ಆತ್ಮಾಹುತಿ ದಾಳಿ ಮತ್ತಿತರ ವಿಚಾರಗಳನ್ನು ಹೇಳಿಕೊಡುತ್ತಿದ್ದರು ಎಂಬ ಮಾಹಿತಿಯಿದೆ.
Advertisement
- ಮಂಜುನಾಥ ಲಘುಮೇನಹಳ್ಳಿ