Advertisement

ಮೇಲ್ಸೇತುವೆ, ಅಂಡರ್‌ಪಾಸ್‌ಗಳೇ ಸುಗಮ ಸಂಚಾರಕ್ಕೆ ತಡೆಗೋಡೆ!

09:35 PM Mar 23, 2019 | Team Udayavani |

ನಗರದ ತೀವ್ರ ಸಂಚಾರದಟ್ಟಣೆಯ ಜಂಕ್ಷನ್‌ಗಳಲ್ಲಿ 2025ರ ವೇಳೆಗೆ 20 ಮೇಲ್ಸೇತುವೆ/ಅಂಡರ್‌ಪಾಸ್‌/ಗ್ರೇಡ್‌ ಸಪರೇಟರ್‌ ನಿರ್ಮಾಣ, ಆರು ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ ವಿಸ್ತರಣೆ ಮತ್ತು ನಾಲ್ಕು ಸಿಗ್ನಲ್‌ ಮುಕ್ತ ಕಾರಿಡಾರ್‌ಗಳು ಹಾಗೂ ಒಂದು ಎತ್ತರಿಸಿದ ಮಾರ್ಗ ಪೂರ್ಣಗೊಳಿಸುವ ಉದ್ದೇಶ ಸರ್ಕಾರಕ್ಕಿದೆ. ವಿಚಿತ್ರವೆಂದರೆ ಇದೇ ಅವಧಿಯಲ್ಲಿ ಕಾರುಗಳ ಸಂಖ್ಯೆ ಸಹ ಈಗಿರುವುದಕ್ಕಿಂತ ದುಪ್ಪಟ್ಟಾಗಲಿದೆ. ಎಲ್ಲವೂ ಅಂದುಕೊಂಡಂತಾದರೆ, ನಗರ ಸಂಚಾರ ಮತ್ತಷ್ಟು ನರಕಯಾತನೆ ಆಗಲಿದೆ.

Advertisement

ಬೆಂಗಳೂರು: ಸಾಮಾನ್ಯವಾಗಿ ಎಲ್ಲರೂ ಅನುಭವದಿಂದ ಪಾಠ ಕಲಿಯುತ್ತಾರೆ. ಆದರೆ, ನಾವು ಮತ್ತು ನಮ್ಮ ಯೋಜನೆಗಳು ಇದಕ್ಕೆ ತದ್ವಿರುದ್ಧ! ಕಳೆದೆರಡು ದಶಕಗಳಲ್ಲಿ ತಲೆಯೆತ್ತಿರುವ ಮೇಲ್ಸೇತುವೆಗಳು ಮತ್ತು ಅಂಡರ್‌ಪಾಸ್‌ಗಳೇ ನಗರದ ಸುಗಮ ಸಂಚಾರಕ್ಕೆ ದೊಡ್ಡ ತಡೆಗೋಡೆಗಳಾಗಿ ನಿಂತಿವೆ. ಹೀಗಿರುವಾಗ ಸಾವಿರಾರು ಕೋಟಿ ರೂ. ಸುರಿದು ಇನ್ನೂ 20 ಫ್ಲೈಓವರ್‌/ ಅಂಡರ್‌ಪಾಸ್‌ ಕಟ್ಟಲು ಸರ್ಕಾರ ಸಜ್ಜಾಗಿದೆ.

ನಗರದ ಅತಿ ಹೆಚ್ಚು ಸಂಚಾರದಟ್ಟಣೆ ಇರುವ ಪ್ರಮುಖ ಜಂಕ್ಷನ್‌ಗಳಲ್ಲಿ 2025ರ ವೇಳೆಗೆ 20 ಫ್ಲೈಓವರ್‌/ಅಂಡರ್‌ಪಾಸ್‌/ಗ್ರೇಡ್‌ ಸಪರೇಟರ್‌ಗಳನ್ನು ನಿರ್ಮಿಸುವ ಗುರಿಯಿದೆ. ಇದಲ್ಲದೆ, ಆರು ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ ವಿಸ್ತರಣೆ ಮತ್ತು ನಾಲ್ಕು ಸಿಗ್ನಲ್‌ ಮುಕ್ತ ಕಾರಿಡಾರ್‌ಗಳು ಹಾಗೂ ಒಂದು ಎತ್ತರಿಸಿದ ಮಾರ್ಗವನ್ನು ಪೂರ್ಣಗೊಳಿಸುವ ಉದ್ದೇಶ ಸರ್ಕಾರಕ್ಕಿದೆ.

