ಹೊಸಪೇಟೆ: “ಅಣ್ಣಾ…ಅಣ್ಣಾ… ಎಂದು ನನ್ನ ಬೆನ್ನಿಗೆ ಚೂರಿ ಹಾಕಿರುವ ಆನಂದಸಿಂಗ್, ನನ್ನಿಂದ ಸಹಾಯ ಪಡೆದು ಬಿಜೆಪಿಗೆ ಹಾರಿದ್ದಾರೆ’ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ತಾಲೂಕಿನ ಕಮಲಾಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ, ನಾನು ತಿನ್ನುವ ಒಂದೊಂದು ಅಕ್ಕಿ ಮೇಲೆ ನಿನ್ನ ಹೆಸರಿದೆ ಅಣ್ಣ, ಎಂದು ನನ್ನಿಂದ ಸಹಾಯ ಪಡೆದು ನನ್ನ ಬೆನ್ನಿಗೆ ಚೂರಿ ಹಾಕಿದರೆಂದರು.
ಆನಂದಸಿಂಗ್ ಬಿಜೆಪಿಯಿಂದ ಎರಡು ಬಾರಿ ಆಯ್ಕೆಯಾದ ಸಂದರ್ಭದಲ್ಲಿ ವಿಜಯನಗರ ಜಿಲ್ಲೆ ಹಾಗೂ ಕ್ಷೇತ್ರದ ಅಭಿವೃದ್ಧಿ ಏಕೆ ಮಾಡಲಿಲ್ಲ. ಬಿಜೆಪಿಗೆ ಹಾರಿದ ಆನಂದ್ ಸಿಂಗ್ ಮತ್ತೆ ನಿಮ್ಮೆದುರಿಗೆ ಬಂದಿದ್ದಾರೆ. ಕೈ ಬಿಟ್ಟು, ಕಮಲ ಹಿಡಿದ್ದಾರೆ. ಗಣಿಗಾರಿಕೆ ಲೂಟಿ ಹಣ ನಿಮಗೆ ನೀಡಲು ಬರಲಿದ್ದು, ಅವರ ಆಮಿಷಕ್ಕೆ ಬಲಿಯಾಗಿ ಮತ ನೀಡಬೇಡಿ ಎಂದರು.
ಸಿಎಂ ಯಡಿಯೂರಪ್ಪ ಪ್ರತಿ ಕ್ಷೇತ್ರಕ್ಕೆ 50 ಕೋಟಿ ರೂ. ಹಣ ಸಂಗ್ರಹಿಸಿ ಚುನಾವಣೆ ನಡೆಸುತ್ತಿದ್ದಾರೆ. ಬಿಜೆಪಿ ಸರ್ಕಾರ ರಚನೆಗಾಗಿ ತ್ಯಾಗ ಮಾಡಿರುವ ಅನರ್ಹ ಶಾಸಕರಿಗಾಗಿ ಯಾವುದೇ ತ್ಯಾಗ-ಪ್ರಾಣ ಕೊಡುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಒಂದೊಮ್ಮೆ ದೀನ-ದಲಿತ ಹಾಗೂ ಬಡವರ ಸಮಸ್ಯೆಗಳ ನಿವಾರಣೆಗಾಗಿ ಪ್ರಾಣ ನೀಡುವುದಾಗಿ ಹೇಳಿದ್ದರೆ, ನಾನು ಅವರಿಗೆ ದೀರ್ಘದಂಡ ನಮಸ್ಕಾಾರ ಹಾಕುತ್ತಿದ್ದೆ ಎಂದರು.
ಚುನಾವಣೆಯಲ್ಲಿ ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್ ಹೇಳಿದ ಪರಿಣಾಮ ನಮ್ಮ ಪಕ್ಷಕ್ಕೆ ಹಿನ್ನಡೆಯಾಯಿತು. ಇಲ್ಲವಾದರೆ 45 ಸೀಟು ಗೆಲ್ಲುತ್ತಿದ್ದೆವು. ಸಮ್ಮಿಶ್ರ ಸರ್ಕಾರದಲ್ಲಿ ತಾನು ಸಾಕಷ್ಟು ಹಿಂಸೆ, ಕಷ್ಟ ಅನುಭವಿಸಿದ್ದೇನೆ. ರೈತರ ಸಾಲ ಮನ್ನಾಕ್ಕೆ ಪ್ರಯತ್ನ ಪಟ್ಟಾಗ ಕಾಂಗ್ರೆಸ್ ನಾಯಕರು ಸಮನ್ವಯ ಸಮಿತಿಯಲ್ಲಿ ಒಪ್ಪಿಗೆ ಕೊಡಲಿಲ್ಲ. ಆದರೂ, ಕೇವಲ 14 ತಿಂಗಳ ಅವಧಿಯಲ್ಲಿ 26 ಲಕ್ಷ ಕುಟುಂಬಗಳ ರೈತರ ಸಾಲ ಮನ್ನಾ ಮಾಡಿದ್ದೇನೆಂದರು.