Advertisement

ರಾಜ್ಯಕ್ಕೆ ಬ್ರಿಟನ್‌ ವೈರಾಣು; ಆತಂಕ ಬೇಡ, ಮುನ್ನೆಚ್ಚರಿಕೆ ಇರಲಿ ಎಂದ ವೈದ್ಯಕೀಯ ತಜ್ಞರು

11:40 PM Dec 29, 2020 | Team Udayavani |

ಬೆಂಗಳೂರು/ಹೊಸದಿಲ್ಲಿ: ರೂಪಾಂತರಿತ ಕೋವಿಡ್ ವೈರಸ್‌ ರಾಜ್ಯವನ್ನೂ ಪ್ರವೇಶಿಸಿದೆ. ದೇಶದಲ್ಲಿ ಪತ್ತೆಯಾಗಿರುವ 6 ಪ್ರಕರಣಗಳಲ್ಲಿ
3 ರಾಜ್ಯದಲ್ಲಿದ್ದು, ಆತಂಕ ಮನೆ ಮಾಡಿದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಲಸಿಕೆಗಿಂತ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದೆ.

Advertisement

ರೂಪಾಂತರಿತ ವೈರಸ್‌ ದೃಢಪಟ್ಟ ಬೆನ್ನಲ್ಲೇ ಸೋಂಕುಪೀಡಿತರು ಮತ್ತು ಸಂಪರ್ಕಿತರ ಪತ್ತೆ ನಡೆದಿದೆ. ಮತ್ತೂಂದೆಡೆ ಹೊಸ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ. ಲಸಿಕೆ ಕಂಡುಹಿಡಿಯಲಾಗಿದೆ. ಆದರೆ ರೂಪಾಂತರಿತ ವೈರಸ್‌ಗೆ ಅದು ಪರಿಣಾಮಕಾರಿಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಅದರ ವೇಗಕ್ಕೆ “ಬ್ರೇಕ್‌’ ಹಾಕುವುದು ಜನರ ಕೈಯಲ್ಲಿದೆ ಎಂದಿದ್ದಾರೆ ತಜ್ಞರು.

ಮೊದಲ ಹಂತದ ಕೊರೊನಾ ಹಾವಳಿ ಎದುರಿಸಿದ್ದೇವೆ. ಇದರಿಂದ ಸಾಮುದಾಯಿಕ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಇಂತಹ ಅನುಭವಗಳ ನಡುವೆ ರೂಪಾಂತರಿತ ವೈರಸ್‌ ಬಂದಿದೆ. ಹಾಗಾಗಿ ಒಂಬತ್ತು ತಿಂಗಳ ಅನುಭವವನ್ನು ಒರೆಗೆ ಹಚ್ಚಿ ಜವಾಬ್ದಾರಿ ಮೆರೆಯುವ ಅಗತ್ಯ ಇದೆ ಎಂದಿದ್ದಾರೆ.

ಬೆಂಗಳೂರಿನ ಮೂವರಿಗೆ ಹೊಸ ಸೋಂಕು
ರೂಪಾಂತರಿತ ವೈರಸ್‌ ಬೆಂಗಳೂರಿನ ಮೂವರಲ್ಲಿ ಕಾಣಿಸಿಕೊಂಡಿರುವುದು ಮಂಗಳವಾರ ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ| ಸುಧಾಕರ್‌ ಹೇಳಿದ್ದಾರೆ. ವಸಂತಪುರದ ತಾಯಿ ಮತ್ತು ಮಗು ಹಾಗೂ ಜೆ.ಪಿ. ನಗರದ ವಯಸ್ಕ ಪುರುಷನಲ್ಲಿ ಸೋಂಕು ಇರುವುದು ವಂಶವಾಹಿ ಪರೀಕ್ಷೆಯಿಂದ ದೃಢಪಟ್ಟಿದೆ. ಸದ್ಯ ಈ ಮೂವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ವಾಸವಿದ್ದ ವಸತಿ ಸಮುಚ್ಚಯ ಪ್ರದೇಶಗಳ ಸುತ್ತ ನಿರ್ಬಂಧಿಸಲಾಗಿದೆ.

