Advertisement

ಹಳ್ಳ ಆಗಿದೆ ತ್ಯಾಜ್ಯದ ಗುಡ್ಡೆ

03:37 PM Aug 20, 2017 | Team Udayavani |

ಮಸ್ಕಿ: ಜಲ, ವಾಯು ಮತ್ತು ಪರಿಸರ ಮಾಲಿನ್ಯವಾಗದಂತೆ ಕ್ರಮ ಕೈಗೊಳ್ಳಬೇಕಾದ ಪುರಸಭೆಯೇ ಪಟ್ಟಣದ ಹೃದಯ ಭಾಗದಲ್ಲಿನ ಹಳ್ಳದಲ್ಲಿ ತ್ಯಾಜ್ಯಗಳ ಗುಡ್ಡೆ ಹಾಕಿ ನೀರು ಕಲುಷಿತವಾಗುವಂತೆ ಮಾಡುತ್ತಿದೆ. ಪಟ್ಟಣದಲ್ಲಿ ಮನೆ, ಅಂಗಡಿ, ಹೋಟೆಲ್‌ ಗಳಿಂದ ನಿತ್ಯ ಸುಮಾರು 4 ಟನ್‌ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಇದನ್ನು ತಂದು ಪುರಸಭೆ ಹಳ್ಳದಲ್ಲಿ ಗುಡ್ಡೆ ಹಾಕಲಾಗುತ್ತಿದೆ. ಒಂದು ವೇಳೆ ಮಳೆಬಂದು ಹಳ್ಳ ಹರಿದರೆ ತ್ಯಾಜ್ಯವೆಲ್ಲ ಕೊಚ್ಚಿಕೊಂಡು ಹೋಗಿ ಹಳ್ಳದ ನೀರು ಕಲುಷಿತವಾಗುತ್ತದೆ. ತ್ಯಾಜ್ಯ ಸಂಗ್ರಹಿಸುವ ಸ್ಥಳದ ಹಿಂಬದಿ ಸರ್ಕಾರಿ ಶಾಲೆ ಇದೆ. ತ್ಯಾಜ್ಯದಿಂದ
ಹೊರಸೂಸುವ ದುರ್ವಾಸನೆಯಿಂದ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಪರದಾಡುವಂತಾಗಿದೆ. ಅಲ್ಲದೇ ತ್ಯಾಜ್ಯ ಸಂಗ್ರಹ ಸ್ಥಳದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು ಜನರು ಸಂಚರಿಸಲು ಭಯಪಡುವಂತಾಗಿದೆ.
ನಿರುಪಯುಕ್ತ ಪ್ಲಾಸ್ಟಿಕ್‌: ತ್ಯಾಜ್ಯದಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌, ಹಾಳೆ, ತಟ್ಟೆ, ಲೋಟಗಳೇ ಅಧಿಕ ಕಂಡುಬರುತ್ತಿವೆ. ಕಸದ ರಾಶಿಯತ್ತ ಬರುವ ಜಾನುವಾರುಗಳು ಇವುಗಳನ್ನೇ ತಿನ್ನುವುದು ಸಾಮಾನ್ಯವಾಗಿದೆ. ರೋಗ ಭೀತಿ: ಕಸದ ರಾಶಿಯಿಂದಾಗಿ ಸೊಳ್ಳೆ ಹಾವಳಿ ಹೆಚ್ಚಿದೆ. ಜನರಲ್ಲಿ ಸಾಂಕ್ರಾಮಿಕ ಕಾಯಿಲೆಗಳ ಭೀತಿ ಹೆಚ್ಚಿದೆ. ಈಗಾಗಲೇ ಪಟ್ಟಣದಲ್ಲಿ ಡೆಂಘೀ, ಚಿಕೂನ್‌ ಗುನ್ಯಾದಂತಹ ಕಾಯಿಲೆಗಳು ಕಾಣಿಸಿಕೊಂಡಿವೆ. ಒಂದು ವೇಳೆ ಜಾಸ್ತಿ ಮಳೆಯಾದರೆ ಹಳ್ಳದಲ್ಲಿ ನೀರು ಹರಿದು ಬಂದು ನೀರು ಮಲೀನವಾಗುತ್ತದೆ. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ರೋಗಗಳು ಹೆಚ್ಚಾಗುವ ಲಕ್ಷಣಗಳಿವೆ. ಪಟ್ಟಣದಲ್ಲಿ ಸರಿಯಾದ ರೀತಿಯಲ್ಲಿ ಕಸವಿಲೇವಾರಿಯಾಗುತ್ತಿಲ್ಲ. ಮಳೆ ಬಂದಾಗ ಕೆಲ ಬಡಾವಣೆಗಳಲ್ಲಿನ ಕಸ ಚರಂಡಿಗಳಲ್ಲಿ ಹೋಗಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ. ಇನ್ನಾದರೂ ಪುರಸಭೆ ಅಧಿಕಾರಿಗಳು ಎಚ್ಚೆತ್ತು ಸಮರ್ಪಕವಾಗಿ ಕಸ ವಿಲೇವಾರಿ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next