ಬ್ಯಾಂಕಾಕ್: ಥಾಯ್ಲೆಂಡ್ ನ ಪಟ್ಟಾಯದಲ್ಲಿ 29ನೇ ಮಹಡಿಯ ಅಂತಸ್ತಿನಿಂದ ಜಿಗಿತ 33 ವರ್ಷದ ಬ್ರಿಟಿಷ್ ಮೂಲದ ಜಂಪರ್ ಕೊನೆಯುಸಿರೆಳೆದ ಘಟನೆ ನಡೆದಿರುವುದಾಗಿ ಬಿಬಿಸಿ ವರದಿ ಮಾಡಿದೆ.
ಇದನ್ನೂ ಓದಿ:Filmfare Awards: 12th ಫೇಲ್ To ಅನಿಮಲ್.. ಇಲ್ಲಿದೆ ಫಿಲ್ಮ್ ಫೇರ್ ಗೆದ್ದವರ ಪಟ್ಟಿ
ವರದಿಯ ಪ್ರಕಾರ, 29ನೇ ಮಹಡಿಯ ಮೇಲಿನಿಂದ ಪ್ಯಾರಾಚೂಟ್ ಮೂಲಕ ಜಿಗಿದ ವೇಳೆ ಪ್ಯಾರಚೂಟ್ ತೆರೆದುಕೊಳ್ಳದ ಪರಿಣಾಮ ನೆಲಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ವಿವರಿಸಿದೆ.
ಕೇಂಬ್ರಿಡ್ಜ್ ಶೈರ್ ನ ಹಂಟಿಂಗ್ ಡನ್ ನ ನಾಥಿ ಓಡಿನ್ಸನ್ (33) ಎಂಬಾತ ಪಟ್ಟಾಯದ ಕರಾವಳಿ ರೆಸಾರ್ಟ್ ನಲ್ಲಿರುವ 29 ಮಹಡಿಗಳ ಕಟ್ಟಡದ ಮೇಲಕ್ಕೆ ಅಕ್ರಮವಾಗಿ ಏರಿದ್ದ ಎಂದು ವರದಿ ತಿಳಿಸಿದೆ.
ಭದ್ರತಾ ಅಧಿಕಾರಿಗಳ ಮಾಹಿತಿ ಪ್ರಕಾರ, ಓಡಿನ್ಸನ್ ತನ್ನ ಕಾರನ್ನು ಅಪಾರ್ಟ್ ಮೆಂಟ್ ಹೊರಗೆ ಪಾರ್ಕ್ ಮಾಡಿ, ನಂತರ ಅಪಾರ್ಟ್ ಮೆಂಟ್ ನೊಳಗೆ ಒಳನುಸುಳಿದ್ದ. ಈತ 29ನೇ ಮಹಡಿಯಿಂದ ಜಿಗಿಯುವ ದೃಶ್ಯವನ್ನು ಸೆರೆಹಿಡಿಯಲು ಗೆಳೆಯ ಕೆಳಗಡೆ ನಿಂತಿದ್ದ. ಓಡಿನ್ಸನ್ ಪ್ಯಾರಾಚೂಟ್ ಕಟ್ಟಿಕೊಂಡು ಜಿಗಿದಾಗ ಅದು ತೆರೆದುಕೊಳ್ಳದ ಪರಿಣಾಮ ನೆಲಕ್ಕೆ ಬಡಿದಪ್ಪಳಿಸಿದ್ದ, ಇದರ ಪರಿಣಾಮ ಓಡಿನ್ಸನ್ ಸ್ಥಳದಲ್ಲೇ ಕೊನೆಯುಸಿರೆಳೆದಿರುವುದಾಗಿ ತಿಳಿಸಿದ್ದಾರೆ.
ಓಡಿನ್ಸನ್ ಅನುಭವಿ ಪ್ಯಾರಾಚೂಟಿಸ್ಟ್ ಆಗಿದ್ದು, ಈತ ತನ್ನ ಸಾಹಸದ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದಾಗಿ ಬಿಬಿಸಿ ವರದಿ ತಿಳಿಸಿದೆ.