ವಿಜಯಪುರ: ಪ್ರೀತಿಸಿ ಓಡಿಹೋದರೆಂಬ ಕಾರಣಕ್ಕೆ ದಲಿತ ಸಮುದಾಯಕ್ಕೆ ಸೇರಿದ ಯುವಕನ ತಂದೆ ಹಾಗೂ ತಮ್ಮನನ್ನು ಮರಕ್ಕೆ ಕಟ್ಟಿ ಹಾಕಿ ಅನ್ಯಕೋಮಿನ ಯುವತಿ ಮನೆಯವರು ಥಳಿಸಿದ ಘಟನೆ ಜಿಲ್ಲೆಯ ಹಾಳಗುಂಡಕನಾಳ ಗ್ರಾಮದಲ್ಲಿ ನಡೆದಿದೆ. ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಸಿಂದಗಿ ತಾಲೂಕು ಹಾಳಗುಂಡಕನಾಳ ಗ್ರಾಮದ ಮರಿಯಪ್ಪ ಹರಿಜನ ಎಂಬುವರ ಮಗ ನಿಂಗಪ್ಪ ಗ್ರಾಮದ ಅನ್ಯಕೋಮಿನ ಯುವತಿಯನ್ನು ಪ್ರೀತಿಸಿ ಕರೆದೊಯ್ದಿದ್ದಾನೆ ಎಂಬ ಸಂಗತಿ ಘಟನೆಗೆ ಕಾರಣ. ಯುವತಿ 15 ದಿನಗಳಿಂದ ಕಾಣೆಯಾಗಿದ್ದು, ಯುವಕ ನಿಂಗಪ್ಪ ಗ್ರಾಮದಲ್ಲೇ ಇದ್ದ. ಕೆಲವು ದಿನಗಳ ಬಳಿಕ ಆತನೂ ನಾಪತ್ತೆಯಾಗಿದ್ದ.
ಈ ಹಂತದಲ್ಲಿ ಯುವತಿ ಮನೆಯವರು, ತಮ್ಮ ಮಗಳನ್ನು ತಂದೊಪ್ಪಿಸುವಂತೆ ತಾಕೀತು ಮಾಡಿದ್ದರು. ಜೂ. 25ರಂದು ಹೊಲದಿಂದ ಚಹಾ ಕುಡಿಯಲೆಂದು ಮರಿಯಪ್ಪ ಮನೆಗೆ ಬಂದಿದ್ದಾಗ ಕೆಲವರು ಅವರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದರು. ಈ ವೇಳೆ ಸುದ್ದಿ ತಿಳಿದು ಧಾವಿಸಿ ಬಂದ ಮರಿಯಪ್ಪನ ಕಿರಿಯ ಮಗ ರಮೇಶನನ್ನೂ ಕಂಬಕ್ಕೆ ಕಟ್ಟಿ ಹೊಡೆದಿದ್ದಾರೆ. ಘಟನೆ ತಿಳಿದ ಕಲಕೇರಿ ಪೊಲೀಸರು ಇಬ್ಬರನ್ನೂ ಬಿಡಿಸಿ, ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ, ತೀವ್ರವಾಗಿ ಗಾಯಗೊಂಡಿರುವ ಮರಿಯಪ್ಪನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಥಳಿತದ ದೃಶ್ಯಾವಳಿಗಳು ಜೂ. 28ರಂದು ಬೆಳಕಿಗೆ ಬಂದಿದ್ದು, ಜಿಲ್ಲಾಸ್ಪತ್ರೆಗೆ ತೆರಳಿದ ಕಲಕೇರಿ ಎಎಸ್‌ಐ ಬಾಧಿತರಿಂದ ಮಾಹಿತಿ ಪಡೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸ್ಪಿ ಕುಲದೀಪ್ ಜೈನ್, ದೂರು ದಾಖಲಿಸಲು ವಿಳಂಬವಾಗಿಲ್ಲ. ಬಾಧಿತರು ಚಿಕಿತ್ಸೆ ಪಡೆದು ಬಂದ ನಂತರ ದೂರು ನೀಡುವುದಾಗಿ ತಿಳಿಸಿದ್ದರಿಂದ ದೂರು ದಾಖಲಿಸಲು ವಿಳಂಬವಾಗಿದೆ. ಬುಧವಾರ ಘಟನೆಗೆ ಸಂಬಂಧಿಸಿದಂತೆ 7 ಜನರ ವಿರುದ್ಧ ದೂರು ದಾಖಲಾಗಿದ್ದು, ಅಲ್ಲಾಭಕ್ಷ, ಅಮೀನಸಾಬ್, ಬಾಬು ಮುಶಾಕ್ ಎಂಬುವರನ್ನು ಬಂಧಿಸಲಾಗಿದೆ ಎಂದಿದ್ದಾರೆ.