ಈ ಪೈಕಿ ಈಗಾಗಲೇ ಒಂಬತ್ತು ಕಾಮಗಾರಿಗಳು ಪ್ರಗತಿಯಲ್ಲಿದ್ದು, ಉಳಿದವು ಸಮಗ್ರ ಯೋಜನಾ ವರದಿ (ಡಿಪಿಆರ್‌) ಅಥವಾ ಟೆಂಡರ್‌ ಸೇರಿದಂತೆ ವಿವಿಧ ಹಂತಗಳಲ್ಲಿವೆ. ವಿಚಿತ್ರವೆಂದರೆ ಇದೇ ಅವಧಿಯಲ್ಲಿ ಕಾರುಗಳ ಮಾಲಿಕತ್ವದ ಪ್ರಮಾಣ ಕೂಡ ಈಗಿರುವುದಕ್ಕಿಂತ ದುಪ್ಪಟ್ಟಾಗಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಅಂದಾಜಿಸಿದೆ. ಇದೆಲ್ಲವೂ ಅಂದುಕೊಂಡಂತೆ ನಡೆದರೆ, ನಗರ ಸಂಚಾರ ಮತ್ತಷ್ಟು ನರಕಯಾತನೆ ಆಗಲಿದೆ.

ನಗರ ವ್ಯಾಪ್ತಿ 800 ಚದರ ಕಿ.ಮೀ. ಇದ್ದು, ಇದರಲ್ಲಿ ರಸ್ತೆ ಜಾಲ 13 ಸಾವಿರ ಕಿ.ಮೀ. ಇದೆ. ಈ ಪೈಕಿ 1,180 ಕಿ.ಮೀ. ಉದ್ದದ ರಸ್ತೆಗಳನ್ನು ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳು ಎಂದು ಗುರುತಿಸಲಾಗಿದೆ. ಸುಗಮ ಸಂಚಾರಕ್ಕೆ ಈ ರಸ್ತೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಪರಿಣಾಮಕಾರಿ ಹಾಗೂ ಸುಗಮ ಸಂಚಾರಕ್ಕೆ ಈ ಮಾರ್ಗಗಳಲ್ಲಿ ಫ್ಲೈಓವರ್‌ಗಳು, ಅಂಡರ್‌ಪಾಸ್‌ಗಳು, ರಸ್ತೆ ವಿಸ್ತರಣೆಯಂತಹ ಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಸರ್ಕಾರದ “ದೂರದೃಷ್ಟಿ-2025’ರ ಯೋಜನಾ ವರದಿಯಲ್ಲಿ ತಿಳಿಸಲಾಗಿದೆ.

Advertisement

ಕಾರುಗಳ ಸಂಖ್ಯೆ ದುಪ್ಪಟ್ಟು?: ಹೀಗೆ ಫ್ಲೈಓವರ್‌ಗಳನ್ನು ನಿರ್ಮಿಸುವ ಮುನ್ನ ಸಂಚಾರದಟ್ಟಣೆ ತಗ್ಗಿಸುವಲ್ಲಿ ಕಳೆದೆರಡು ದಶಕಗಳಲ್ಲಿ ನಿರ್ಮಿಸಿದ ಇದೇ ಫ್ಲೈಓವರ್‌/ಅಂಡರ್‌ಪಾಸ್‌ಗಳ ಪಾತ್ರ ಏನಿದೆ ಎಂಬುದರ ಬಗ್ಗೆ ಚಿಂತನೆ ನಡೆಸುವ ಅವಶ್ಯಕತೆ ಇದೆ. ನಗರದಲ್ಲಿ ಕಾರುಗಳ ಮಾಲಿಕರ ಸಂಖ್ಯೆ ಪ್ರತಿ ಐದು ವರ್ಷಗಳಿಗೊಮ್ಮೆ ದುಪ್ಪಟ್ಟಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿಯೂ ಇದು ದುಪ್ಪಟ್ಟಾಗಲಿದೆ.

