Advertisement

ಕಲಾಗ್ರಾಮದಲ್ಲಿ ಕನ್ನಡಾಂಬೆಯ ಕಂಚಿನ ಪ್ರತಿಮೆ: ಭುವನೇಶ್ವರಿಯ ನಿತ್ಯಾರ್ಚನೆ

06:18 PM Jul 25, 2022 | Team Udayavani |

ಬೆಂಗಳೂರು : ನಾಡ ದೇವಿ ಕನ್ನಡ ಭುವನೇಶ್ವರಿಯ ನಿತ್ಯ ಅರ್ಚನೆಗೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಈಗ ಇನ್ನೊಂದು ವಿನೂತನ ಯೋಜನೆ ರೂಪಿಸಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭುವನೇಶ್ವರಿಯ ಬೃಹತ್ ಕಂಚಿನ ಪ್ರತಿಮೆ ನಿರ್ಮಾಣಕ್ಕೆ‌‌‌‌ ತೀರ್ಮಾನಿಸಿದೆ.

Advertisement

ಬೆಂಗಳೂರಿನ ಜ್ಞಾನಭಾರತಿಯಲ್ಲಿರುವ ಕಲಾಗ್ರಾಮದಲ್ಲಿ ಸುಮಾರು ಅರ್ಧ ಎಕರೆಯಷ್ಟು ಪ್ರದೇಶದಲ್ಲಿ ಭುವನೇಶ್ವರಿಯ‌‌ ಕಂಚಿನ ಪ್ರತಿಮೆ‌ ನಿರ್ಮಾಣಕ್ಕೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ನಿರ್ದೇಶನ ನೀಡಿದ್ದಾರೆ.

ತಜ್ಞರು ಅಂಗೀಕರಿಸಿದ ಕನ್ನಡತಾಯಿ ಭುವನೇಶ್ವರಿ ವಿಗ್ರಹವನ್ನೇ ಇಲ್ಲಿ ಸ್ಥಾಪಿಸಲಾಗುತ್ತದೆ. ವಿಗ್ರಹ ನಿರ್ಮಾಣದ ಜವಾಬ್ದಾರಿಯನ್ನು ಕರ್ನಾಟಕ ಶಿಲ್ಪಕಲಾ ಅಕಾಡೆಮಿಗೆ ನೀಡಲಾಗಿದೆ.

ಹೇಗಿರಲಿದೆ ವಿಗ್ರಹ
ರಾಜ್ಯದ ಇತಿಹಾಸದಲ್ಲೇ‌ ಇದೇ‌ ಮೊದಲ ಬಾರಿಗೆ ಭುವನೇಶ್ವರಿಯ ಬೃಹತ್ ವಿಗ್ರಹ ನಿರ್ಮಾಣಕ್ಕೆ ಸರಕಾರವೇ ಚಾಲನೆ ನೀಡುತ್ತಿದೆ. ಸುಮಾರು ಮೂವತ್ತು ಅಡಿ ಎತ್ತರದ ಕಂಚಿನ ವಿಗ್ರಹ ಇದಾಗಿರಲಿದ್ದು, ಹತ್ತು ಅಡಿ ಎತ್ತರದ ವೈಭವದ ಪೀಠದಲ್ಲಿ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ. ಇದರ ಜತೆಗೆ ನಾಡಿನ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಚಿತ್ರಣವೂ ಇಲ್ಲಿರುತ್ತದೆ.

ವಿಗ್ರಹ ರಚನೆ ಹಾಗೂ ಸ್ಥಳ‌ನಿರ್ಮಾಣ ಪೂರ್ಣಗೊಳಿಸುವುದಕ್ಕೆ ಮೂರು ತಿಂಗಳು ಕಾಲ‌ಮಿತಿ ನೀಡಲಾಗಿದೆ.ಸಂಕ್ರಾತಿಯೊಳಗೆ ವಿಗ್ರಹ‌ ನಿರ್ಮಾಣ ಕಾರ್ಯ‌ಪೂರ್ಣಗೊಳಿಸುವಂತೆ ಸೋಮವಾರ ನಡೆದ ಇಲಾಖಾ ಸಭೆಯಲ್ಲಿ ಸಚಿವ ಸುನಿಲ್ ಕುಮಾರ್ ಸೂಚನೆ ನೀಡಿದ್ದಾರೆ. ನವೆಂಬರ್ ತಿಂಗಳಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಂದ ಈ ಯೋಜನೆಗೆ ಚಾಲನೆ ಕೊಡಿಸಲು‌ ತೀರ್ಮಾನಿಸಲಾಗಿದೆ.

Advertisement

ಏಕೆ ಈ ಪ್ರಸ್ತಾಪ ?
ರಾಜ್ಯದಲ್ಲಿ ಅನೇಕ ಗಣ್ಯರು ಹಾಗೂ ಸಾಮಾಜಿಕ ಹೋರಾಟಗಾರರ ಪುತ್ಥಳಿ ಹಾಗೂ ಪ್ರತಿಮೆಗಳು ಇವೆ. ಕನ್ನಡಾಂಬೆಯ ವಿಗ್ರಹವನ್ನು ಸರಕಾರ ನಿರ್ಮಿಸಿಲ್ಲ.‌ ಈ ಹಿನ್ನೆಲೆಯಲ್ಲಿ ಪ್ರತಿಮೆ ನಿರ್ಮಾಣಕ್ಕೆ ತೀರ್ಮಾನಿಸಲಾಗಿದ್ದು, ಸಚಿವ ಸುನಿಲ್ ಕುಮಾರ್ ಅವರ ವಿನೂತನ ಚಿಂತನೆಯ ಫಲವಾಗಿ ಚಾಲನೆ ದೊರಕಿದೆ.

ಇದರಿಂದ ಕಲಾಗ್ರಾಮ ನಗರದ ಪ್ರಮುಖ ಪ್ರವಾಸಿ ತಾಣವಾಗಿಯೂ ಅಭಿವೃದ್ಧಿಯಾಗಲಿದೆ. ಇಲ್ಲಿ‌ ಸ್ಥಾಪನೆಯಾಗಿರುವ ಸುಸಜ್ಜಿತ ಆಡಿಟೋರಿಯಂ ನಲ್ಲಿ‌ ಪ್ರತಿ ದಿನವೂ ಕಾರ್ಯಕ್ರಮ ಆಯೋಜನೆ ಮಾಡುವುದಕ್ಕೆ‌ ಯೋಜನೆ ರೂಪಿಸುವಂತೆ ಸುನಿಲ್ ಕುಮಾರ್ ಸೂಚನೆ ನೀಡಿದ್ದಾರೆ.

ಕನ್ನಡ ತಾಯಿ ಭುವನೇಶ್ವರಿಯ ವಿಗ್ರಹವನ್ನು ಸರಕಾರದ ವತಿಯಿಂದ ಇದುವರೆಗೆ ಎಲ್ಲಿಯೂ ನಿರ್ಮಿಸಿಲ್ಲ. ಈ ಹಿನ್ನೆಲೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದೇವೆ. ಮೂರು ತಿಂಗಳಲ್ಲಿ ಪ್ರತಿಮೆ‌ ನಿರ್ಮಾಣ ಕಾರ್ಯ ಪೂರ್ಣಗೊಳಿಸುವುದಕ್ಕೆ ಸೂಚನೆ‌ ನೀಡಿದ್ದೇನೆ.
ವಿ.ಸುನಿಲ್ ಕುಮಾರ್, ಕನ್ನಡ-ಸಂಸ್ಕೃತಿ ಮತ್ತು ಇಂಧನ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next