Advertisement

ಬ್ರಿಮ್ಸ್‌ ಆಸ್ಪತ್ರೆ ಅವ್ಯವಹಾರ; ತನಿಖೆಗೆ ಒತ್ತಾಯಿಸಿ ಮನವಿ

12:25 PM Mar 03, 2022 | Team Udayavani |

ಬೀದರ: ನಗರದ ಬ್ರಿಮ್ಸ್‌ ಆಸ್ಪತ್ರೆಯಲ್ಲಿ ನಡೆದ ಅವ್ಯವಹಾರದ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಭ್ರಷ್ಟಾಚಾರ ನಿರ್ಮೂಲನ ಸಮಿತಿ ಒತ್ತಾಯಿಸಿದೆ.

Advertisement

ಈ ಕುರಿತು ಸಮಿತಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಜೇಸನ್‌ ಮೋಡಿ ಹಾಗೂ ಕ್ಷೇತ್ರ ಅಧಿಕಾರಿ ಪ್ರಶಾಂತ ಜೇಮ್ಸ್‌ ಗುತ್ತೇದಾರ್‌ ಅವರು ವೈದ್ಯಕೀಯ ಶಿಕ್ಷಣ ಸಚಿವ, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ, ಪ್ರಾದೇಶಿಕ ಆಯುಕ್ತ ಹಾಗೂ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ವಿವಿಧ ಕಾಮಗಾರಿಗಳ ಟೆಂಡರ್‌, ಯಂತ್ರೋಪಕರಣಗಳ ಖರೀದಿ, ಸರಬರಾಜು, ಹೊರ ಗುತ್ತಿಗೆ ನೌಕರರ ನೇಮಕಾತಿ ಮೊದಲಾದವುಗಳಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆಸ್ಪತ್ರೆ ಆಡಳಿತ ವಿಭಾಗದ ಕೆಲ ಸಿಬ್ಬಂದಿ ಕೆಲ ಗುತ್ತಿಗೆದಾರರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಅವ್ಯವಹಾರ ನಡೆಸುತ್ತಿದ್ದಾರೆ.

1 ಲಕ್ಷ ರೂ. ಮೇಲ್ಪಟ್ಟ ಕಾಮಗಾರಿಗೆ ಟೆಂಡರ್‌ ಕರೆಯಬೇಕಾಗುತ್ತದೆ. ಹೀಗಾಗಿ ಸಿಬ್ಬಂದಿಯೇ ನಿರ್ವಹಣೆ ಹೆಸರಲ್ಲಿ ಅದಕ್ಕೂ ಕಡಿಮೆ ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದಾರೆ. ಬೋಗಸ್‌ ಬಿಲ್‌ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ಕಾಮಗಾರಿಗಳ ಟೆಂಡರ್‌ ನೀಡಿಕೆಯಲ್ಲಿ ನೀತಿ, ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಅಧಿಕಾರಿಗಳು ತಮಗೆ ಬೇಕಾದವರಿಗೆ ಟೆಂಡರ್‌ ಕೊಡಿಸುತ್ತಿದ್ದಾರೆ. ಕಳಪೆ ಕಾಮಗಾರಿ ಮೂಲಕ ಅವ್ಯವಹಾರ ಎಸಗುತ್ತಿದ್ದಾರೆ.

Advertisement

ಜಿಲ್ಲೆಯ ಜನರ ಅನುಕೂಲಕ್ಕಾಗಿ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಬ್ರಿಮ್ಸ್‌ ಆಸ್ಪತ್ರೆ ಕಟ್ಟಡ ಸೋರುತ್ತಿರುವುದೇ ಕಳಪೆ ಕಾಮಗಾರಿಗೆ ನಿದರ್ಶನವಾಗಿದೆ ಎಂದು ಹೇಳಿದ್ದಾರೆ.

ನೇಮಕಾತಿಯಲ್ಲಿ ಅರ್ಹರಿಗೆ ಅನ್ಯಾಯ ಮಾಡಲಾಗುತ್ತಿದೆ. ಆಸ್ಪತ್ರೆ ಅಧಿಕಾರಿಗಳ ಸಂಬಂಧಿಕರಿಗೆ ಆದ್ಯತೆ ನೀಡಲಾಗುತ್ತಿದೆ. ಅನೇಕರ ದಾಖಲಾತಿಗಳು ಸರಿಯಾಗಿಲ್ಲ. ಹಲವು ವರ್ಷಗಳ ನಂತರವೂ ಅನೇಕರು ಕನ್ನಡ ಕಲಿತಿಲ್ಲ ಎಂದು ಆರೋಪಿಸಿದ್ದಾರೆ.

ಬ್ರಿಮ್ಸ್‌ ಆಸ್ಪತ್ರೆ ಕಾಮಗಾರಿಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದರೂ ಮಾಹಿತಿ ಕೊಡುತ್ತಿಲ್ಲ. ಬ್ರಿಮ್ಸ್‌ ಆಸ್ಪತ್ರೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದರೂ ಬ್ರಿಮ್ಸ್‌ ವೈದ್ಯಕೀಯ ನಿರ್ದೇಶಕ ಡಾ| ಚಂದ್ರಕಾಂತ ಚಿಲ್ಲರ್ಗಿ ಮೌನ ವಹಿಸಿದ್ದಾರೆ. ಹೀಗಾಗಿ ಅವರ ಮೇಲೂ ಸಂಶಯ ಮೂಡಿದೆ ಎಂದು ಹೇಳಿದ್ದಾರೆ. ಕೂಡಲೇ ಬ್ರಿಮ್ಸ್‌ ಆಸ್ಪತ್ರೆಯ ಅವ್ಯವಹಾರದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next