Advertisement

ಮತ್ಯತೀರ್ಥ ಹೊಳೆಯಲ್ಲಿ ಹೆಚ್ಚಿದ ಪ್ರವಾಹ: ಸೇತುವೆನಿರ್ಮಾಣ ಇನ್ನೂ ಕನಸು

02:15 AM Jun 15, 2018 | Team Udayavani |

ತೊಡಿಕಾನ: ಪ್ರತಿ ಮಳೆಗಾಲದಂತೆ ಈ ಬಾರಿಯೂ ತೊಡಿಕಾನ – ಮಾಪಳಕಜೆ- ಕುದುರೆಪಾಯ ರಸ್ತೆ ಹೊಳೆ ನೀರಲ್ಲಿ ಮುಳುಗಿ, ದ.ಕ.-ಕೊಡಗು ಜಿಲ್ಲೆಗಳ ಸಂಪರ್ಕ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಮತ್ಸ್ಯತೀರ್ಥ ಹೊಳೆಗೆ ಸೇತುವೆ ನಿರ್ಮಾಣವಾಗದ ಪರಿಣಾಮ ಪ್ರತಿವರ್ಷ ಕೊಡಗಿನ ಚೆಂಬು, ಕುದುರೆಪಾಯ, ಮಾಪಳ ಕಜೆ, ಮುಪ್ಪಸೇರು, ಚಳ್ಳಂಗಾಯ ಭಾಗಕ್ಕೆ ತೊಡಿಕಾನದ ಮೂಲಕ ಮಳೆಗಾಲದಲ್ಲಿ ವಾಹನ ಸಂಪರ್ಕ ಸಾಧ್ಯವಾಗುತ್ತಿಲ್ಲ. ಈ ನಾಲ್ಕು ತಿಂಗಳು ಇಲ್ಲಿನ ಜನರ ಗೋಳು ಕೇಳುವವರೇ ಇಲ್ಲ. ಅಂತರ್‌ ಜಿಲ್ಲಾ ಸಂಪರ್ಕ ರಸ್ತೆಯಾದರೂ ತೊಡಿಕಾನ – ಕುದುರೆಪಾಯ – ಮಾಪಳಕಜೆ ರಸ್ತೆ ಇನ್ನೂ ಕಚ್ಚಾ ರಸ್ತೆಯಾಗಿಯೇ ಉಳಿದಿದೆ. ದ.ಕ. ಜಿಲ್ಲೆಯ ಗಡಿಭಾಗದ ತನಕ ಅರಂತೋಡು ಗ್ರಾ.ಪಂ. ವ್ಯಾಪ್ತಿಗೆ ಒಳ ಪಟ್ಟಿದೆ. ಉಳಿದ ಭಾಗ ಕೊಡಗಿನ ಚೆಂಬು ಗ್ರಾ.ಪಂ. ವ್ಯಾಪ್ತಿಯಲ್ಲಿದೆ. ತೊಡಿಕಾನ ಮಲ್ಲಿಕಾರ್ಜುನ ದೇವಾಲಯದಿಂದ 1.5 ಕಿ.ಮೀ. ದೂರದಲ್ಲಿ ದ.ಕ. ಮತ್ತು ಕೊಡಗು ಜಿಲ್ಲೆಯ ಗಡಿಭಾಗ ಸಿಗುತ್ತದೆ. ಕೊಡಗು ಜಿಲ್ಲೆಯ ವ್ಯಾಪ್ತಿಗೆ ಬರುವ ಮಾಪಳಕಜೆ ಎಂಬಲ್ಲಿಯ ತನಕ ರಸ್ತೆಯನ್ನು ಸಂಪೂರ್ಣ ಕೊಡಗು ಜಿಲ್ಲೆಯ ಜನಪ್ರತಿನಿಧಿಗಳು ಡಾಮರು ಹಾಕಿ ಅಭಿವೃದ್ಧಿ ಮಾಡಿಸಿದ್ದಾರೆ. ಆದರೆ, ತೊಡಿಕಾನ – ಕುದುರೆಪಾಯ ರಸ್ತೆ ಇನ್ನೂ ಅಭಿವೃದ್ಧಿಗೊಂಡಿಲ್ಲ.

Advertisement


ಈ ವರ್ಷ ಪೆರಂಬಾರ್‌ ಬಳಿ ಕಾಂಕ್ರೀಟ್‌ ಆದ 60 ಮೀಟರ್‌ ರಸ್ತೆ.
60 ಮೀ. ಕಾಂಕ್ರೀಟ್‌

ಅರಂತೋಡು ಗ್ರಾ.ಪಂ. 1 ಲಕ್ಷ ರೂ. ಹಾಗೂ ಜಿ.ಪಂ. ಸದಸ್ಯ ಹರೀಶ್‌ ಕಂಜಿಪಿಲಿ 2 ಲಕ್ಷ ರೂ. ಅನುದಾನ ಒದಗಿಸಿದ ಹಿನ್ನೆಲೆಯಲ್ಲಿ ತೊಡಿಕಾನ ದೇವಾಲಯ ಬಳಿಯ ಏರು ರಸ್ತೆಗೆ ಪೆರಂಬಾರು ಸಮೀಪ 60 ಮೀ. ಕಾಂಕ್ರೀಟ್‌ ಹಾಕಲಾಗಿದೆ. ಮತ್ಸ್ಯತೀರ್ಥ ಹೊಳೆಯ ಬದಿಯಿಂದ ಕೊಡಗಿನ ಗಡಿಭಾಗದ ತನಕ 2 ಕಿ.ಮೀ. ರಸ್ತೆ ಅಭಿವೃದ್ಧಿ ಆಗಬೇಕಿದೆ. ಸಂಸದರು ತಮ್ಮ ನಿಧಿಯಿಂದ ಮತ್ಸ್ಯ ತೀರ್ಥ ಹೊಳೆಗೆ ಸೇತುವೆ ನಿರ್ಮಾಣಕ್ಕಾಗಿ 10 ಲಕ್ಷ ರೂ. ಅನುದಾನ ನೀಡಿದ್ದಾರೆ. ಕೊಡಗು ಜಿಲ್ಲೆಯ ಕುದುರೆಪಾಯ ಮತ್ತು ಮಾಪಳಕಜೆ ಎಂಬಲ್ಲಿ ಪರಿಶಿಷ್ಟ ಪಂಗಡದವರ 100ಕ್ಕೂ ಅಧಿಕ ಮನೆಗಳಿವೆ. ಇತರ ಪಂಗಡಗಳ ಮನೆಗಳೂ ಸಾಕಷ್ಟಿವೆ. ದ.ಕ. ಜಿಲ್ಲೆ ವ್ಯಾಪ್ತಿಯ ಮುಪ್ಪಸೇರು ಎಂಬಲ್ಲಿ 20 ಮನೆಗಳಿವೆ. ಎಲ್ಲರಿಗೂ ಇದೇ ರಸ್ತೆ ಆಸರೆ.

