Advertisement

ರಬಕವಿ ಮಹೇಷವಾಡಗಿ ಸೇತುವೆ ಕಾಮಗಾರಿಗೆ ಚುರುಕು ; ಬಹುದಿನಗಳ ಕನಸು ನನಸಾಗುವತ್ತ…

05:27 PM Mar 09, 2022 | Team Udayavani |

ರಬಕವಿ-ಬನಹಟ್ಟಿ; ರಬಕವಿ-ಬನಹಟ್ಟಿ ನೂತನ ತಾಲೂಕು ಕೇಂದ್ರದಿಂದ ಪಕ್ಕದ ಅಥಣಿ ತಾಲೂಕಿನ ಅನೇಕ ಹಳ್ಳಿಗಳನ್ನು ಸಂಪರ್ಕಿಸಲು ಕೃಷ್ಟಾ ನದಿಗೆ ಅಡ್ಡಲಾಗಿ ರಬಕವಿ ಮಹೇಷವಾಡಗಿ ಬೃಹತ್ ಸೇತುವೆ ನಿರ್ಮಾಣದ ಕಾಮಗಾರಿ ಕಳೆದ ಎರಡು ಮೂರು ತಿಂಗಳಿನಿಂದ ಬಲು ಚುರುಕಿನಿಂದ ನಡೆದಿದೆ. ಇದರಿಂದ ನೂತನ ತಾಲೂಕಿನ ಜನರ ಮುಖದಲ್ಲಿ ಮಂದಹಾಸ ಮೂಡುವಂತಾಗಿದೆ.

Advertisement

ತೇರದಾಳ ಕ್ಷೇತ್ರದ ಮಾಜಿ ಶಾಸಕಿ, ಸಚಿವೆ ಉಮಾಶ್ರೀಯವರ ಅಧಿಕಾರವಧಿಯಲ್ಲಿ ಈ ಬೃಹತ್ ಸೇತುವೆ ಕಾಮಗಾರಿಗೆ ಚಾಲನೆ ನೀಡಿದ್ದರು. ಈ ಸಧ್ಯೆ ಇದು ಒಟ್ಟು ರೂ.40 ಕೋಟಿ ವೆಚ್ಚದ ಕಾಮಗಾರಿಯಾಗಿದೆ, ಕಾಮಗಾರಿ ಮುಗಿಯುವುದರೊಳಗಾಗಿ ವೆಚ್ಚ ಹೆಚ್ಚಾಗುವು ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ನದಿ ತೀರದ ಕೂಗಳತೆಯಲ್ಲಿಯೇ ರಬಕವಿ-ಬನಹಟ್ಟಿ ಸರ್ಕಾರಿ ಪದವಿ ಕಾಲೇಜ ಇದ್ದು, ಅಕ್ಕಪಕ್ಕದ ಹಳ್ಳಿಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮುಂದುವರಿಯಲು ಈ ಸೇತುವೆ ತೀರ ಅನುಕೂಲವಾಗಲಿದೆ. ಇವತ್ತಿನವರೆಗೂ ಅಥಣಿ ತಾಲೂಕಿನ ಅಕ್ಕಪಕ್ಕದ ಗ್ರಾಮದ ನೂರಾರು ವಿದ್ಯಾರ್ಥಿಗಳು ದೋಣಿ ಮೂಲಕ ರಬಕವಿ ಬನಹಟ್ಟಿಗೆ ಶಿಕ್ಷಣ ಅರಸಿ ಬರುತ್ತಿದ್ದಾರೆ.

