Advertisement

ಬ್ರಿಟನ್‌ ನೂತನ ಪ್ರಧಾನಿಗೆ ಇದೆ ಕಠಿನ ಹಂತಗಳ ಹಾದಿ

11:46 PM Oct 23, 2022 | Team Udayavani |

ಬ್ರಿಟನ್‌ನ ವಿತ್ತ ಖಾತೆ ಮಾಜಿ ಸಚಿವ, ಇನ್ಫೋಸಿಸ್‌ ಸಂಸ್ಥಾಪಕ ಡಾ| ಎನ್‌.ಆರ್‌.ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್‌ ಪ್ರಧಾನಮಂತ್ರಿ ಹುದ್ದೆಯ ಅಭ್ಯರ್ಥಿಯಾಗುತ್ತೇನೆ ಎಂದು ರವಿವಾರ ಘೋಷಣೆ ಮಾಡಿದ್ದಾರೆ.

Advertisement

ವಿತ್ತೀಯ ಬಿಕ್ಕಟ್ಟು ನಿರ್ವಹಣೆಯನ್ನು ಸೂಕ್ತವಾಗಿ ನಿರ್ವಹಿಸಲು ವಿಫ‌ಲರಾಗಿರುವ ಹಿನ್ನೆಲೆಯಲ್ಲಿ ಹಾಲಿ ಪ್ರಧಾನಿ ಲಿಜ್‌ ಟ್ರಸ್‌ ಈಗಾಗಲೇ ರಾಜೀನಾಮೆ ನೀಡಿದ್ದಾರೆ ಮತ್ತು ಅ.28ರ ಒಳಗಾಗಿ ಆಡಳಿತ ಪಕ್ಷ ಕನ್ಸರ್ವೇಟಿವ್‌ ಪಕ್ಷದ ನಾಯಕನ ಸ್ಥಾನ ಮತ್ತು ಪ್ರಧಾನಿ ಹುದ್ದೆ ಭರ್ತಿಯಾಗಬೇಕಾಗಿದೆ.

ಪ್ರಧಾನಮಂತ್ರಿಯ ಅಧಿಕೃತ ನಿವಾಸದಲ್ಲಿಯೇ ಪಾರ್ಟಿ ಮಾಡಿ, ನಿಯಮ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಗುರಿಯಾಗಿ ರಾಜೀನಾಮೆ ನೀಡಿರುವ ಬೋರಿಸ್‌ ಜಾನ್ಸನ್‌ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸ್ಪರ್ಧೆಯ ಕಣಕ್ಕೆ ಜಾನ್ಸನ್‌ ಇಳಿಯುವ ಬಗ್ಗೆ ಜಾನ್ಸನ್‌ ಮಾತನಾಡದೇ ಇದ್ದರೂ ತಮ್ಮ ಬೆಂಬಲಿಗರ ಮೂಲಕ ಅಭ್ಯರ್ಥಿತನವನ್ನು ಹೇಳಿಸಿದ್ದಾರೆ. ಜತೆಗೆ 100ಕ್ಕೂ ಅಧಿಕ ಮಂದಿ ಸಂಸದರ ಬೆಂಬಲ ಇದೆ ಎಂದು ಪ್ರತಿಪಾದಿಸಿಕೊಂಡಿದ್ದಾರೆ. ಆದರೆ, ಸದ್ಯ ಪ್ರಕಟವಾಗಿರುವ ಸಂಖ್ಯಾಬಲವನ್ನು ನೋಡಿದರೆ ಮಾಜಿ ಸಚಿವ ರಿಷಿ ಸುನಕ್‌ ಅವರಿಗೆ 124ಕ್ಕಿಂತ ಅಧಿಕ ಸಂಸದರು ಬೆಂಬಲ ನೀಡಿದ್ದಾರೆ.

