ಲಂಡನ್: ಬ್ರಿಟನ್ ಸಂಸತ್ ಮೇಲಿನ ದಾಳಿ ಯತ್ನದ ಹೊಣೆಯನ್ನು ಕುಖ್ಯಾತ ಉಗ್ರ ಸಂಘಟನೆ ಐಸಿಸ್ ಹೊತ್ತುಕೊಂಡಿದೆ. ಎಂದು ಕೆಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಆದರೆ ದಾಳಿಕೋರ ನೇರವಾಗಿ ಐಸಿಸ್ ಸಂಘಟನೆಗೇ ಸೇರಿದವನೇ ಎಂಬುದು ಗೊತ್ತಾಗಿಲ್ಲ. ಆದರೆ ದಾಳಿಕೋರ ಐಸಿಸ್‌ನ ಚಿಂತನೆಗಳಿಂದ ಪ್ರಭಾವಿತನಾಗಿದ್ದ ಎಂದು ನಂಬಲಾಗಿದೆ.
ಇದೇ ವೇಳೆ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕು ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಕುರಿತಂತೆ ಲಂಡನ್ ಪೊಲೀಸರು ಮತ್ತು ಗುಪ್ತಚರ ದಳ, ವಿವಿಧ ತನಿಖಾ ದಳಗಳು ತನಿಖೆಯನ್ನುಚುರುಕುಗೊಳಿಸಿವೆ. ಲಂಡನ್ ಮತ್ತು ಬರ್ಮಿಂಗ್‌ಹ್ಯಾಮ್‌ನಲ್ಲಿ ಪೊಲೀಸರು ದಾಳಿ ನಡೆಸಿದ್ದು ಒಟ್ಟು ಎಂಟು ಮಂದಿಯನ್ನು ಬಂಧಿಸಿದ್ದಾರೆ. ಬ್ರಿಟನ್ ಸಂಸತ್ ದಾಳಿಗೂ, ಈ ಹಿಂದೆ ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ವಾಹನ ನುಗ್ಗಿಸಿ ಜನರ ಮೇಲೆ ಹರಿಸುವ ಉಗ್ರ ದಾಳಿಗೂ ಸಾಮ್ಯತೆ ಇರುವುದನ್ನು ಪೊಲೀಸರು ಕಂಡುಕೊಂಡಿದ್ದಾರೆ. ಇದರೊಂದಿಗೆ ಲಂಡನ್‌ನ ಇತರ ಭಾಗಗಳಲ್ಲೂ ಕಟ್ಟೆಚ್ಚರ ಘೋಷಿಸಲಾಗಿದ್ದು, ಎಲ್ಲೆಡೆ ಕೂಲಂಕಷ ತಪಾಸಣೆ, ಶೋಧಕಾರ್ಯ ನಡೆಸಲಾಗುತ್ತಿದೆ.
ಮಾಹಿತಿ ಬಹಿರಂಗ: ಈ ನಡುವೆ ದಾಳಿಕೋರ ಬ್ರಿಟನ್ ನಾಗರಿಕನಾಗಿದ್ದು ಆತನ ಹೆಸರು ಖಾಲಿದ್ ಮಸೂದ್ (52) ಎಂದು ಪೊಲೀಸರು ತಿಳಿಸಿದ್ದಾರೆ. ಈತ ಇಸ್ಲಾಮಿಕ್ ಉಗ್ರವಾದದಿಂದ ಪ್ರೇರೇಪಿತಧಿನಾಗಿದ್ದ. ಆತ ಬ್ರಿಟನ್‌ನ ಪ್ರಜೆಯೇ ಆಗಿದ್ದಾನೆ. ಆತ ಹಿಂದೊಮ್ಮೆ ಭದ್ರತಾ ಪಡೆಗಳಿಂದ ವಿಚಾರಣೆಗೆ ಗುರಿಯಾಗಿದ್ದ ಎಂದು ಬ್ರಿಟನ್ ಪ್ರಧಾನಿ ಥೆರೇಸಾ ಮೇ ಹೇಳಿದ್ದಾರೆ. ಬ್ರಿಟನ್ ಸಂಸತ್‌ನಲ್ಲಿ ಮಾತನಾಡಿದ ಅವರು, ದಾಳಿ ವಿವರಗಳನ್ನು ನೀಡಿದರು. ದಾಳಿ ನಡೆಸಿದ್ದು ಒಬ್ಬನೇ ವ್ಯಕ್ತಿ ಎಂದರು. ಈ ನಡುವೆ ಬ್ರಿಟನ್ ಸಂಸತ್ ಕಲಾಪ ಗುರುವಾರ ಎಂದಿನಂತೆ ಆರಂಭವಾಗಿದ್ದು, ಅಸುನೀಗಿದ ವ್ಯಕ್ತಿಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಂತಾಪ ಸೂಚಿಸಿದ ಮೋದಿ: ಬ್ರಿಟನ್ ಸಂಸತ್ತಿನ ಹೊರಗಡೆ ನಡೆದ ದಾಳಿ ಯತ್ನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮಡಿದ ನಾಗರಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವುದಾಗಿ ಹೇಳಿದರು. ಜೊತೆಗೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಬ್ರಿಟನ್ ಜೊತೆ ಭಾರತವೂ ಇರುವುದಾಗಿ ಹೇಳಿದ್ದಾರೆ
ಬ್ರಿಟಿಷ್ ಸಿಕ್ಖ್ ಫೆಡರೇಶನ್ ಖಂಡನೆ: ಬ್ರಿಟನ್ ಸಂಸತ್ತಿನ ಮೇಲಿನ ದಾಳಿ ನಿರ್ದಯವಾದದ್ದು. ಇವುಗಳನ್ನು ಎಷ್ಟು ಮಾತ್ರಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಬ್ರಿಟಿಷ್ ಸಿಕ್ಖ್ ಫೆಡರೇಶನ್ ಖಂಡಿಸಿದೆ.
7 ಮಂದಿ ಚಿಂತಾಜನಕ
ಬುಧವಾರದ ದಾಳಿ ವೇಳೆ ದಾಳಿಕೋರ ವಾಹನವನ್ನು ವೆಸ್ಟ್‌ಮಿನಿಸ್ಟರ್ ಸೇತುವೆಯಲ್ಲಿ ಎರ್ರಾಬಿರ್ರಿ ಚಾಲನೆ ಮಾಡಿದ್ದರಿಂದ 40 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 29 ಮಂದಿ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು, 7 ಮಂದಿ ಸ್ಥಿತಿ ಚಿಂತಾಜನಕವಿದೆ ಎಂದು ಹೇಳಲಾಗಿದೆ.