ಲಾಕ್‌ಡೌನ್‌ ಅಗತ್ಯವಿಲ್ಲ
ರೂಪಾಂತರಿತ ಸೋಂಕನ್ನು ತಡೆಯಲು ಎಲ್ಲ ಮುಂಜಾಗ್ರತೆ ಕೈಗೊಂಡಿದ್ದು, ಯಾವುದೇ ಸಮಸ್ಯೆ ಆಗುವುದಿಲ್ಲ. ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಸದ್ಯ ಲಾಕ್‌ಡೌನ್‌, ಸೀಲ್‌ಡೌನ್‌ ಆಗತ್ಯ ಇಲ್ಲ. ಶಾಲೆ, ಕಾಲೇಜು ಆರಂಭಕ್ಕೆ ಸಮಸ್ಯೆ ಇಲ್ಲ ಎಂದು ಸಚಿವ ಸುಧಾಕರ್‌ ತಿಳಿಸಿದ್ದಾರೆ.

Advertisement

ಉಡುಪಿ: ಎಲ್ಲರೂ ನೆಗೆಟಿವ್‌
ಉಡುಪಿ/ ಮಂಗಳೂರು: ಉಡುಪಿ ಜಿಲ್ಲೆಗೆ ಬ್ರಿಟನ್‌ನಿಂದ ಹಿಂದಿರುಗಿದ 36 ಮಂದಿಯ ವೈದ್ಯಕೀಯ ವರದಿ ನೆಗೆಟಿವ್‌ ಬಂದಿದೆ. ಇವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.
ದಕ್ಷಿಣ ಕನ್ನಡಕ್ಕೆ ಬಂದಿರುವ 15 ಮಂದಿಯಲ್ಲಿ 6 ಮಂದಿಗೆ ಮಂಗಳವಾರ ಪರೀಕ್ಷೆ ನಡೆಸಲಾಗಿದೆ. ಇನ್ನು 6 ಮಂದಿಯನ್ನು ಬುಧವಾರ ಪರೀಕ್ಷಿಸಲಾಗುತ್ತಿದೆ.

6 ಮಂದಿಗೆ ರೂಪಾಂತರಿತ ಸೋಂಕು
ಬೆಂಗಳೂರಿನ ಮೂವರು, ಆಂಧ್ರದ ಇಬ್ಬರು ಮತ್ತು ಪುಣೆಯ ಒಬ್ಬರಿಗೆ ಹೊಸ ಮಾದರಿಯ ಸೋಂಕು ತಗಲಿರುವುದು ದೃಢಪಟ್ಟಿದೆ.
ನ. 25ರಿಂದ ಡಿ. 23ರ ಅವಧಿಯಲ್ಲಿ 33 ಸಾವಿರ ಮಂದಿ ಬ್ರಿಟನ್‌ನಿಂದ ವಾಪಸ್‌ ಬಂದಿದ್ದು, 114 ಮಂದಿಗೆ ಕೊರೊನಾ ದೃಢಪಟ್ಟಿದೆ. ಸದ್ಯ 6 ಮಂದಿಯಲ್ಲಿ ರೂಪಾಂತರಿತ ಸೋಂಕು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಲಸಿಕೆ ಪರಿಣಾಮಕಾರಿ
ರೂಪಾಂತರಿತ ಕೊರೊನಾ ವೈರಾಣು ವಿರುದ್ಧ ಈಗಿನ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಭಾರತ್‌ ಬಯೋಟೆಕ್‌ನ ಎಂಡಿ ಕೃಷ್ಣ ಎಲ್ಲ ತಿಳಿಸಿದ್ದಾರೆ. ಈ ಸಂಸ್ಥೆ ದೇಶೀಯ ಲಸಿಕೆ ಕೋವ್ಯಾಕ್ಸಿನ್‌ ಅಭಿವೃದ್ಧಿಗೊಳಿಸುತ್ತಿದೆ. ಕೇಂದ್ರ ಸರಕಾರವೂ ಇದನ್ನು ಪುನರುಚ್ಚರಿಸಿದೆ.