ಮತ್ಸ್ಯತೀರ್ಥ ಹೊಳೆಗೆ ಹಾಗೂ ಮಾಪ ಳಕಜೆ ತೋಡಿಗೆ ಕಿರು ಸೇತುವೆ ನಿರ್ಮಾ ಣವಾಗಬೇಕಾಗಿದೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ವಾಹನ ಸಂಚರಿಸದ ಕಾರಣ ಕೊಡಗಿನ ಕುದುರೆಪಾಯ, ಮಾಪಳೆಕಜೆಯ ಜನರು ಚೆಂಬು – ಕಲ್ಲುಗುಂಡಿ – ಅರಂತೋಡು ಮಾರ್ಗವಾಗಿ ಸುತ್ತು ಬಳಸಿ ಸುಳ್ಯಕ್ಕೆ ಬರುತ್ತಾರೆ. ಮು ಪ್ಪಸೇರು ಭಾಗದಲ್ಲಿ ಮಳೆಗಾಲದ ಸಮಯದಲ್ಲಿ ಕಾಯಿಲೆಗೆ ತುತ್ತಾದವರನ್ನು ತೊಡಿಕಾನ ದೇವಾಲಯದ ತನಕ ಹೊತ್ತು ತರಬೇಕಾಗುತ್ತದೆ. ಅಲ್ಲಿಗೆ ತಲುಪುವಾಗ ಜೀವ ಉಳಿದರೆ ಪುಣ್ಯ.


ತೊಡಿಕಾನ-ಮಾಪಳಕಜೆ,ಕುದರೆಪಾಯ ಅಂತರ್‌ ಜಿಲ್ಲಾ ಸಂಪರ್ಕ ರಸ್ತೆ

ಅಭಿವೃದ್ದಿಯಿಂದ ಲಾಭ ಹಲವು

ತೊಡಿಕಾನ – ಕುದುರೆಪಾಯ – ಮಾಪಳಕಜೆ ರಸ್ತೆ ಸರ್ವಋತು ರಸ್ತೆಯಾಗಿ ಅಭಿವೃದ್ಧಿಗೊಂಡರೆ ಹಲವು ಲಾಭಗಳಿವೆ. ಈ ಭಾಗದ ಜನರು ಸುತ್ತು ಬಳಸಿ ಸುಳ್ಯಕ್ಕೆ ಬರುವ ಸಮಯ, ವಾಹನದ ಇಂಧನ ಉಳಿತಾಯವಾಗುತ್ತದೆ. ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯ ಹಾಗೂ ತೊಡಿಕಾನದ ಪ್ರವಾಸಿ ತಾಣಗಳ ಅಭಿವೃದ್ಧಿಗೂ ಅನುಕೂಲ.

Advertisement

ಸರ್ವಋತು ರಸ್ತೆ
ತೊಡಿಕಾನದಿಂದ ಕೊಡಗಿನ ಮಾಪಳಕಜೆ, ಕುದುರೆಪಾಯಕ್ಕೆ ನೇರ ಸಂಬಂಧಗಳಿವೆ. ಇಲ್ಲಿ 2,000 ಜನರು ವಾಸವಾಗಿದ್ದಾರೆ. ಇವರೆಲ್ಲರೂ ತಮ್ಮ ದಿನ ನಿತ್ಯದ ವ್ಯವಹಾರಗಳಿಗೆ ಸುಳ್ಯ ತಾಲೂಕು  ಕೇಂದ್ರವನ್ನು ಅವಲಂಬಿಸಿದ್ದು, ತೊಡಿಕಾನದ ಮೂಲಕ ಸುಳ್ಯಕ್ಕೆ ಸಂಪರ್ಕ ಬೆಳೆಸುತ್ತಾರೆ. ಈ ಕಾರಣದಿಂದ ತೊಡಿಕಾನದ ದೇವಾಲಯದ ಬಳಿಯ ಮತ್ಸ್ಯತೀರ್ಥ ಹೊಳೆಗೆ ಸೇತುವೆ ನಿರ್ಮಾಣವಾಗಿ, ಈ ರಸ್ತೆ ಸರ್ವಋತು ರಸ್ತೆಯಾಗಿ ತ್ವರಿತವಾಗಿ ಅಭಿವೃದ್ಧಿಕೊಳ್ಳುವ ಅಗತ್ಯವಿದೆ.
– ವಸಂತ್‌ ಭಟ್‌ ಉರಿಮಜಲು, ರಸ್ತೆ ಅಭಿವೃದ್ಧಿ ಹೋರಾಟಗಾರರು

— ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next