ಬಿಸ್ಬೇನ್: ಅಗ್ರ ಶ್ರೇಯಾಂಕಿತ ಹಾಲಿ ಚಾಂಪಿಯನ್ ಕೆನಡಾದ ಮಿಲೋಸ್ ರಾನಿಕ್ ಅವರಿಗೆ ಆಘಾತಕಾರಿ ಸೋಲಿಕ್ಕಿದ ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ “ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೆನಿಸ್’ ಟೂರ್ನಿಯ ಪ್ರಶಸ್ತಿ ಸುತ್ತಿಗೆ ನೆಗೆದಿದ್ದಾರೆ.
ಜಪಾನಿನ ಕೀ ನಿಶಿಕೊರಿ ಮತ್ತೂಬ್ಬ ಫೈನಲಿಸ್ಟ್ 7ನೇ ಶ್ರೇಯಾಂಕದ ಡಿಮಿಟ್ರೋವ್ ಶನಿವಾರದ ಸೆಮಿಫೈನಲ್‌ನಲ್ಲಿ ವಿಶ್ವದ ನಂಬರ್-3 ಆಟಗಾರ ರಾನಿಕ್ ಅವರಿಗೆ 7-6 (7), 6-2 ಅಂತರದ ಸೋಲುಣಿಸಿದರು. ಇವರಿಬ್ಬರ ಮುಖಾಮುಖೀ “ಪ್ಯಾಟ್ ರಾಫ್ಟರ್ ಎರೆನಾ’ದಲ್ಲಿ 88 ನಿಮಿಷಗಳ ಕಾಲ ಸಾಗಿತು.
ಕೀ ನಿಶಿಕೋರಿ ಕೂಡ ದೊಡ್ಡ ಬೇಟೆಯ ಮೂಲಕ ಫೈನಲಿಗೆ ಲಗ್ಗೆ ಇರಿಸಿದರು. ಮೊದಲ ಸೆಮಿಫೈನಲ್‌ನಲ್ಲಿ ಅವರು ಯುಎಸ್ ಓಪನ್ ಚಾಂಪಿಯನ್, ಸ್ವಿಟ್ಸರ್‌ಲ್ಯಾಂಡಿನ ಸ್ಟಾನಿಸ್ಲಾಸ್ ವಾವ್ರಿಂಕ ವಿರುದ್ಧ 7-6 (3), 6-3 ಅಂತರದ ಗೆಲುವು ಸಾಧಿಸಿದರು.
ಇಬ್ಬರ ಗೆಲುವಿನಲ್ಲೂ ಸಾಮ್ಯತೆ ಇರುವುದನ್ನು ಗಮನಿಸಿಬಹುದು. ಇವೆರಡೂ ಏರುಪೇರಿನ ಫಲಿತಾಂಶಗಳಾಗಿದ್ದು, ಎರಡೂ ಪಂದ್ಯಗಳ ಮೊದಲ ಸೆಟ್ ಟೈ-ಬ್ರೇಕರ್‌ಗೆ ಎಳೆಯಲ್ಪಟ್ಟಿತ್ತು. ಇಲ್ಲಿನ ಆಘಾತದಿಂದ ರಾನಿಕ್ ಮತ್ತು ವಾವ್ರಿಂಕ ಅವರಿಗೆ ಚೇತರಿಸಲಾಗಲಿಲ್ಲ. ಆದರೆ ಮೊದಲ ಸೆಟ್ ವಶಪಡಿಸಿಕೊಂಡ ಹುರುಪಿನಲ್ಲೇ ಡಿಮಿಟ್ರೋವ್, ನಿಶಿಕೊರಿ ಮುಂದುವರಿದರು.
“ಡಿಮಿಟ್ರೋವ್ ಕಳೆದ ವರ್ಷಾಂತ್ಯದಿಂದ ಸುಧಾರಿತ ಆಟ ಪ್ರದರ್ಶಿಸುತ್ತಿದ್ದಾರೆ. ಅವರೋರ್ವ ಕಠಿನ ಎದುರಾಳಿ…’ ಎಂಬುದಾಗಿ ನಿಶಿಕೊರಿ ಪ್ರತಿಕ್ರಿಯಿಸಿದ್ದಾರೆ.
ಮರ್ರೆ-ಜೊಕೋ ಪ್ರಶಸ್ತಿ ಸೆಣಸು
ದೋಹಾದಲ್ಲಿ ನಡೆಯುತ್ತಿರುವ “ಕತಾರ್ ಓಪನ್’ ಟೆನಿಸ್ ಪಂದ್ಯಾವಳಿಯ ಫೈನಲ್‌ನಲ್ಲಿ ವಿಶ್ವದ ನಂ. 1-2 ಖ್ಯಾತಿಯ ಆ್ಯಂಡಿ ಮರ್ರೆ ಮತ್ತು ನೊವಾಕ್ ಜೊಕೋವಿಕ್ ಮುಖಾಮುಖೀಯಾಗಲಿದ್ದಾರೆ.
ಆ್ಯಂಡಿ ಮರ್ರೆ 6-3, 6-4ರಿಂದ ಥಾಮಸ್ ಬೆರ್ಡಿಶ್ ವಿರುದ್ಧ ಜಯ ಸಾಧಿಸಿದರೆ, ಜೊಕೋವಿಕ್ ಭಾರೀ ಹೋರಾಟದ ಬಳಿಕ ವರ್ಲ್ಡ್ ನಂ. 42 ಟೆನಿಸಿಗ ಫೆರ್ನಾಂಡೊ ವೆರ್ದಸ್ಕೊ ವಿರುದ್ಧ 4-6, 7-6 (9-7), 6-3ರಿಂದ ಗೆದ್ದು ನಿಟ್ಟುಸಿರೆಳೆದರು.