Advertisement

ಸೋಲಾರ್‌-ಪವನ ಯೋಜನೆಗಳಿಗೆ ಬ್ರಿಟನ್‌ ನೆರವು

03:25 AM Jul 13, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸೋಲಾರ್‌ ಹಾಗೂ ಪವನ ವಿದ್ಯುತ್‌ ಸೇರಿದಂತೆ ಹಸಿರು ಇಂಧನ ಯೋಜನೆಗಳಿಗೆ ತಾಂತ್ರಿಕ ಹಾಗೂ ಆರ್ಥಿಕ ನೆರವು ನೀಡಲು ಬ್ರಿಟನ್‌ ಮುಂದಾಗಿದೆ. ವಿಧಾನಸೌಧದಲ್ಲಿ ಬುಧವಾರ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾತನಾಡಿದ ಬ್ರಿಟಿಷ್‌ ಡೆಪ್ಯುಟಿ ಹೈಕಮೀಷನರ್‌ ಡೊಮೆನಿಕ್‌ ಮ್ಯಾಕ್‌ ಅಲಿಸ್ಟ್ರಾರ್‌, ಸೋಲಾರ್‌ ಹಾಗೂ ಪವನ ವಿದ್ಯುತ್‌ ಉತ್ಪಾದನೆಗೆ ಕರ್ನಾಟಕದಲ್ಲಿ ಹೆಚ್ಚು ಅವಕಾಶ ಇದೆ. ಹೆಚ್ಚು
ಯೋಜನೆ ಕೈಗೊಂಡರೆ ಹಸಿರು ಇಂಧನ ನಿಧಿಯಡಿ ಅಗತ್ಯ ಇರುವಷ್ಟು ಆರ್ಥಿಕ ನೆರವು ನೀಡಲು ಸಿದ್ಧ ಎಂದು ಭರವಸೆ ನೀಡಿದರು. ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ರಾಜ್ಯದಲ್ಲಿ ಸೋಲಾರ್‌ ಹಾಗೂ ಪವನ ವಿದ್ಯುತ್‌ ಉತ್ಪಾದನಾ ವಲಯದಲ್ಲಿ ಹೂಡಿಕೆಗೆ ಬ್ರಿಟನ್‌ ಆಸಕ್ತಿ ತೋರಿದೆ. ಹಿಂದೆಯೂ ಪಾವಗಡ ಸೋಲಾರ್‌
ಯೋಜನೆಗೆ ನಮಗೆ ಅಲ್ಪ ಪ್ರಮಾಣದ ನೆರವು ದೊರೆತಿತ್ತು. ಮುಂದಿನ ದಿನಗಳಲ್ಲಿ ಹೆಚ್ಚಿನ ನೆರವು ನೀಡಲು ಒಪ್ಪಿರುವುದು ಸಂತೋಷಕರ ಸಂಗತಿ. ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಳ್ಳಲಿದೆ. ಸೋಲಾರ್‌ ಹಾಗೂ ಪವನ ವಲಯದಿಂದ ಹೆಚ್ಚು ವಿದ್ಯುತ್‌ ಉತ್ಪಾದನೆಯತ್ತ ಹೆಜ್ಜೆ ಹಾಕಲಿದೆ ಎಂದು ತಿಳಿಸಿದರು.

Advertisement

ಮೈಸೂರಿನಲ್ಲಿ ಪ್ರಾಯೋಗಿಕವಾಗಿ ಅಳವಡಿಸಿರುವ ಸ್ಮಾರ್ಟ್‌ ಮೀಟರ್‌ ಯೋಜನೆ ಬಗ್ಗೆಯೂ ಬ್ರಿಟಿಷ್‌ ಡೆಪ್ಯುಟಿ ಹೈ ಕಮೀಷನರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರು, ಹುಬ್ಬಳ್ಳಿಗೂ ಈ ಯೋಜನೆ ವಿಸ್ತರಿಸಲು ನಿರ್ಧರಿಸಲಾಗಿದೆ. ಅದಕ್ಕೂ ತಾಂತ್ರಿಕ ಮತ್ತು ಆರ್ಥಿಕ ನೆರವು ನೀಡಲು ಬ್ರಿಟನ್‌ ಒಪ್ಪಿದೆ ಎಂದರು.

ಸಭೆ ವೇಳೆ ಬ್ರಿಟಿಷ್‌ ಡೆಪ್ಯುಟಿ ಹೈ ಕಮೀಷನರ್‌ ಅವರು ಚಾವಣಿ ವಿದ್ಯುತ್‌ ಉತ್ಪಾದನೆ, ವಿದ್ಯುತ್‌ ಚಾಲಿತ ವಾಹನಗಳಿಗೆ ಆದ್ಯತೆ ಸೇರಿದಂತೆ ಹಲವು ವಿಚಾರಗಳನ್ನು ಗಮನಕ್ಕೆ ತಂದಿದ್ದಾರೆ. ಲಿಖೀತ ರೂಪದ ಪ್ರಸ್ತಾವನೆ ಸಲ್ಲಿಸಲು ಅವರಿಗೆ
ಸೂಚಿಸಲಾಗಿದೆ ಎಂದು ಹೇಳಿದರು.

ಎಲ್‌ಇಡಿ ಬಲ್ಬ್ ಸರಬರಾಜು ಸ್ಥಗಿತ: ರಾಜ್ಯದ ಗ್ರಾಹಕರಿಗೆ ಎಲ್‌ಇಡಿ ಬಲ್ಬ್ಗಳನ್ನು ಸರಬರಾಜು ಮಾಡುವುದನ್ನು ನಿಲ್ಲಿಸಲಾಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಬಲ್ಬ್ ಪೂರೈಕೆ ಮಾಡದಿರುವುದೇ ಇದಕ್ಕೆ ಕಾರಣ. ಕೇಂದ್ರ ಪೂರೈಕೆ ಮಾಡಿದ ತಕ್ಷಣ ಇಲ್ಲಿ ವಿತರಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಡಿ.ಕೆ.ಶಿವಕುಮಾರ್‌ ಉತ್ತರಿಸಿದರು.

ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ನಾಯಕ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next