ನಟಿ ಬೃಂದಾ ಆಚಾರ್ಯ ಈಗ ಮಹಿಳಾ ಪ್ರಧಾನ ಸಿನಿಮಾ ಸಿನಿಮಾವೊಂದರ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದೆ. ಹೌದು, “ರೀತು’ ಎಂಬ ಸಿನಿಮಾದಲ್ಲಿ ಬೃಂದಾ ಆಚಾರ್ಯ ನಾಯಕಿಯಾಗಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದು, ಈಗಾಗಲೇ ಸದ್ದಿಲ್ಲದೆ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿರುವ ಈ ಸಿನಿಮಾ ಇದೀಗ ಸೆಟ್ಟೇರಿದೆ.
ಮಂಡ್ಯದಲ್ಲಿ ಕೆಲ ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಬೃಂದಾ ಆಚಾರ್ಯ ಮಂಡ್ಯ ಹುಡುಗಿಯ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ “ಜನರಕ್ಷಕ’, “ಅಮೂಲ್ಯ’ ಎಂಬ ಎರಡು ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕಿ ಗೌರಿಶ್ರೀ “ರೀತು’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. “ವಿ 2 ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಆನಂದ ಹಲಗಪ್ಪ, ಹೇಮಂತ್ ಹೆಚ್. ಕೆ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.
ಮುಹೂರ್ತದ ಬಳಿಕ “ರೀತು’ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕಿ ಗೌರಿಶ್ರೀ, “ಮಂಡ್ಯದಲ್ಲಿ ಕೆಲ ವರ್ಷಗಳ ಹಿಂದೆ ನಡೆದ ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ಮಾಡುತ್ತಿದ್ದೇವೆ. ಇದೊಂದು ಮಹಿಳಾ ಪ್ರಧಾನ ಕಥಾಹಂದರದ ಸಿನಿಮಾ. ತನ್ನ ಕುಟುಂಬದಲ್ಲಿ ಹಾಯಾಗಿದ್ದ ಮುದ್ದು ಮುಖದ, ಮುಗ್ಧ ಹುಡುಗಿಯೊಬ್ಬಳ ಜೀವನ ಮದುವೆಯ ನಂತರ ಹೇಗೆ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಂಡು ಬದಲಾಗುತ್ತದೆ. ಅದರಿಂದ ಆಕೆ ಹೇಗೆ ಹೊರಬರುತ್ತಾಳೆ? ಎಂಬುದೇ ಸಿನಿಮಾ ಕಥೆಯ ಎಳೆ’ ಎಂದು ಮಾಹಿತಿ ನೀಡಿದರು.
ಮೊದಲ ಬಾರಿಗೆ ಮಹಿಳಾ ನಿರ್ದೇಶಕರ ಜೊತೆ, ಮಹಿಳಾ ಪ್ರಧಾನ ಸಿನಿಮಾದಲ್ಲಿ ಅಭಿನಯಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇದರಲ್ಲಿ ಮಂಡ್ಯ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಸಿನಿಮಾದ ಕಥೆಯಲ್ಲಿ ತುಂಬ ಎಮೋಶನ್ಸ್ ಇದೆ. “ರೀತು’ ಎಲ್ಲರಿಗೂ ಮನಮುಟ್ಟುವಂಥ ಸಿನಿಮಾ ಆಗಲಿದೆ’ ಎಂಬುದು ನಾಯಕಿ ಬೃಂದಾ ಆಚಾರ್ಯ ಮಾತು.
ಇನ್ನು “ರೀತು’ ಸಿನಿಮಾದಲ್ಲಿ ಯುವ ಪ್ರತಿಭೆಗಳಾದ ಆರ್ಯನ್, ಪ್ರಫುಲ್ ಸುರೇಂದ್ರ, ಶೋಭರಾಜ್, ನಾಗೇಂದ್ರ ಅರಸ್, ಲಯ ಕೋಕಿಲ, ಶ್ರೀನಿವಾಸ್, ಶಿವಕುಮಾರ ಆರಾಧ್ಯ, ಸಂತ ನಟರಾಜ್, ಜಾಹ್ನವಿ, ತೇಜಸ್ವಿನಿ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾದ ಐದು ಹಾಡುಗಳಿಗೆ ಹೇಮಂತ್ ಸಂಗೀತ ಸಂಯೋಜಿಸುತ್ತಿದ್ದು, ಸಂದೀಪ್ ಹೊನ್ನಳ್ಳಿ ಛಾಯಾಗ್ರಹ ವಿದೆ. ಸದ್ಯ ಮುಹೂರ್ತವನ್ನು ಆಚರಿಸಿಕೊಂಡಿರುವ “ರೀತು’ ಚಿತ್ರತಂಡ, ಬೆಂಗಳೂರು, ಊಟಿ, ಮೈಸೂರು, ಮಡಿಕೇರಿ, ಮಂಡ್ಯ ಸುತ್ತಮುತ್ತ ಸಿನಿಮಾದ ಚಿತ್ರೀಕರಣ ನಡೆಸುವ ಯೋಜನೆ ಹಾಕಿಕೊಂಡಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಆಗಸ್ಟ್ ವೇಳೆಗೆ “ರೀತು’ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.