Advertisement

ಅನಿಲ ಭಾಗ್ಯದಲ್ಲಿ ದಲ್ಲಾಳಿಗಳಿಗೆ ಅವಕಾಶ ಬೇಡ

04:42 PM Jan 25, 2018 | Team Udayavani |

ಕೋಲಾರ: ಸರ್ಕಾರದ ಜನೋಪಯೋಗಿ ಅನಿಲ ಭಾಗ್ಯ ಯೋಜನೆ ಅನುಷ್ಠಾನದಲ್ಲಿ ದಲ್ಲಾಳಿಗಳಿಗೆ ಅವಕಾಶ ನೀಡದೇ ಆಹಾರ ಇಲಾಖೆ ಅಧಿಕಾರಿಗಳೇ ಫ‌ಲಾನುಭವಿಗಳಿಗೆ ನೇರವಾಗಿ ಸೌಲಭ್ಯ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ತಾಕೀತು ಮಾಡಿದರು. ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.  

Advertisement

ಸಚಿವರ ಅನುಮೋದನೆ: ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಡಿ ಫ‌ಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಅನುಮೋದನೆಗೆ ಕಳುಹಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು. 

ಅಧಿಕಾರಿಗಳ ವಿರುದ್ಧ ಕ್ರಮ: ಇಂತಹ ಜನಪರ ಯೋಜನೆಗಳು ಸರ್ಕಾರದಿಂದ ಅನುಷ್ಠಾನ ವಾಗುತ್ತಿದೆ ಎಂದ ತಕ್ಷಣ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಮಧ್ಯವರ್ತಿಗಳು ಸೃಷ್ಟಿಯಾಗುತ್ತಾರೆ. ಅವರು ಫ‌ಲಾನುಭವಿಗಳ ಮನೆಗೆ ಹೋಗಿ ಅವರಿಂದ ಹಣ ಪಡೆದುಕೊಂಡು ವಂಚಿಸಿರುವ ಪ್ರಕರಣಗಳನ್ನು ಸಾಕಷ್ಟು ನೋಡಿದ್ದೇವೆ. ಇದರಲ್ಲಿ ಯಾವುದೇ ದೂರುಗಳು ಕೇಳಿ ಬಂದರೆ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಫ‌ಲಾನುಭವಿ ಮನೆಗೇ ಆಯ್ಕೆ ಅರ್ಜಿ: ಆಹಾರ ಇಲಾಖೆ ಉಪನಿರ್ದೇಶಕ ದೇವಯ್ಯ ಮಾತನಾಡಿ, ನ್ಯಾಯಬೆಲೆ ಅಂಗಡಿಗಳಲ್ಲಿ ಸೀಮೆ ಎಣ್ಣೆ ಖರೀದಿ ಮಾಡುವ ವ್ಯಕ್ತಿಗಳು ಸಿಲಿಂಡರ್‌ ಉಪಯೋಗಿಸುತ್ತಿಲ್ಲ. ಈ ಕುರಿತು ಖಚಿತ ಮಾಹಿತಿ ಪಡೆದು ಫ‌ಲಾನುಭವಿಗಳನ್ನು ಗುರುತಿಸಲಾಗಿದ್ದು, ಮುಖ್ಯಮಂತ್ರಿಗಳ ಕಚೇರಿಯಿಂದಲೇ ಫ‌ಲಾನುಭವಿಗಳ ಆಯ್ಕೆ ಅರ್ಜಿ ಮನೆಗೇ ಸೇರುತ್ತದೆ ಎಂದು ತಿಳಿಸಿದರು.

ಶೀಘ್ರವೇ ಫ‌ಲಾನುಭವಿಗಳ ಆಯ್ಕೆ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 19,610 ಫ‌ಲಾನುಭವಿಗಳನ್ನು ಗುರುತಿಸಲು ಗುರಿ ಹೊಂದಲಾಗಿತ್ತು. ಈಗ 16,046 ಮಂದಿ ಆಯ್ಕೆಯಾಗಿದ್ದು, ಬಾಕಿ ಇರುವ ಫ‌ಲಾನುಭವಿಗಳ ಆಯ್ಕೆ ಅತೀ ಶೀಘ್ರವೇ ಮುಗಿಸಲಾಗುವುದೆಂದು ಹೇಳಿದರು. 