ಪ್ರಧಾನಮಂತ್ರಿ ಮತ್ತು ಸರಕಾರದ ಬದಲಾವಣೆ ಬ್ರಿಟನ್‌ನ ಆಂತರಿಕ ವಿಚಾರವಾದರೂ, ಭಾರತಕ್ಕೆ ಆ ದೇಶದ ಜತೆಗೆ ವಿಶೇಷ ಬಾಂಧವ್ಯ ಇದೆ. ನಮ್ಮ ದೇಶದ ನೂರಾರು ಮಂದಿ ವಿದ್ಯಾರ್ಥಿಗಳು, ತಂತ್ರಜ್ಞರು ಸೇರಿದಂತೆ ಹತ್ತು ಹಲವು ಕ್ಷೇತ್ರಗಳ ಪರಿಣತರು ಅಲ್ಲಿ ಇದ್ದಾರೆ. ಸದ್ಯ ಇರುವ ಸರಕಾರದಲ್ಲಿ ಕೂಡ ಭಾರತ ಮೂಲದವರೂ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಬೋರಿಸ್‌ ಜಾನ್ಸನ್‌ ಪ್ರಧಾನಿಯಾಗಿ ಇದ್ದಾಗಲೇ ಭಾರತ ಮತ್ತು ಬ್ರಿಟನ್‌ ನಡುವೆ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ)ಕ್ಕೆ ಸಹಿ ಹಾಕಲು ತೀರ್ಮಾನಿಸಲಾಗಿತ್ತು. ಆ ದೇಶದಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟಿನಿಂದ ಅದು ಅಂತಿಮಗೊಳ್ಳಲು ತಡವಾಯಿತು. ಅದರಿಂದಾಗಿ 2 ದೇಶಗಳ ನಡುವೆ ಆಮದು ಮತ್ತು ರಫ್ತು ಕ್ಷೇತ್ರಗಳಲ್ಲಿ ಕಡಿಮೆ ಪ್ರಮಾಣದ ಸುಂಕ, ಸೇವಾ ಕ್ಷೇತ್ರಗಳಲ್ಲಿ ಹೆಚ್ಚಿನ ವ್ಯಾಪಾರದ ಅವಕಾಶಕ್ಕೆ ಇಂಬು ಸಿಗಲಿದೆ. ಇನ್ನೀಗ ಹೊಸ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕವಷ್ಟೇ ಈ ಬಗ್ಗೆ ಗಮನ ಹರಿಸುವ ಸಾಧ್ಯತೆ ಇದೆ.

2020ರ ಸಾರ್ವತ್ರಿಕ ಚುನಾವಣೆಯ ಬಳಿಕ ಸತತ 2ನೇ ಬಾರಿಗೆ ಕನ್ಸರ್ವೇಟಿವ್‌ ಪಕ್ಷದ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಇನ್ನೀಗ ಹೊಸ ಪ್ರಧಾನಿಯಾಗಿ ಯಾರೇ ಆಯ್ಕೆಯಾಗಲಿ, ಅವರಿಗೆ ಯುನೈಟೆಡ್‌ ಕಿಂಗ್‌ಡಮ್‌ನ ಅರ್ಥ ವ್ಯವಸ್ಥೆಯನ್ನು ಹಳಿಗೆ ತರುವ ಸವಾಲು ಇದೆ. ಆ ದೇಶದಲ್ಲಿ ಹಣದುಬ್ಬರ ಪ್ರಮಾಣ ಸೆಪ್ಟಂಬರ್‌ನಲ್ಲಿ ಶೇ.13.2ರ ವರೆಗೆ ಏರಿಕೆಯಾಗಿದೆ. ಅಮೆರಿಕದ ಡಾಲರ್‌ ಎದುರು ಪೌಂಡ್‌ ಸ್ಟರ್ಲಿಂಗ್‌ ದಾಖಲೆ ಪ್ರಮಾಣದಲ್ಲಿ ಕುಸಿದಿದೆ. ಒಟ್ಟಾರೆಯಾಗಿ ಅಲ್ಲಿನ ಅರ್ಥವ್ಯವಸ್ಥೆಯನ್ನು ಸುಧಾರಿಸುವುದೇ ನೂತನ ಪ್ರಧಾನಿಗೆ ಸವಾಲಿನ ಕೆಲಸವಾಗುವುದು ಖಚಿತ.

Advertisement

ಈಗಾಗಲೇ ಹಾಲಿ ಅವಧಿಯಲ್ಲಿ ಎರಡು ವರ್ಷಗಳು ಸಂದು ಹೋಗಿವೆ. 2025ರ ಜನವರಿಯಲ್ಲಿ ಹಾಲಿ ಸಂಸತ್‌ನ ಅವಧಿ ಮುಕ್ತಾಯವಾಗುವುದರಿಂದ ಹೊಸ ಪ್ರಧಾನಿಯಾಗಲಿರುವವರಿಗೆ ಬಿಡುವಿಲ್ಲದಂತೆ ಗುರುತರ ಹೊಣೆಗಾರಿಕೆಗಳು ಕಾಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next