ಟೆಕ್ಸಾಸ್: 2018ರ ಸೆಪ್ಟಂಬರ್ ತಿಂಗಳಿನಲ್ಲಿ ಡಲ್ಲಾಸ್ ನಲ್ಲಿ ಪೊಲೀಸ್ ದೌರ್ಜನ್ಯ ಖಂಡಿಸಿ ಕಪ್ಪು ವರ್ಣೀಯರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಆ್ಯಂಬರ್ ಗೈಗರ್ ಎಂಬ ಮಹಿಳಾ ಪೊಲೀಸ್ ಅಧಿಕಾರಿ ಹಾರಿಸಿದ್ದ ಗುಂಡಿಗೆ ಬೋಥಮ್ ಜೀನ್ ಎಂಬ ವ್ಯಕ್ತಿ ಮೃತಪಟ್ಟಿದ್ದರು. ದುರಂತವೆಂದರೆ ತನ್ನ ಅಪಾರ್ಟ್ ಮೆಂಟ್ ನಲ್ಲಿ ಐಸ್ ಕ್ರೀಂ ತಿನ್ನುತ್ತಾ ಟಿವಿ ವೀಕ್ಷಣೆಯಲ್ಲಿ ನಿರತನಾಗಿದ್ದ ಬೋಥಮ್ ಮೇಲೆ ಆ ಮಹಿಳಾ ಪೊಲೀಸ್ ಅಧಿಕಾರಿ ತಪ್ಪಾಗಿ ಗುಂಡು ಹಾರಿಸಿದ್ದರು.
ಟೆಕ್ಸಾಸ್ ನ ಸ್ಥಳೀಯ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆದು ನ್ಯಾಯಾಲಯ ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ನಡೆದ ಒಂದು ಘಟನೆ ಎಲ್ಲರ ಕಣ್ಣಿನಲ್ಲೂ ನೀರು ತರಿಸಿತ್ತು. ತನ್ನ ತಪ್ಪನ್ನು ಒಪ್ಪಿಕೊಂಡ ಈ ಮಾಜೀ ಮಹಿಳಾ ಪೊಲೀಸ್ ಅಧಿಕಾರಿಗೆ ವಿಚಾರಣೆಯ ಬಳಿಕ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಈ ಸಂದರ್ಭದಲ್ಲಿ ಅಚಾನಕ್ ಆಗಿ ನಡೆದ ಆ ಘಟನೆಯಲ್ಲಿ ಮೃತ ಬೋಥಮ್ ನ ಸಹೋದರ ಬ್ರ್ಯಾಂಟ್ ಜೀನ್ ನ್ಯಾಯಾಧೀಶರ ಮುಂದೆ ಕೋರಿಕೆಯೊಂದನ್ನು ಇಟ್ಟು, ತನ್ನ ಸಹೋದರನನ್ನು ಕೊಂದ ಈಕೆಯನ್ನು ಒಮ್ಮೆ ತಬ್ಬಿಕೊಳ್ಳಲು ಅವಕಾಶ ನೀಡುವಂತೆ ಕೋರಿಕೊಳ್ಳುತ್ತಾನೆ. ಈತನ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶೆ ಟ್ಯಾಮಿ ಕೆಂಪ್ ಅವರು ಬ್ರ್ಯಾಂಟ್ ಗೆ ಗೈಗರ್ ಅನ್ನು ತಬ್ಬಿಕೊಳ್ಳಲು ಅನುಮತಿ ನೀಡುತ್ತಾರೆ. ಈ ಸಂದರ್ಭದಲ್ಲಿ ನ್ಯಾಯಾಧೀಶರ ಸಹಿತ ಅಲ್ಲಿದ್ದವರ ಕಣ್ಣಾಲಿಗಳು ತೇವಗೊಂಡಿತ್ತು.
ಮಾಜೀ ಪೊಲೀಸ್ ಅಧಿಕಾರಿಯನ್ನು ತಬ್ಬಿಕೊಳ್ಳುವುದಕ್ಕೂ ಮೊದಲು ಮಾತನಾಡಿದ್ದ ಬ್ರ್ಯಾಂಟ್,
‘ನಾನು ನಿಮ್ಮನ್ನು ಕ್ಷಮಿಸುತ್ತೇನೆ, ಮತ್ತು ನನ್ನ ಸಹೋದರನೂ ನಿಮ್ಮನ್ನು ಕ್ಷಮಿಸಿರುತ್ತಾನೆ. ನೀವು ಜೈಲಿಗೆ ಹೋಗಬೇಕೆಂದು ನಾನು ಬಯಸುವುದಿಲ್ಲ, ಒಬ್ಬ ವ್ಯಕ್ತಿಯಾಗಿ ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನಿಮಗೆ ಕೆಟ್ಟದ್ದಾಗಲಿ ಎಂದೂ ನಾನು ಬಯಸುವುದಿಲ್ಲ’ ಎಂದು ಹೇಳಿ ಆ್ಯಂಬರ್ ಅವರನ್ನು ನಾನೊಮ್ಮೆ ತಬ್ಬಿಕೊಳ್ಳಬಹುದೇ ಪ್ಲೀಸ್.. ಪ್ಲೀಸ್..’ ಎಂದು ಬ್ರ್ಯಾಂಟ್ ನ್ಯಾಯಾಲಯದ ಮುಂದೆ ಮನವಿ ಮಾಡಿಕೊಳ್ಳುತ್ತಾರೆ.
ನ್ಯಾಯಾಧೀಶರ ಅಪ್ಪಣೆ ಪಡೆದು ಬ್ರ್ಯಾಂಟ್ ಜೀನ್ ಅವರು ಗೈಗರ್ ಅವರನ್ನು ಅಪ್ಪಿಕೊಳ್ಳುತ್ತಿದ್ದಂತೆ ಈ ಮಾಜೀ ಪೊಲೀಸ್ ಅಧಿಕಾರಿ ಬಿಕ್ಕಿ ಬಿಕ್ಕಿ ಅಳಲಾರಂಭಿಸುತ್ತಾರೆ. ಇದೆಲ್ಲವೂ ವಿಡಿಯೋದಲ್ಲಿ ದಾಖಲುಗೊಂಡಿದೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು ಬ್ರ್ಯಾಂಟ್ ಜೀನ್ ಅವರ ಈ ಜೀವ ಪ್ರೀತಿಯ ಕಳಕಳಿಗೆ ಸಾಮಾಜಿಕ ಜಾಲತಾಣಗಳಲ್ಲೂ ಸಹ ಭಾರೀ ಪ್ರಶಂಸೆ ವ್ಯಕ್ತವಾಗಿದೆ.