ಕಲಬುರಗಿ: ಒಳ್ಳೆಯ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಜನರಿಗೆ ಉತ್ತಮ ಸವಲತ್ತು ಸಿಗಬೇಕಾದರೆ ಒಳ್ಳೆಯ ಜನರಿಗೆ ಮತ ನೀಡಬೇಕು. ಅಂತಹ ಒಳ್ಳೆಯ ವ್ಯಕ್ತಿ ಎಚ್.ಡಿ. ಕುಮಾರಸ್ವಾಮಿ ಆಗಿದ್ದಾರೆ ಎಂದು ಅಫಜಲಪುರ ತಾಲೂಕು ಜೆಡಿಎಸ್ ಮುಖಂಡ ಗೋವಿಂದ ವಿ.ಭಟ್ ಹೇಳಿದರು.
ತಾಲೂಕಿನ ಫರಹತಾಬಾದ ಗ್ರಾಮದಲ್ಲಿ ಜೆಡಿಎಸ್ ವಲಯ ಕಾರ್ಯಾಲಯ ಹಾಗೂ ಮನೆ-ಮನೆಗೆ ಕುಮಾರಣ್ಣನವರ
ಯಾತ್ರೆ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಮುಖ್ಯಮಂತ್ರಿಯಾದ ಕೇವಲ 24 ಗಂಟೆಗಳಲ್ಲಿ ಅವರು ಹೇಳಿದ ಹಾಗೆ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿರುವ ರೈತರ ಸಾಲ ಮನ್ನಾ ಮಾಡುತ್ತಾರೆ. ಇದಕ್ಕೆ ಅನುಮಾನವೇ ಇಲ್ಲ ಎಂದು ಹೇಳಿದರು.
ಈಶಾನ್ಯ ವಲಯ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಬಿ. ಅಂಬಲಗಿ ಮಾತನಾಡಿ, 2018ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಅಧಿಕಾರ ಚುಕ್ಕಾಣಿ ಹಿಡಿದು ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೆ, ಫರಹತಾಬಾದ ವಲಯದಲ್ಲಿ ಮಹಿಳಾ ಮತ್ತು ಹುಡುಗರ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಿಸುವುದು ನನ್ನ ಜವಾಬ್ದಾರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೂರಾರು ಯುವಕರು ಭಾಗೇಶ ಅವರ ನೇತೃತ್ವದಲ್ಲಿ ಜೆಡಿಎಸ್ಗೆ ಸೇರ್ಪಡೆಯಾದರು. ಜೆಡಿಎಸ್ ಮುಖಂಡರಾದ ಜಾಫರ್ ಹುಸೇನಸಾಬ್, ರಾಜಶೇಖರ ಪಾಟೀಲ, ಶರಣಬಸಪ್ಪ ಕಲಶೆಟ್ಟಿ, ವಿನೋದಕುಮಾರ
ಹರವಾಳಕರ್, ನಾಗರಾಜ ಪಾಟೀಲ, ಅಮೀನರೆಡ್ಡಿ, ಕಿರಣ ಪಾಟೀಲ, ಸುನೀಲ ಹೊಸಮನಿ, ಪ್ರಭುಗೌಡ ಪಾಟೀಲ,
ಭಾಗೇಶ, ಸಂತೋಷ ಇದ್ದರು. ಯುವ ಮುಖಂಡ ಮಹೇಶ ಬಿರಾದಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.