ತಜ್ಞರ ಮೂರು ಸಲಹೆಗಳು
ಜನರಿಗೆ
1-ರೂಪಾಂತರಿಯ ಬಗ್ಗೆ ಭಯ ಬೇಡ. ಕೊರೊನಾ ವಿಚಾರದಲ್ಲಿ 10 ತಿಂಗಳ ಅನುಭವವಿದೆ. ಅದರಿಂದ ಕಲಿತ ಪಾಠದಿಂದ ಇದನ್ನು ಎದುರಿಸೋಣ.
2-ರೂಪಾಂತರಿತ ವೈರಸ್‌ಗೆ ಹರಡುವಿಕೆಯ ಗುಣ ಹೆಚ್ಚಿದೆ. ಹಾನಿ, ತೀವ್ರತೆ ಹೆಚ್ಚಿಲ್ಲ. ಮಾಸ್ಕ್, ಸಾಮಾಜಿಕ ಅಂತರ, ಕೈ ಸ್ವತ್ಛತೆ ಪ್ರಮುಖ ಮದ್ದು.
3-ರೂಪಾಂತರಿತ ವೈರಾಣುವಿನ ಲಕ್ಷಣಗಳು ಈ ಹಿಂದಿನವೇ ಆಗಿದ್ದು, ಈಗಿನ ಲಸಿಕೆಯೇ ಸಾಕು.

ಸರಕಾರಕ್ಕೆ
1-ಶೀಘ್ರದಲ್ಲಿ ಬ್ರಿಟನ್‌ನಿಂದ ಬಂದ ಎಲ್ಲ ಪ್ರಯಾಣಿಕರ ಪತ್ತೆ ಮಾಡಿ ಪರೀಕ್ಷೆಗೊಳಪಡಿಸಬೇಕು. ಕಡ್ಡಾಯ ಕ್ವಾರಂಟೈನ್‌ ಮಾಡಿ ನಿಗಾ ವಹಿಸಬೇಕು.
2-ರೂಪಾಂತರಿತ ವೈರಸ್‌ ಬ್ರಿಟನ್‌ಗೆ ಸೀಮಿತವಾಗದೆ ವಿವಿಧ ದೇಶಗಳಿಗೆ ಹರಡಿದೆ. ಹೀಗಾಗಿ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಬಿಗಿ ಮಾಡಬೇಕು. ವಿದೇಶಿ ಪ್ರಯಾಣಿಕರ ಆರೋಗ್ಯ ನಿಗಾ, ಕ್ವಾರಂಟೈನ್‌ ಮಾಡಬೇಕು.
3-ರೂಪಾಂತರಿತ ಸೋಂಕು ದೃಢಪಟ್ಟವರ ಚಟುವಟಿಕೆಯ ಮಾಹಿತಿ ಪಡೆದು ಸಂಪರ್ಕಿತರ ಪರೀಕ್ಷೆ, ಎರಡು ವಾರ ಕ್ವಾರಂಟೈನ್‌, ನಿರಂತರ ಆರೋಗ್ಯ ನಿಗಾ ವಹಿಸಬೇಕು. ಇದರಿಂದ ಸಮುದಾಯಕ್ಕೆ ಹರಡುವುದನ್ನು ತಪ್ಪಿಸಬಹುದು.

ರೂಪಾಂತರಿತ ವೈರಾಣು ತುಂಬಾ ಭಿನ್ನವಾಗಿಲ್ಲ. ಹರಡುವಿಕೆಯ ತೀವ್ರತೆ ಈ ಹಿಂದಿಗಿಂತ ಹೆಚ್ಚಿರುತ್ತದೆ. ಆತಂಕಕ್ಕಿಂತ ಹೆಚ್ಚಾಗಿ ನಾವು ಹಿಂದಿನ ಅನುಭವವನ್ನು ಒರೆಗೆ ಹಚ್ಚಬೇಕಿದೆ.
– ಡಾ| ವಿ. ರವಿ, ರೂಪಾಂತರಿತ ಕೊರೊನಾ ವೈರಸ್‌ ಪರೀಕ್ಷೆಗಳ ಮುಖ್ಯಸ್ಥರು, ನಿಮ್ಹಾನ್ಸ್‌

Advertisement

Udayavani is now on Telegram. Click here to join our channel and stay updated with the latest news.

Next