Advertisement

ರಫೇಲ್‌ನಲ್ಲೂ ಮೈಕೆಲ್‌

12:30 AM Jan 10, 2019 | |

ಸೋಲಾಪುರ/ಆಗ್ರಾ: ಬಹುಕೋಟಿ ಮೌಲ್ಯದ ವಿವಿಐಪಿ ಕಾಪ್ಟರ್‌ ಡೀಲ್‌ನ ದಲ್ಲಾಳಿ ಕ್ರಿಶ್ಚಿಯನ್‌ ಮೈಕೆಲ್‌ಗ‌ೂ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಧ್ಯೆ ಯಾವ ಸಂಬಂಧವಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. ಮಹಾರಾಷ್ಟ್ರದ ಸೋಲಾಪುರದಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಅವರು ಮಾತನಾಡಿದ್ದಾರೆ.   ರಫೇಲ್‌ನ ಪ್ರತಿಸ್ಪರ್ಧಿ ಯೂರೋಫೈಟರ್‌ ಪರವೂ ಮೈಕೆಲ್‌ ಲಾಬಿ ನಡೆಸಿದ್ದ ಎಂಬುದು ಜಾರಿ ನಿರ್ದೇಶನಾಲಯದ ತನಿಖೆ ವೇಳೆ ಬೆಳಕಿಗೆ ಬಂದಿತ್ತು ಎಂದಿದ್ದಾರೆ ಪ್ರಧಾನಿ. ಮೈಕೆಲ್‌ ಮಾಮ ಇತರ ಕಂಪನಿಗಳ ಪರವೂ ಲಾಬಿ ನಡೆಸಿದ್ದ. ಈಗ ರಫೇಲ್‌ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುವ ಕಾಂಗ್ರೆಸ್‌ ನಾಯಕರೇ ಈಗ ಹೇಳಿ, ಮೈಕೆಲ್‌ ಮಾಮನ ಜೊತೆ ನಿಮ್ಮ ಸಂಬಂಧ ಹೇಗಿತ್ತು? ಈ ಬಗ್ಗೆ ಚೌಕಿದಾರ ಅವನ್ನು ಪ್ರಶ್ನಿಸಬಾರದೇ? ಎಂದು ಪ್ರಶ್ನಿಸಿದ್ದಾರೆ. ಕಮಿಷನ್‌ ತೆಗೆದುಕೊಳ್ಳುವ ಈ ಎಲ್ಲ ಸ್ನೇಹಿತರೂ ಚೌಕಿದಾರನನ್ನು ಹೆದರಿಸುವ ಕನಸು ಕಾಣುತ್ತಿದ್ದಾರೆ. ಅವರಿಗೆ ನಿರಾಸೆಯಾಗುತ್ತದೆ. ಯಾಕೆಂದರೆ ಚೌಕಿದಾರ ನಿದ್ರೆ ಮಾಡುವುದೂ ಇಲ್ಲ, ಹೆದರುವುದೂ ಇಲ್ಲ. ನನ್ನ ವಿರುದ್ಧ ವಾಗ್ಧಾಳಿ ನಡೆಸುವವರು ಸುಳ್ಳನ್ನೇ ಹೇಳುತ್ತಿದ್ದಾರೆ. ಆದರೆ ನಾನು ಆರಂಭಿಸಿರುವ ಸ್ವತ್ಛತಾ ಕಾರ್ಯಕ್ರಮ ಮುಂದು ವರಿಯುತ್ತದೆ ಎಂದು ಹೇಳಿದ್ದಾರೆ.  ಈ ಮಧ್ಯೆ ಪೌರತ್ವ ಮಸೂದೆಗೆ ಸಂಬಂಧಿಸಿದಂತೆ ಮಾತನಾಡಿದ ಮೋದಿ, ಇದರಿಂದಾಗಿ ಈಶಾನ್ಯ ರಾಜ್ಯಗಳ ಜನರ ಹಕ್ಕುಗಳಿಗೆ ಯಾವುದೇ ಬಾಧೆಯಿಲ್ಲ ಎಂದಿದ್ದಾರೆ.

Advertisement

ಮಹಾರಾಷ್ಟ್ರದಲ್ಲಿ ಹಲವು ಯೋಜನೆಗಳನ್ನು ಮೋದಿ ಉದ್ಘಾಟಿಸಿದ್ದಾರೆ. ಹೆದ್ದಾರಿ ಅಗಲೀಕರಣ ಯೋಜನೆ, ಚರಂಡಿ ವ್ಯವಸ್ಥೆ, ತ್ಯಾಜ್ಯ ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದ ಅವರು, 30 ಸಾವಿರ ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಕಾಂಗ್ರೆಸ್‌ ಪ್ರಚಾರ ಶುರು: ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ರೈತರು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಜೈಪುರದಲ್ಲಿ ಕಾಂಗ್ರೆಸ್‌ನ ಚುನಾವಣಾ ಪ್ರಚಾರ ಶುರು ಮಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ರಫೇಲ್‌ ವಿಚಾರದಲ್ಲಿ ಚರ್ಚೆ ನಡೆಯುತ್ತಿರುವಾಗ ಲೋಕಸಭೆಯಲ್ಲಿ ಒಂದು ನಿಮಿಷವೂ ಮೋದಿ ನಿಲ್ಲಲಿಲ್ಲ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್‌ ನನ್ನ ಪ್ರಶ್ನೆಗೆ ಉತ್ತರಿಸಲಿಲ್ಲ ಎಂದು ರಾಹುಲ್‌ ಟೀಕಿಸಿದ್ದಾರೆ. 

