Advertisement

ಸಿದ್ದರಾಮಯ್ಯಗೆ ಟಾಂಗ್‌, ಪ್ರಜ್ವಲ್‌ಗೆ ಬ್ರೇಕ್‌

03:45 AM Jul 06, 2017 | Team Udayavani |

ಬೆಂಗಳೂರು: “ಹಳ್ಳಿಹಕ್ಕಿ’ ಎಚ್‌.ವಿಶ್ವನಾಥ್‌ ಅವರನ್ನು ಜೆಡಿಎಸ್‌ಗೆ  ಕರೆತರುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ.

Advertisement

ಒಂದೆಡೆ ಮುಖ್ಯಮಂತ್ರಿಯವರ ತವರು ಜಿಲ್ಲೆ ಜತೆಗೆ ಅವರದೇ ಸಮುದಾಯದ ನಾಯಕನನ್ನು ಜೆಡಿಎಸ್‌ಗೆ ಸೆಳೆದು ಸಿದ್ದರಾಮಯ್ಯ ಅವರಿಗೆ ಟಾಂಗ್‌ ಕೊಟ್ಟಿದ್ದರೆ, ಮತ್ತೂಂದೆಡೆ ತಮ್ಮ ಸಹೋದರ ಎಚ್‌.ಡಿ.ರೇವಣ್ಣ ಪುತ್ರ ಪ್ರಜ್ವಲ್‌ ರೇವಣ್ಣ  ಮೈಸೂರು ಜಿಲ್ಲಾ ರಾಜಕಾರಣಕ್ಕೆ ಎಂಟ್ರಿ ಆಗುವುದನ್ನು ತಪ್ಪಿಸಿದ್ದಾರೆ.

ಹೀಗಾಗಿ, ಎಚ್‌.ವಿಶ್ವನಾಥ್‌ ಜೆಡಿಎಸ್‌ ಪ್ರವೇಶ ಮೇಲ್ನೋಟಕ್ಕೆ ಪಕ್ಷಾಂತರದಂತೆ ಕಂಡು ಬಂದರೂ ಒಳ ಲೆಕ್ಕಾಚಾರ ಬೇರೆಯದೇ ಇದೆ.

ಹಾಗೆ ನೋಡುವುದಾದರೆ ಎಚ್‌.ವಿಶ್ವನಾಥ್‌ ಹಾಗೂ ದೇವೇಗೌಡರ ಕುಟುಂಬದ ನಡುವೆ ಮೊದಲಿನಿಂದಲೂ ಎಣ್ಣೆ-ಸೀಗೇಕಾಯಿ ರೀತಿಯ ಸಂಬಂಧವೇ. ಆಯಾ ಸಂದರ್ಭಗಳಲ್ಲಿ ರಾಜಕೀಯ ನಿಲುವು- ಒಲವು, ಸಿದ್ಧಾಂತದ ವಿಚಾರ ಬಂದಾಗ ಜೆಡಿಎಸ್‌ ವಿರುದ್ಧ ಹಾಗೂ ಆ ಪಕ್ಷದ ನಾಯಕರ ವಿರುದ್ಧ ಎಚ್‌.ವಿಶ್ವನಾಥ್‌ ಕೆಂಡ ಕಾರಿದ್ದರು. ಆರೋಪ-ಪ್ರತ್ಯಾರೋಪ ಸಹ ಸಾಕಷ್ಟು ಬಾರಿ ಆಗಿತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ ಎಚ್‌.ವಿಶ್ವನಾಥ್‌ ಸೋಲಲು ಸಹ ಒಕ್ಕಲಿಗ ವಿರೋಧಿ ಹಣೆಪಟ್ಟಿಯೇ ಕಾರಣ ಎಂಬ ಮಾತೂ ಇದೆ.ಆದರೆ, ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ ಎಂಬಂತೆ  ಎಚ್‌.ವಿಶ್ವನಾಥ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧ್ವನಿ ಎತ್ತುತ್ತಿದ್ದಂತೆ ಸಹಜವಾಗಿ ಜೆಡಿಎಸ್‌ಗೆ ಹತ್ತಿರವಾದರು.