ಹೀಗಿರುವಾಗ, ಈ ಮಾದರಿಯ ಮೂಲಸೌಕರ್ಯಗಳು ಸಾಕಾಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ವಾಹನಗಳ ಖರೀದಿಗೆ ಇಂತಹ ಯೋಜನೆಗಳು ಪ್ರೋತ್ಸಾಹಿಸುತ್ತವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಆಶಿಶ್‌ ವರ್ಮ ಕಳವಳ ವ್ಯಕ್ತಪಡಿಸುತ್ತಾರೆ. 

ಮತ್ತೆ ಫ್ಲೈಓವರ್‌ಗಳು, ಅಂಡರ್‌ಪಾಸ್‌ಗಳು, ಸಿಗ್ನಲ್‌ ಮುಕ್ತ ಕಾರಿಡಾರ್‌ಗಳನ್ನು ನಿರ್ಮಿಸುವುದರ ಅರ್ಥ ಸಂಚಾರ ವ್ಯವಸ್ಥೆಯನ್ನ ಮತ್ತಷ್ಟು ಹದಗೆಡಿಸುವುದಾಗಿದೆ. ಹಿಂದಿನ ಐದು ವರ್ಷಗಳಲ್ಲಿ ಇದೇ ಸರ್ಕಾರ 50 ಬಸ್‌ಗಳನ್ನೂ ಹೆಚ್ಚಿಸಿಲ್ಲ. ಆದರೆ, ಮುಂದಿನ ಐದು ವರ್ಷಗಳಲ್ಲಿ ಸಾವಿರಾರು ಕೋಟಿ ಸುರಿದು ರಸ್ತೆಗಳ ಮೇಲೆ ರಸ್ತೆಗಳನ್ನು ನಿರ್ಮಿಸಲು ಹೊರಟಿರುವುದು ವಿಚಿತ್ರ ಎಂದು ವಾಸ್ತುಶಿಲ್ಪಿ ನರೇಶ್‌ ನರಸಿಂಹನ್‌ ತಿಳಿಸುತ್ತಾರೆ.

ದಟ್ಟಣೆಯಿಂದ 6,500 ಕೋಟಿ ರೂ. ನಷ್ಟ!: ನಗರದ ಸಂಚಾರದಟ್ಟಣೆಯಿಂದ ವರ್ಷಕ್ಕೆ 6,500 ಕೋಟಿ ರೂ. ನಷ್ಟ ಆಗುತ್ತಿದೆ! ಹೌದು, ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಮಯ ವ್ಯಯದಿಂದ ಆಗುತ್ತಿರುವ ಆರ್ಥಿಕ ನಷ್ಟದ ಬಗ್ಗೆ ಸಾರಿಗೆ ತಜ್ಞರು ಅಧ್ಯಯನ ನಡೆಸಿದ್ದಾರೆ. ಅದರಂತೆ ವಾರ್ಷಿಕ 6,500 ಕೋಟಿ ರೂ. ನಷ್ಟ ಆಗುತ್ತಿದೆ. ವಾಹನಗಳ ಸಂಖ್ಯೆ ಏರಿಕೆ ಮತ್ತು ಅದಕ್ಕೆ ಉತ್ತೇಜನ ನೀಡುವ ಮೂಲಸೌಕರ್ಯಗಳು ಬರುತ್ತಿರುವುದರಿಂದ ಇದು ಎರಡು ವರ್ಷಗಳಿಗೊಮ್ಮೆ 500 ಕೋಟಿ ರೂ. ಹೆಚ್ಚಳ ಆಗುತ್ತಿದೆ ಎಂದೂ ಅಂದಾಜಿಸಲಾಗಿದೆ.