6 ಸೀಟಿಗೆ ಆರ್‌ಎಲ್‌ಡಿ ಬೇಡಿಕೆ: ಉತ್ತರ ಪ್ರದೇಶದಲ್ಲಿ ವಿಪಕ್ಷಗಳ ಒಕ್ಕೂಟದಲ್ಲಿ ಆರು ಕ್ಷೇತ್ರಗಳನ್ನು ನೀಡುವಂತೆ ರಾಷ್ಟ್ರೀಯ ಲೋಕ ದಳ ಆಗ್ರಹಿಸಿದೆ. ಮಂಗಳವಾರ ಈ ಸಂಬಂಧ ಸಮಾಜವಾದಿ ಪಕ್ಷದ ಮುಖಂಡ ಅಖೀಲೇಶ್‌ ಯಾದವ್‌ರನ್ನು ಆರ್‌ಎಲ್‌ಡಿ ಉಪಾಧ್ಯಕ್ಷ ಜಯಂತ್‌ ಚೌಧರಿ ಭೇಟಿ ಮಾಡಿದ್ದಾರೆ. ಎಸ್‌ಪಿ ಹಾಗೂ ಬಿಎಸ್‌ಪಿ ಸೀಟು ಹಂಚಿಕೆ ಬಹುತೇಕ ಅಂತಿಮಗೊಂಡಿರುವ ಹಿನ್ನೆಲೆಯಲ್ಲಿ ಈ ಅಪಸ್ವರ  ಕೇಳಿಬಂದಿದೆ. 

ಕಳೆದ ಲೋಕಸಭೆ ಚುನಾವಣೆಯಲ್ಲಿ ಆರ್‌ಎಲ್‌ಡಿ ಒಂದು ಕ್ಷೇತ್ರದಲ್ಲೂ ಗೆದ್ದಿರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಕೇವಲ ಒಂದ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಮೈತ್ರಿಕೂಟದಿಂದ ಬಿಜೆಡಿ ದೂರ: ಮಹಾಘಟಬಂಧನದಿಂದ ಬಿಜು ಜನತಾ ದಳ ದೂರವಿರಲಿದೆ ಎಂದು ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ಹೇಳಿ ದ್ದಾರೆ. ಮಂಗಳವಾರವಷ್ಟೇ, ಮಹಾಘಟಬಂಧನದಲ್ಲಿ ಸೇರುವ ಬಗ್ಗೆ ನಿಲುವು ವ್ಯಕ್ತಪಡಿಸಲು ಕಾಲಾವಕಾಶವನ್ನು ಪಟ್ನಾಯಕ್‌ ಕೇಳಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಸಮಾನ ಅಂತರವನ್ನು ನಾವು ಕಾಯ್ದುಕೊಳ್ಳುವುದನ್ನು ಮುಂದುವರಿಸಲಿದ್ದೇವೆ ಎಂದಿದ್ದಾರೆ. 

Advertisement

ರಾಹುಲ್‌ಎಡವಟ್ಟು 
ಜೈಪುರದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡುವ ವೇಳೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಎಡವಟ್ಟು ಮಾಡಿಕೊಂಡಿದ್ದಾರೆ. ರಫೇಲ್‌ ಡೀಲ್‌ ಸಮರ್ಥನೆಗಾಗಿ ಪ್ರಧಾನಿ ನರೇಂದ್ರ ಮೋದಿಗೆ ಮಹಿಳೆ ಸಿಕ್ಕಿದ್ದಾರೆ ಎಂದು ಹೇಳಿದ್ದಾರೆ. ಲೋಕಸಭೆಯಲ್ಲಿ ರಕ್ಷಣಾ ಸಚಿವ ಡೀಲ್‌ ಸಮರ್ಥಿಸಿ ಮಾತನಾಡಿದ್ದ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್‌ ಉದ್ದೇಶಿಸಿ ರಾಹುಲ್‌ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅದಕ್ಕೆ ಆಗ್ರಾದಲ್ಲಿ ತಿರುಗೇಟು ನೀಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ಅಧ್ಯಕ್ಷರು ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಟೀಕಿಸಿದರು. ಲೋಕಸಭೆಯಲ್ಲಿ ರಕ್ಷಣಾ ಸಚಿವರು ಪ್ರತಿಪಕ್ಷಗಳ ಟೀಕೆಗೆ ಉತ್ತರಿಸಿದ್ದಾರೆ ಎಂದಿದ್ದಾರೆ.  ರಾಹುಲ್‌ ಹೇಳಿಕೆ ಬಗ್ಗೆ ಟ್ವಿಟರ್‌ನಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್‌ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next