ರಾಮನಗರ: ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ಕೊರೊನಾ ಶಂಕಿತ ಪ್ರಕರಣ ವರದಿಯಾದಲ್ಲಿ ತಕ್ಷಣ ಅದನ್ನು ಆರೋಗ್ಯ ಇಲಾಖೆ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಖಾಸಗಿ ವೈದ್ಯರು ಮತ್ತು ವೈದ್ಯಾಲಯಗಳ ಮುಖ್ಯಸ್ಥರಿಗೆ ಸೂಚನೆ ನೀಡಿದರು.
ಕೊರೊನಾ ವೈರಸ್ ನಿಯಂತ್ರಣದ ವಿಚಾರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಖಾಸಗಿ ವೈದ್ಯರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಂಕಿತ ರೋಗಿಯ ಸಂಪೂರ್ಣ ವಿವರ, ರೋಗಿ ಓಡಾಡಿದ ಸ್ಥಳ, ಭೇಟಿ ಮಾಡಿದ ವ್ಯಕ್ತಿಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ಕೊಟ್ಟರೆ, ನಿಯಂತ್ರಣ ಕೈಗೊಳ್ಳಲು ಸಹಾಯವಾಗುತ್ತದೆ ಎಂದರು.
ಸಹಕರಿಸಿ: ರಾಮನಗರ ಜಿಲ್ಲೆ ಬೆಂಗಳೂರಿಗೆ ಸಮೀ ಪವಿರುವುದರಿಂದ ಪ್ರಕರಣಗಳು ಹರಡದಂತೆ ಎಲ್ಲಾ ಖಾಸಗಿ ವೈದ್ಯರು ಸಹಕರಿಸ ಬೇಕೆಂದು ಮನವಿ ಮಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್ ಮಾತನಾಡಿ, ರಾಜ್ಯ ಮಟ್ಟದಿಂದ ಪ್ರವಾಸಿಗರ ಮಾಹಿತಿ ಬರುತ್ತಿದ್ದು, ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಕಾರ್ಯಾ ನುಸರಣೆ ಮಾಡಲಾಗುತ್ತಿದೆ. ಆದಾಗ್ಯೂ ಖಾಸಗಿ ಆಸ್ಪತ್ರೆಗಳಿಗೆ ಬಂದಂತಹ ಶಂಕಿತ ಪ್ರಕರಣಗಳ ಸಂಪೂರ್ಣ ಮಾಹಿತಿಯನ್ನು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿಗೆ ತಿಳಿಸಬೇಕು. ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಐದು ಹಾಸಿಗೆಗಳುಳ್ಳ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಬೇಕೆಂದರು.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಡಾ.ಶ್ರೀಧರ್ , ಕೊರೋನಾ ವೈರಸ್ ನಿಯಂತ್ರಣದಲ್ಲಿ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ವೈದ್ಯರು ಸಂಪೂರ್ಣ ಸಹಕಾರ ನೀಡು ವುದಾಗಿ ತಿಳಿಸಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಪ್ರಸನ್ನ ಕುಮಾರ್ ಮಾತನಾಡಿ, ಕೊರೊನಾ ವೈರಸ್ ಬಗ್ಗೆ ಇತ್ತೀಚಿನ ಸ್ಥಿತಿ-ಗತಿಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿಗಳು, ಸಾರ್ವಜನಿಕರ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳು, ಜಿಲ್ಲಾ ಶಸ್ತ್ರ ಚಿಕಿತ್ಸಕರು ಇದ್ದರು.