ನಗರದ ವಾಹನಗಳ ಸರಾಸರಿ ವೇಗಮಿತಿ ಗಂಟೆಗೆ 40 ಕಿ.ಮೀ. ನಿಗದಿಪಡಿಸಲಾಗಿದೆ. ಆದರೆ, ಬೆಂಗಳೂರಿನಲ್ಲಿನ ವಾಹನಗಳ ಸರಾಸರಿ ವೇಗಮಿತಿ ಇದರರ್ಧದಷ್ಟು ಅಂದರೆ ಗಂಟೆಗೆ 20 ಕಿ.ಮೀ. ಆಗಿದೆ. ಇದರಿಂದ ವಾಹನಗಳು ರಸ್ತೆಗಳಲ್ಲಿ ಹೆಚ್ಚು ಸಮಯ ಕಳೆಯಬೇಕಾಗುತ್ತದೆ. ಅದರ ಜತೆಗೆ ಚಾಲಕರು, ವಿವಿಧ ಕೆಲಸಗಳಿಗೆ ತೆರಳು ಉದ್ಯೋಗಿಗಳ ಸಮಯ, ಇಂಧನವೂ ವ್ಯಯವಾಗುತ್ತದೆ. ಅದೆಲ್ಲವನ್ನು ಮಾಸಿಕ ವೇತನದೊಂದಿಗೆ ಲೆಕ್ಕಹಾಕಿ, ಅವರೆಲ್ಲರೂ ರಸ್ತೆಗಳಲ್ಲಿ ವ್ಯಯ ಮಾಡುವ ಸಮಯದೊಂದಿಗೆ ತಾಳೆ ಹಾಕಿದಾಗ ಆ ನಷ್ಟದ ಮೊತ್ತ 6,500 ಕೋಟಿ ರೂ. ದಾಟುತ್ತದೆ ಎಂದು ಸಾರಿಗೆ ತಜ್ಞ ಪ್ರೊ.ಎಂ.ಎನ್‌. ಶ್ರೀಹರಿ ವಿವರಿಸುತ್ತಾರೆ. 

ಕಾರಿಗಿಂತ ಕಾಲ್ನಡಿಗೆಯೇ ಸ್ಪೀಡ್‌!: ನಗರದ ಸಿಲ್ಕ್ಬೋಡ್‌ ಜಂಕ್ಷನ್‌ನಿಂದ ಮಾರತ್‌ಹಳ್ಳಿ ನಡುವೆ “ಪೀಕ್‌ ಅವರ್‌’ನಲ್ಲಿ (ಸಂಜೆ) ಕಾಲ್ನಡಿಗೆ ವೇಗ ಗಂಟೆಗೆ 8 ಕಿ.ಮೀ. ಇದ್ದರೆ, ಅಲ್ಲಿನ ಕಾರುಗಳ ವೇಗ ಗಂಟೆಗೆ 4.5 ಕಿ.ಮೀ. ಇರುತ್ತದೆ. ಈಚೆಗೆ ಅಧ್ಯಯನ ನಡೆಸಿದಾಗ ಈ ಅಚ್ಚರಿ ಅಂಶ ಬೆಳಕಿಗೆ ಬಂದಿದೆ. ಇದು ನಗರದ ಸಂಚಾರದಟ್ಟಣೆ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಸಣ್ಣ ಸ್ಯಾಂಪಲ್‌. ಅದೇ ರೀತಿ, ಹೊರವರ್ತುಲ ರಸ್ತೆಯಲ್ಲಿ ವಾಹನಗಳ ವೇಗ ಮಿತಿ ಗಂಟೆಗೆ 4.5 ಕಿ.ಮೀ. ಇದೆ. ಕೆ.ಆರ್‌. ವೃತ್ತದಲ್ಲಿ ಗಂಟೆಗೆ 11.5 ಕಿ.ಮೀ. ಇದೆ ಎನ್ನುತ್ತಾರೆ ಪ್ರೊ.ಶ್ರೀಹರಿ.  