ಎಚ್‌.ವಿಶ್ವನಾಥ್‌ ಜೆಡಿಎಸ್‌ ಪ್ರವೇಶದ ರೂಪು-ರೇಷೆ ಎರಡು ತಿಂಗಳ ಹಿಂದೆಯೇ ಸಿದ್ಧವಾಗಿತ್ತು. ಮಾತುಕತೆ ಪೂರ್ಣವೂ ಆಗಿತ್ತು. ಒಂದಷ್ಟು ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಟೀಕಾಸ್ತ್ರಗಳನ್ನು ಬಿಟ್ಟು ಮುಜುಗರ ಉಂಟು ಮಾಡಿ ಆ ನಂತರ ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಳ್ಳಲು ಸಮಾಲೋಚನೆ ನಡೆದಿತ್ತು. ಅದರಂತೆ ಎಲ್ಲವೂ ಆಯಿತು ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ಪ್ರಜ್ವಲ್‌ಗೆ ಬ್ರೇಕ್‌
ಮತ್ತೂಂದೆಡೆ ಹಾಸನ ರಾಜಕಾರಣಕ್ಕೆ ಸೀಮಿತವಾಗಿದ್ದ ಎಚ್‌.ಡಿ.ರೇವಣ್ಣ ಪುತ್ರ ಪ್ರಜ್ವಲ್‌ ರೇವಣ್ಣ  ದಿಢೀರ್‌ ಮೈಸೂರು ಜಿಲ್ಲೆಗೆ ಪ್ರವೇಶ ಕೊಟ್ಟು ಹುಣಸೂರಿನಲ್ಲಿ ಸ್ಪರ್ಧೆ ಮಾಡಲು ತಯಾರಿ ಆರಂಭಿಸಿದ್ದು ಎಚ್‌.ಡಿ.ಕುಮಾರಸ್ವಾಮಿಯವರಿಗೆ ತಲೆನೋವಾಗಿತ್ತು.ತಮ್ಮ ಸುಪರ್ದಿಯಲ್ಲಿರುವ ಮೈಸೂರು ಜಿಲ್ಲೆಗೆ ಪ್ರಜ್ವಲ್‌ ರೇವಣ್ಣ ಪ್ರವೇಶ ಮಾಡಿ ಪಕ್ಷ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದು ತಡೆಯುವುದು ಹೇಗೆ ಎಂಬುದೇ ಸಮಸ್ಯೆಯಾಗಿತ್ತು. ಎಚ್‌.ಡಿ.ದೇವೇಗೌಡರಿಗೆ ಹೆಚ್ಚು ಪ್ರಿಯ ಆಗಿರುವ ಪ್ರಜ್ವಲ್‌ ರೇವಣ್ಣ ನನ್ನು ನಿಭಾಯಿಸುವುದು ಕಷ್ಟವಾಗಿತ್ತು. ಹೀಗಾಗಿ, ಎಚ್‌.ವಿಶ್ವನಾಥ್‌ ಅವರನ್ನು ಪಕ್ಷಕ್ಕೆ ಕರೆತಂದು ಹುಣಸೂರಿನಿಂದ ಸ್ಪರ್ಧಿಸುವ ಯೋಜನೆ ರೂಪಿಸಿ ಅದಕ್ಕೆ ದೇವೇಗೌಡರ ಸಮ್ಮತಿಯನ್ನೂ ಪಡೆದು ಸಲೀಸಾಗಿ ಪ್ರಜ್ವಲ್‌ ರೇವಣ್ಣ ಅವರನ್ನು ಹಾಸನಕ್ಕೆ ಸಾಗ ಹಾಕುವಲ್ಲಿಯೂ ಎಚ್‌.ಡಿ.ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ ಎಂಬ ವಾಖ್ಯಾನಗಳು ಕೇಳಿಬರುತ್ತಿವೆ.

ಇದೇ ಕಾರಣಕ್ಕೆ ಮೊದಲಿಗೆ ಪ್ರಜ್ವಲ್‌ ರೇವಣ್ಣ  ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದನ್ನೇ ವಿರೋಧಿಸುತ್ತಿದ್ದ ಕುಮಾರಸ್ವಾಮಿ ನಂತರ ಸ್ಪರ್ಧೆ ಮಾಡುವುದಾದರೆ ಮಾಡಲಿ ಹುಣಸೂರು ಬೇಡ, ಹಾಸನದ ಬೇಲೂರು ಅಥವಾ ಬೇರೆ ಕ್ಷೇತ್ರ ನೋಡಿಕೊಳ್ಳಲಿ ಎಂಬ ಸಂದೇಶ ರವಾನಿಸಿ. ಆದೇ ಸಮಯಕ್ಕೆ ಪತ್ನಿ ಅನಿತಾ ಕುಮಾರಸ್ವಾಮಿ ಚನ್ನಪಟ್ಟಣದಿಂದ ಸ್ಪರ್ಧೆಗೆ ದೇವೇಗೌಡರ ಒಪ್ಪಿಗೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

ದಲಿತ ನಾಯಕ ವಿ.ಶ್ರೀನಿವಾಸಪ್ರಸಾದ್‌ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಸೇರಿದ್ದಾರೆ. ಜಿಲ್ಲೆಯ ಮತ್ತೂಬ್ಬ ಪ್ರಭಾವಿ ನಾಯಕ ಹಾಗೂ ಕುರುಬ ಸಮುದಾಯದಲ್ಲಿ ಸಿದ್ದರಾಮಯ್ಯ,  ಕೆ.ಎಸ್‌. ಈಶ್ವರಪ್ಪ ಅವರ ನಂತರ ನಿಲ್ಲುವ ಎಚ್‌.ವಿಶ್ವನಾಥ್‌ ಅವರನ್ನು ಜೆಡಿಎಸ್‌ಗೆ ಕರೆತಂದರೆ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ ಬಲ ಕುಗ್ಗುತ್ತದೆ. ಕೆ.ಆರ್‌.ನಗರ ಸೇರಿ ಮೈಸೂರು -ಕೊಡಗು ಹಾಗೂ ರಾಜ್ಯದ ಹಲವು ಭಾಗಗಳಲ್ಲಿ ವಿಶ್ವನಾಥ್‌ ವೈಯಕ್ತಿಕವಾಗಿ ಪ್ರಭಾವ ಹೊಂದಿರುವುದರಿಂದ ಆ ಮೂಲಕ ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಎದಿರೇಟು ನೀಡಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡೇ  ಎಚ್‌ಡಿಕೆ  “ಹಳ್ಳಿ ಹಕ್ಕಿ’ಗೆ ಗಾಳ ಹಾಕಿದರು ಎಂದೂ ಹೇಳಲಾಗಿದೆ.

– ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next