Advertisement

 ಪ್ರತಿ ಫ‌ಲಾನುಭವಿಗೆ 4,040ರೂ.: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೂ ಸಹ ಯೋಜನೆಯಡಿ ಫ‌ಲಾನುಭವಿಗಳ ಬಗ್ಗೆ ಮಾಹಿತಿ ನೀಡಲು ಸರ್ಕಾರ ಜವಾಬ್ದಾರಿ ನೀಡಿದೆ. ಫ‌ಲಾನುಭವಿ ಮನೆಗೆ ಭೇಟಿ ಪರಿಶೀಲನೆ ನಡೆಸಿ ಇಲಾಖೆಗೆ ಮಾಹಿತಿ ನೀಡುತ್ತಾರೆ. ಪ್ರತಿ ಫ‌ಲಾನುಭವಿಗೆ ಒಟ್ಟು 4,040ರೂ. ವಿತರಿಸಲಾಗುತ್ತಿದ್ದು, ಈ ಪೈಕಿ ಸಿಲಿಂಡರ್‌ಗೆ 1,450 ರೂ., ರೆಗ್ಯೂಲೇಟರ್‌ಗೆ 150 ರೂ., ಪೈಪ್‌ಗೆ 190ರೂ., ಬುಕ್‌ಗೆ 50ರೂ., ಬಾಡಿಗೆ 100ರೂ., ಸ್ಟೌವ್‌ಗೆ 1,000ರೂ. ಹಾಗೂ ರಿμಲ್ಸ್‌ಗೆ 1,100 ರೂ.ನೀಡಲಾಗುವುದೆಂದು ತಿಳಿಸಿದರು.

ಸೀಮೆ ಎಣ್ಣೆ ಬಳಕೆದಾರರ ಕೈಬಿಡಿ: ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಯೋಜನೆ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ವ್ಯಾಪಕ ಪ್ರಚಾರ ನಡೆಸಬೇಕು. ಪ್ರತಿ ನ್ಯಾಯಬೆಲೆ ಅಂಗಡಿ ಬಳಿ ಯೋಜನೆಗೆ ಸಂಬಂಧಿಸಿದ ಮಾಹಿತಿ ಅಂಟಿಸಬೇಕು. ಸಿಲಿಂಡರ್‌ ಹೊಂದಿದ್ದರೂ ಕೆಲ ವ್ಯಕ್ತಿಗಳು ಸೀಮೆ ಎಣ್ಣೆ ಉಪಯೋಗಿಸುತ್ತಾರೆ. ಅಂತಹವನ್ನು
ಪಟ್ಟಿಯಿಂದ ಕೈಬಿಡಬೇಕೆಂದು ಸೂಚನೆ ನೀಡಿದರು.

ಗ್ಯಾಸ್‌ ಸಿಲಿಂಡರ್‌ ಉಪಯೋಗಿಸದ ಅರಣ್ಯ ಅಂಚಿನ ವಾಸಿಗಳಿಗೆ ಅರಣ್ಯ ಇಲಾಖೆಯವರೇ ಸೌಲಭ್ಯ ಕಲ್ಪಿಸಬೇಕು. ವಾರದೊಳಗೆ ಬಾಕಿ ಇರುವ ಫ‌ಲಾನುಭವಿಗಳ ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಬೇಕು. ಯೋಜನೆಯಡಿ ಫ‌ಲಾನುಭವಿಗೆ ಸೌಲಭ್ಯ ಕಲ್ಪಿಸುವ ಏಜೆನ್ಸಿಗಳಿಗೆ ಮುಂಚೆಯೇ ಎಚ್ಚರಿಕೆ ನೀಡಬೇಕೆಂದು ಡೀಸಿ ಸೂಚಿಸಿದರು.

ಮುಖ್ಯಮಂತ್ರಿಗಳ ಕಚೇರಿಯಿಂದ ಅನಿಲ ಯೋಜನೆ ಫ‌ಲಾನುಭವಿಗಳ ಪಟ್ಟಿ ಬರುವುದರಿಂದ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿ ಹೆಚ್ಚಿರುತ್ತದೆ. ಪ್ರತಿ ಸೇವಾ ಕೇಂದ್ರ, ನ್ಯಾಯಬೆಲೆ ಅಂಗಡಿ ಹಾಗೂ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಯೋಜನೆಗೆ ಸಂಬಂಧಪಟ್ಟಂತೆ ಕಡ್ಡಾಯವಾಗಿ ಮಾಹಿತಿ ಪಟ್ಟಿ ಹಾಕಬೇಕು.
„ ಬಿ.ಬಿ.ಕಾವೇರಿ, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next