ಹೈ-ಕ ಅಭಿವೃದ್ಧಿಗೆ 2,500 ಕೋಟಿ; ಸ್ಟೀಲ್‌ ಬ್ರಿಡ್ಜ್ಗೆ 25 ಸಾವಿರ ಕೋಟಿ: ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಯೋಜನೆಗಾಗಿ ಕಳೆದ ಐದು ವರ್ಷಗಳಲ್ಲಿ (2013-18) ಸರ್ಕಾರ ನೀಡಿದ ಅನುದಾನ 2,500 ಕೋಟಿ ರೂ. ಆದರೆ, ನಗರದ ಉಕ್ಕಿನ ಸೇತುವೆಗಾಗಿ ಅದರ ಹತ್ತುಪಟ್ಟು ಅಂದರೆ 25 ಸಾವಿರ ಕೋಟಿ ರೂ. ನೀಡಲು ಸಜ್ಜಾಗಿದೆ ಎಂದು ಸಿವಿಕ್‌ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್‌ ಹೇಳುತ್ತಾರೆ.

ಇದೇನೇ ಇರಲಿ, ಒಂದೆಡೆ ಪ್ಯಾರಿಸ್‌ಗೆ ಹೋಗಿ ಹವಾಮಾನ ವೈಪರೀತ್ಯ ತಗ್ಗಿಸುವ ಸಂಬಂಧದ ಒಪ್ಪಂದಕ್ಕೆ ಮೇಯರ್‌ ಹೋಗಿ ಸಹಿ ಮಾಡಿಬರುತ್ತಾರೆ. ಮತ್ತೂಂದೆಡೆ ವಿಶ್ವಸಂಸ್ಥೆಗೆ ಹೋಗಿ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಳ್ಳುತ್ತಾರೆ. ಆದರೆ, ಈ ಆಶಯಕ್ಕೆ ತದ್ವಿರುದ್ಧವಾದ ಯೋಜನೆಗಳನ್ನು ಇಲ್ಲಿ ಕೈಗೆತ್ತಿಕೊಳ್ಳುತ್ತಾರೆ ಎಂದು ಕಾತ್ಯಾಯಿನಿ ಚಾಮರಾಜ್‌ ಬೇಸರ ವ್ಯಕ್ತಪಡಿಸಿದರು. 

ನಮ್ಮಲ್ಲಿ ಉಲ್ಟಾ: ಫ್ಲೈಓವರ್‌ಗಳಿಂದ ಆ ನಿರ್ದಿಷ್ಟ ಜಾಗದಲ್ಲಿ ರಸ್ತೆಯ ಸಾಮರ್ಥ್ಯ ದುಪ್ಪಟ್ಟಾದಂತೆ ಕಾಣಬಹುದು. ಆದರೆ, ಅದು ಅಂತ್ಯಗೊಳ್ಳುವ ಎರಡೂ ಬದಿಗಳಲ್ಲಿ ಮತ್ತೆ ರಸ್ತೆ ಮೂಲ ಗಾತ್ರಕ್ಕೇ ಬರುತ್ತದೆ. ಹಾಗಾಗಿ, ಬೆಂಗಳೂರಿನಂತಹ ನಗರಕ್ಕೆ ಈ ಪರಿಕಲ್ಪನೆ ಸೂಕ್ತವಾದುದಲ್ಲ. ಫ್ಲೈಓವರ್‌ ಅಥವಾ ಅಂಡರ್‌ಪಾಸ್‌ಗಳನ್ನು ನಗರವನ್ನು ಅಭಿವೃದ್ಧಿ ಮಾಡುವಾಗಲೇ ನಿರ್ಮಿಸಬೇಕು. ಮೊಹಾಲಿ, ಚಂಡಿಗಢದಲ್ಲಿ ಮೊದಲು ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ನಂತರ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ. ಆದರೆ, ನಮ್ಮಲ್ಲಿ ಉಲ್ಟಾ ಆಗುತ್ತಿದೆ ಎಂದು ಐಐಎಸ್ಸಿ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರೊಫೆಸರ್‌ ಜೆ.ಎಂ.ಚಂದ್ರಕಿಶನ್‌ ಹೇಳಿದರು. 

