ರಾಯಚೂರು: ಕೃಷ್ಣಾ ನದಿ ನಡುಗಡ್ಡೆಯಾದ ತಾಲೂಕಿನ ಕುರ್ವಕುಲಾಕ್ಕೆ ಸಂಪರ್ಕ ಕಲ್ಪಿಸುವ ಎರಡು ಸೇತುವೆಗಳ ಕಾಮಗಾರಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧಿ ಕಾರಿಗಳ ತಂಡ ಬುಧವಾರ ಭೇಟಿ ನೀಡಿ ಪರಿಶೀಲಿಸಿತು.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್.ಪ್ರಕಾಶ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ, ನದಿ ಪಾತ್ರದ ಹಳ್ಳಿಗಳು ಹಾಗೂ ನನೆಗುದಿಗೆ ಬಿದ್ದ ಎರಡು ಸೇತುವೆಗಳನ್ನು ಪರಿಶೀಲಿಸಿದರು. ಸೇತುವೆ ನಿರ್ಮಾಣಕ್ಕಾಗಿ ಬಳಸಿದ ಸಾಮಗ್ರಿಗಳು ಕೂಡ ಇನ್ನೂ ಸ್ಥಳದಲ್ಲೇ ಬಿದ್ದಿರುವುದು ಗಮನಿಸಿದ ಅವರು, ಬಳಿಕ ಸ್ಥಳೀಯರೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ನಡುಗಡ್ಡೆಗಳಲ್ಲಿ ವಾಸಿಸುವ ಜನರಿಗೆ ರಸ್ತೆ ಮಾರ್ಗಗಳಿಲ್ಲ. ಏನೇ ವಹಿವಾಟು ನಡೆಸಬೇಕಾದರೂ ತೆಪ್ಪದ ಮೂಲಕವೇ ಹೋಗಬೇಕು. ಹಿಂದೆ ಯಾವಗೆಲ್ಲ ಪ್ರವಾಹ ಬಂದರೂ ಅಲ್ಲಿ ವಾಸಿಸುವ ಜನಜೀವನ ಬಳಕ ಸಂಕಷ್ಟಮಯವಾಗಿರುತ್ತದೆ. 2009, 2019ರಲ್ಲಿ ಭಾರೀ ಪ್ರಮಾಣದ ಪ್ರವಾಹ ಬಂದಾಗ ನಡುಗಡ್ಡೆಗಳ ಜನ ಅಕ್ಷರಶಃ ನಲುಗಿ ಹೋಗಿದ್ದರು. ಈಚೆಗೂ ಪ್ರವಾಹಕ್ಕೆ ಸಿಲುಕಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.
ಹೀಗಾಗಿ ಸಾಧ್ಯವಾದಷ್ಟು ತ್ವರಿತ ಗತಿಯಲ್ಲಿ ಸೇತುವೆ ಕಾಮಗಾರಿಗಳನ್ನು ನಿರ್ವಹಿಸಿದರೆ ಅನುಕೂಲವಾಗುತ್ತದೆ ಎಂದು ಅಲವತ್ತುಕೊಂಡರು.
ಬಳಿಕ ಪ್ರತಿಕ್ರಿಯಿಸಿದ ವ್ಯವಸ್ಥಾಪಕ ನಿರ್ದೇಶಕ, ಈಗಾಗಲೇ ಇಲ್ಲಿ ಅರ್ಧದಷ್ಟು ಕಾಮಗಾರಿ ನಿರ್ವಹಿಸಲಾಗಿದೆ. ಆದರೆ, ಈಗ ಉಳಿದ ಕೆಲಸವನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಚಿಂತಿಸಬೇಕಿದೆ. ಈಗಾಗಲೇ ಕಬ್ಬಿಣದ ಸಾಮಗ್ರಿಗಳ ಬಳಕೆ ಮಾಡಿರುವ ಕಾರಣ ಅದೇ ಮಾದರಿಯಲ್ಲಿ ನಿರ್ಮಿಸಬೇಕೇ ಅಥವಾ ನೂತನ ಮಾದರಿ ಬಳಸಬೇಕೆ ಎಂಬ ಬಗ್ಗೆ ತಜ್ಞರ ವರದಿ ಪಡೆಯಲಾಗುವುದು. ಅದನ್ನು ಆಧರಿಸಿ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಗೆ ಸಮಗ್ರ ವರದಿ ಸಲ್ಲಿಸಲಾಗುವುದು. ಅದರ ಜತೆಗೆ ಬೂರ್ದಿಪಾಡ್ ಬಳಿ ನಾರದಗಡ್ಡೆಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣದ ನೀಲನಕ್ಷೆ ಕೂಡ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
ಮುಖ್ಯ ಅಭಿಯಂತರ ಬಿ.ಎಸ್. ಶಿವಕುಮಾರ್, ಕಲಬುರಗಿ ಎಇಇ ಎಸ್ .ಬಿ.ಪಾಟೀಲ್, ಲೋಕೋಪಯೋಗಿ ಇಲಾಖೆ ಈಶಾನ್ಯ ವಲಯದ ಮುಖ್ಯ ಅಭಿಯಂತರ ಆರ್.ವೆಂಕಟೇಶ, ಚನ್ನಬಸಪ್ಪ, ರವೀಂದ್ರ, ರಾಘವೇಂದ್ರ ಇತರರಿದ್ದರು.