ನದಿ ತೀರದ ಅಕ್ಕಪಕ್ಕದ ಹಳ್ಳಿಗಳ ರೈತಾಪಿ ಜನರು ಫಲವತ್ತಾದ ಕಪ್ಪು ಮಣ್ಣಿನಲ್ಲಿ ಬೆಳೆದ ವಾಣಿಜ್ಯ ಬೆಳೆಗಳಾದ ಕಬ್ಬು, ಬಾಳೆ, ಪೇರು, ಸೀತಾಫಲ, ನೀಲಹಣ್ಣು, ಚಿಕ್ಕು ಸೇರಿದಂತೆ ಅನೇಕ ಬೆಳೆಗಳ ಮತ್ತು ಹಣ್ಣುಹಂಪಲಗಳ ವ್ಯಾಪಾರ ಮಾಡಲು ರಬಕವಿ ಬನಹಟ್ಟಿ ಅವಳಿ ನಗರಗಳ ಮಾರುಕಟ್ಟೆ ತುಂಬಾ ಅನೂಕೂಲಕರವಾಗಿದೆ. ಇಲ್ಲಿಂದ ರಾಜ್ಯದ ಅನೇಕ ನಗರ ಹಾಗೂ ಪಟ್ಟಣಗಳಿಗೆ ವಸ್ತುಗಳನ್ನು ವ್ಯಾಪಾರಮಾಡಲು ಸಾರಿಗೆ ವ್ಯವಸ್ಥೆ ಕೂಡಾ ರಬಕವಿ ಬನಹಟ್ಟಿಯಲ್ಲಿರುವುದರಿಂದ ಈ ಭಾಗದ ರೈತರಿಗೆ ಹಾಗೂ ವ್ಯಾಪಾರಸ್ತರಿಗೆ ಅನೂಕೂಲವಾಗುತ್ತದೆ ಎಂದು ಈ ಭಾಗದ ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

Advertisement

ಸೇತುವೆ ನಿರ್ಮಾಣದಿಂದ ಹೈನುಗಾರಿಕೆ ಕೂಡಾ ಅಭಿವೃದ್ಧಿಯಾಗುತ್ತದೆ. ಈಗ ಅಥಣಿ ತಾಲೂಕಿನ ಮತ್ತು ರಬಕವಿ ಬನಹಟ್ಟಿ ಸುತ್ತಮುತ್ತಲಿನ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಳಿಸಲು ಅಂದಾಜು 50ಕ್ಕೂ ಹೆಚ್ಚು ಕೀ.ಮಿ ಕ್ರಮಿಸಿ ಬರಬೇಕಾಗುತ್ತದೆ. ಆದರೆ ಈ ಸೇತುವೆ ನಿರ್ಮಿಸುವುದರಿಂದ ಕೇವಲ 20 ಕೀ. ಮಿ ಅಂತರದಲ್ಲಿ ಈ ಕಾರ್ಖಾನೆಗಳು ಸಿಗುತ್ತವೆ.

