ಕಲಬುರಗಿ: ನ್ಯಾಯಾಂಗದಿಂದ ಪರಿಶಿಷ್ಟ ಜಾತಿ ಮತ್ತು ಪಂಡಗ ಹಾಗೂ ಹಿಂದಳಿದ ವರ್ಗಗಳ ಹಕ್ಕಿ ಧಕ್ಕೆಯಾಗುವ ಆದೇಶಗಳು ಬರುತ್ತಿವೆ. ಹೀಗಾಗಿ ನ್ಯಾಯಾಂಗದಲ್ಲಿ ಕಡ್ಡಾಯವಾಗಿ ಮೀಸಲಾತಿ ಜಾರಿ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಉತ್ತರಾಖಂಡ್ ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಹುದ್ದೆಗಳ ಬಡ್ತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾತಿ ನೀಡಿರಲಿಲ್ಲ. ಇದನ್ನು ಅಲ್ಲಿನ ಹೈಕೋರ್ಟ್ ರದ್ದು ಮಾಡಿ ಆದೇಶ ಹೊರಡಿಸಿತ್ತು. ಹೈಕೋರ್ಟ್ ಆದೇಶ ವಿಚಾರವಾಗಿ ಸುಪ್ರೀಂಕೋರ್ಟ್ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಹೇಳಿದ್ದು, ಸಾಂವಿಧಾನ ಮತ್ತು ಮೀಸಲಾತಿ ಪರಿಕಲ್ಪನೆಗೆ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟ್‌ನ ಇಂತಹ ಹೇಳಿಕೆಯಿಂದ ಸಾಮಾಜಿಕ ನ್ಯಾಯದ ಸಂವಿಧಾನ ಬದ್ಧವಾಗಿರುವ ಮೀಸಲಾತಿಗೆ ಧಕ್ಕೆ ಬರುವ ಆತಂಕ ಎದುರಾಗಿದೆ. ಪರಿಶಿಷ್ಟರು ಮತ್ತು ಹಿಂದುಳಿದ ವರ್ಗದವರಿಗೆ ಪ್ರಾತಿನಿಧಿಕ ಆಧಾರದ ಮೇಲೆ ಮತ್ತು ಮೀಸಲಾತಿ ಅನುಸಾರವಾಗಿ ನೇಮಕಾತಿ ಹಾಗೂ ಬಡ್ತಿ ನೀಡುವಲ್ಲಿ ರಾಜ್ಯಗಳು ವಿಫಲವಾಗಿವೆ. ಸಾಮಾಜಿಕ ನ್ಯಾಯದಿಂದ ವಂಚಿತವಾಗಿರುವುದನ್ನು ಸುಪ್ರೀಂಕೋರ್ಟ್ ಯಾಕೆ ಕಣ್ಣು ತೆರೆದು ನೋಡುವುದಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ಹೊರಹಾಕಿದರು.
ಸರ್ಕಾರಿ ನೌಕರರಿಗೆ ಮೀಸಲಾತಿ ಮತ್ತು ಬಡ್ತಿ ಮೀಸಲಾತಿ ನೀಡುವುದು ಆಯಾ ರಾಜ್ಯಗಳಿಗೆ ಬಿಟ್ಟಿದ್ದು ಎಂಬ ಸುಪ್ರೀಂನ ಅಭಿಪ್ರಾಯ ಕೂಡ ಗೊಂದಲಕಾರಿಯಾಗಿದೆ. ಪರಿಶಿಷ್ಟ ಬದುಕಿನ ಪ್ರಶ್ನೆಯಾಗಿದ್ದರಿಂದ ಗಂಭೀರ ಪರಿಣಾಮಗಳು ಬೀರುವ ಸಾಧ್ಯತೆಗಳು ಕೂಡ ಇವೆ. ಪರಿಶಿಷ್ಟರು ಮತ್ತು ಹಿಂದಳಿದ ವರ್ಗಗಳ ಹಕ್ಕಿ ಧಕ್ಕೆಯಾಗಲು ಮೂಲ ಕಾರಣ ನ್ಯಾಯಾಂಗದಲ್ಲೇ ಮೀಸಲಾತಿ ಇಲ್ಲದಿರುವುದು. ಹೀಗಾಗಿ ಪರಿಶಿಷ್ಟರು ಮತ್ತು ಹಿಂದುಳಿದ ಸಮುದಾಯಗಳಿಗೆ ನ್ಯಾಯಾಂಗದಲ್ಲಿ ಮೀಸಲಾತಿ ಕಡ್ಡಾಯವಾಗಿ ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಅರ್ಜುನ ಭದ್ರೆ, ಮುಖಂಡರಾದ ಮಹಾಂತೇಶ ಬಡದಾಳ,ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಅಜಾದಪೂರ, ಶಿವುಕುಮಾರ ಕೋರಳ್ಳಿ, ಸಂತೋಷ ಗದ್ದಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.