-ಪ್ರಗತಿಯಲ್ಲಿರುವ ಫ್ಲೈಓವರ್‌/ ಅಂಡರ್‌ಪಾಸ್‌ ಕಾಮಗಾರಿಗಳು
-ಸರ್ಜಾಪುರ-ಹರಲೂರು ರಸ್ತೆ ನಡುವೆ ಗ್ರೇಡ್‌ ಸಪರೇಟರ್‌
-ಮಂಜುನಾಥ ನಗರದ 1 ಮತ್ತು 8ನೇ ಮುಖ್ಯರಸ್ತೆಗಳಲ್ಲಿ 2 ಫ್ಲೈಓವರ್‌
-ಶಿವನಗರ ಮುಖ್ಯರಸ್ತೆಯಲ್ಲಿ ಇಂಟಿಗ್ರೇಟೆಡ್‌ ಫ್ಲೈಓವರ್‌
-ಶಿವಾನಂದ ವೃತ್ತದಲ್ಲಿ ಗ್ರೇಡ್‌ ಸಪರೇಟರ್‌
-ಬ್ಯಾಟರಾಯನಪುರದ ಗಂಗಮ್ಮ ವೃತ್ತದಲ್ಲಿ ಗ್ರೇಡ್‌ ಸಪರೇಟರ್‌
-ರಾಷ್ಟ್ರೋತ್ಥಾನ ವೃತ್ತದಿಂದ ಥಣಿಸಂದ್ರ ಮುಖ್ಯರಸ್ತೆಯಲ್ಲಿ ಗ್ರೇಡ್‌ ಸಪರೇಟರ್‌
-ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ರಸ್ತೆಯಲ್ಲಿ ಗ್ರೇಡ್‌ ಸಪರೇಟರ್‌
-ಹಳೇ ಮದ್ರಾಸ್‌ ರಸ್ತೆ-ಸುರಂಜನ್‌ದಾಸ್‌ ಜಂಕ್ಷನ್‌ನಲ್ಲಿ ಗ್ರೇಡ್‌ ಸಪರೇಟರ್‌
-ಈಜಿಪುರ ಮುಖ್ಯರಸ್ತೆ-ಇನ್ನರ್‌ ರಿಂಗ್‌ ರೋಡ್‌ ಜಂಕ್ಷನ್‌, ಸೋನಿವರ್ಲ್ಡ್ ಜಂಕ್ಷನ್‌ ಮತ್ತು ಕೇಂದ್ರೀಯ ಸದನ ಜಂಕ್ಷನ್‌ ಬಳಿ ಎತ್ತರಿಸಿದ ಮಾರ್ಗ