ಇದನ್ನೂ ಓದಿ : ಜೀವನದಲ್ಲಿ ಪ್ರಜಾಸತ್ತಾತ್ಮಕ ತತ್ವಗಳ ಅಳವಡಿಕೆ ಅವಶ್ಯ

ಈ ಬೃಹತ್ ಸೇತುವೆ ಕಾಮಗಾರಿಯನ್ನು ನಾಗಾರ್ಜುನ ಕನ್ಸ್ಟ್ರಕ್ಷನ್ ನವರು ಟೆಂಡರ ಪಡೆದುಕೊಂಡಿದ್ದಾರೆ, ಕಳೆದ ಬೇಸಿಗೆ ಸಂದರ್ಭದಲ್ಲಿ ಸೇತುವೆ ಪಿಲ್ಲರಗಳನ್ನು ಅಳವಡಿಸಿಬೇಕೆಂದರೆ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಲಿಲ್ಲ, ಪಿಲ್ಲರ ಅಳವಡಿಸಲು ತೊಂದರೆಯಾಗಿತ್ತು. ಆದರೆ ಈ ಬಾರಿಯೂ ನದಿಯಲ್ಲಿ ನೀರು ಖಾಲಿಯಾಗದ ಕಾರಣ ತಂತ್ರಜ್ಞಾನದಿಂದ ನೀರೋಳಗೆ ಪಿಲ್ಲರ ಹಾಕುವ ಯೋಜನೆಗೆ ರೂಪಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಕೆಆರ್‌ಡಿಸಿ ಸಂಸ್ಥೆಯ ಅಡಿಯಲ್ಲಿ ಕಾಮಗಾರಿ ಬಲು ಬಿರುಸಿನಿಂದ ಪ್ರಾರಂಭವಾಗಿದ್ದು. ನದಿ ಒಡಲಲ್ಲಿ ೯ ಪಿಲ್ಲರಗಳನ್ನು ಅಳವಡಿಸಲಾಗುವುದು. ನಂತರ ಎರಡೂ ಬದಿಯಲ್ಲಿ ಒಂದೊಂದು ಅಪಾರ್ಟಮೆಂಟ ನಿರ್ಮಿಸಲಾಗುತ್ತದೆ. ಕಳೆದ ಬಾರಿಯ ಪ್ರವಾಹ ಕಾಮಗಾರಿಗೆ ಅಲ್ಪಪ್ರಮಾಣದಲ್ಲಿ ಅಡ್ಡಿಯಾಗಿತ್ತು. ನೂತನ ತಂತ್ರಜ್ಞಾನ ಹೊಂದಿದ ಮಷಿನ್‌ಗಳಿರುವುದರಿಂದ ಕಾಮಗಾರಿಗೆ ಯಾವುದೆ ತೊಂದರೆ ಇಲ್ಲ, ಈ ಕಾಮಗಾರಿಯನ್ನು ೩ ವರ್ಷದ ಅವಧಿಯೊಳಗೆ ಮುಗಿಸಬೇಕಿದೆ.
-ಬಿ. ಎಸ್. ಪಾಟೀಲ. ಕೆಆರ್‌ಡಿಸಿ ಅಸಿಸ್ಟಂಟ್ ಇಂಜಿನೀಯರ್. ಹುಬ್ಬಳ್ಳಿ.

ತೇರದಾಳ ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಅನೇಕ ಹೊಸ ಹೊಸ ಯೋಜನೆಗಳ ಕಾಮಗಾರಿಗಳನ್ನು ಸರ್ಕಾರ ಮಾಡುತ್ತಿದ್ದು, ಅದರಲ್ಲಿ ರಬಕವಿ ಮಹೇಷವಾಡಗಿ ಸೇತುವೆ ಕಾಮಗಾರಿ ಕೂಡಾ ಬಲು ಚುರುಕಿನಿಂದ ಕೂಡಿದ್ದು, ಕಾಮಗಾರಿ ಗುಣಮಟ್ಟದ್ದಾಗಬೇಕು. ಕಾಮಗಾರಿಗೆ ಹೆಚ್ಚಿನ ಅನುದಾನ ಬೇಕಾದಲ್ಲಿ ಬಿಡುಗಡೆಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ.
– ಸಿದ್ದು ಸವದಿ. ಶಾಸಕರು ತೇರದಾಳ ಕ್ಷೇತ್ರ.

ಕಾಮಗಾರಿ ಚುರುಕಿನಿಂದ ಪ್ರಾರಂಭವಾಗಿದ್ದು ನಮಗೂ ಸಂತಸ ತಂದಿದೆ. ಸೇತುವ ನಿರ್ಮಾಣ ಮಾಡಲು ಆರಂಭದಿಂದಲೂ ನಮ್ಮ ಸಂಘ ಮತ್ತು ನಮ್ಮ ಜೊತೆಗೆ ಅವಳಿ ನಗರದ ಹಿರಿಯರು, ಸ್ನೇಹಿತರು ಸಹರಿಸಿದ್ದಾರೆ. ಈ ಸೇತುವೆ ಕಾರ್ಯ ಬೇಗ ಮುಗಿದರೆ ಈ ಭಾಗದ ಜನರ ಬಹುದಿನಗಳ ಕನಸು ನನಸಾದಂತಾಗುತ್ತದೆ.
– ಡಾ. ರವಿ ಜಮಖಂಡಿ ಸಾಮಾಜಿಕ ಕಾರ್ಯಕರ್ತರು, ರಬಕವಿ

– ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next