ಪ್ರಸ್ತಾವಿತ ಯೋಜನೆಗಳು
-ಜಾಲಹಳ್ಳಿ ಕ್ರಾಸ್‌ ವೃತ್ತದಲ್ಲಿ ಸುಬ್ರತೋ ಮುಖರ್ಜಿ ರಸ್ತೆ ಮತ್ತು ತುಮಕೂರು ರಸ್ತೆಯಲ್ಲಿ ಗ್ರೇಡ್‌ ಸಪರೇಟರ್‌
-ಮಿನರ್ವ ವೃತ್ತದಿಂದ ಹಡ್ಸನ್‌ ವೃತ್ತದ ನಡುವೆ ಎತ್ತರಿಸಿದ ಮಾರ್ಗ
-ಎಂ.ಎಸ್‌. ಪಾಳ್ಯ ಜಂಕ್ಷನ್‌ನಲ್ಲಿ ಗ್ರೇಡ್‌ ಸಪರೇಟರ್‌
-ಹೊಸೂರು ರಸ್ತೆಯ ಕೆ.ಎಚ್‌. ವೃತ್ತದಿಂದ 13ನೇ ಕ್ರಾಸ್‌ ವಿಲ್ಸನ್‌ ಗಾರ್ಡನ್‌ವರೆಗೆ ಫ್ಲೈಓವರ್‌
-ಯಲಹಂಕ ಪೊಲೀಸ್‌ ಠಾಣೆ ಬಳಿ ಗ್ರೇಡ್‌ ಸಪರೇಟರ್‌
-ಹೆಣ್ಣೂರು ಮುಖ್ಯರಸ್ತೆಯ “ವೈ’ ಜಂಕ್ಷನ್‌ ಸಮೀಪ ಗ್ರೇಡ್‌ ಸಪರೇಟರ್‌
-ಮಾಗಡಿ ರಸ್ತೆಯ “ವೈ’ ಜಂಕ್ಷನ್‌ ಸಮೀಪ (ಶಂಕರಲಿಂಗ ಪಾಂಡಿಯನ್‌ ಹೋಟೆಲ್‌ ಎದುರು) ಗ್ರೇಡ್‌ ಸಪರೇಟರ್‌
-ಸದಾಶಿವನಗರದ ಭಾಷ್ಯಂ ವೃತ್ತದ ಬಳಿ ಗ್ರೇಡ್‌ ಸಪರೇಟರ್‌

ಸಿಗ್ನಲ್‌ ಮುಕ್ತ ಕಾರಿಡಾರ್‌ಗಳು
-ಡಾ.ರಾಜ್‌ಕುಮಾರ್‌ ರಸ್ತೆ- 3.50 ಕಿ.ಮೀ.
-ಹೊರವರ್ತುಲ ರಸ್ತೆ (ಸೆಂಟ್ರಲ್‌ ಸಿಲ್ಕ್ಬೋರ್ಡ್‌-ಮೈಸೂರು ರಸ್ತೆ)- 14.04 ಕಿ.ಮೀ.
-ಹಳೆಯ ವಿಮಾನ ನಿಲ್ದಾಣ ರಸ್ತೆ- 15.23 ಕಿ.ಮೀ. 
-ಮೇಕ್ರಿ ವೃತ್ತ-ಹೋಪ್‌ಫಾರ್ಮ್ ಜಂಕ್ಷನ್‌- 18.88

ಅತಿಹೆಚ್ಚು ದಟ್ಟಣೆವುಳ್ಳ ಕಾರಿಡಾರ್‌ಗಳಿವು
-ಬಳ್ಳಾರಿ ರಸ್ತೆ 
-ಹಳೆಯ ಮದ್ರಾಸ್‌ ರಸ್ತೆ
-ಹಳೆಯ ವಿಮಾನ ನಿಲ್ದಾಣ ರಸ್ತೆ
-ಸರ್ಜಾಪುರ ರಸ್ತೆ
-ಹೊಸೂರು ರಸ್ತೆ
-ಬನ್ನೇರುಘಟ್ಟ ರಸ್ತೆ
-ಕನಕಪುರ ರಸ್ತೆ
-ಮೈಸೂರು ರಸ್ತೆ
-ಮಾಗಡಿ ರಸ್ತೆ
-ತುಮಕೂರು ರಸ್ತೆ
-ವೆಸ್ಟ್‌ ಆಫ್ ಕಾರಿಡಾರ್‌
-ಹೊರ ವರ್ತುಲ ರಸ್ತೆ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next