Advertisement

ಸ್ವಂತ ಖರ್ಚಿನಲ್ಲೇ ಸೇತುವೆ ದುರಸ್ತಿ

05:09 PM Nov 16, 2021 | Team Udayavani |

ರಾಯಚೂರು: ಕಳೆದ ಅನೇಕ ದಿನಗಳಿಂದ ಸಂಪೂರ್ಣ ಹದಗೆಟ್ಟು ಪ್ರಯಾಣಿಕರ ಜೀವಕ್ಕೆ ಕಂಟಕವಾಗಿದ್ದ ಕೃಷ್ಣಾ ನದಿ ಸೇತುವೆ ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಿಸುವ ಮೂಲಕ ಪ್ರಥಮ ದರ್ಜೆ ಗುತ್ತಿಗೆದಾರ ಮುಜುಬುದ್ದೀನ್‌ ಮಾದರಿಯಾಗಿದ್ದಾರೆ.

Advertisement

ಹೈದರಾಬಾದ್‌ ಕರ್ನಾಟಕ ಮುಖ್ಯ ರಸ್ತೆ ಸಂಪರ್ಕ ಕಲ್ಪಿಸುವ ಈ ಸೇತುವೆ ನಿಜಾಂ ಕಾಲದಲ್ಲಿ ನಿರ್ಮಿಸಲಾಗಿತ್ತು. ಆದರೆ, ಈಚೆಗೆ ಸೇತುವೆ ಮೇಲೆ ರಾಡ್‌ಗಳು ತೇಲಿ ಪ್ರಯಾಣಕ್ಕೆ ಸಮಸ್ಯೆಯಾಗುತ್ತಿತ್ತು. ಬೈಕ್‌ ಸವಾರನೊಬ್ಬ ಇದೇ ಕಾರಣಕ್ಕೆ ಬಿದ್ದು ಜೀವ ಕಳೆದುಕೊಂಡಿದ್ದ. ಅಲ್ಲದೇ, ಟ್ರ್ಯಾಕ್ಟರ್‌, ಲಾರಿ ಟೈಯರ್‌ಗಳು ಪಂಕ್ಚರ್‌ ಆಗಿ ಗಂಟೆಗಟ್ಟಲೇ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿತ್ತು. ಇದನ್ನು ಗಮನಿಸಿದ್ದ ಮುಜುಬುದ್ದೀನ್‌, ಜನರಿಗಾಗುತ್ತಿರುವ ಸಮಸ್ಯೆ ತಪ್ಪಿಸಲು ಖುದ್ದು ತಾವೇ ದುರಸ್ತಿ ಮಾಡಿಸಿದ್ದಾರೆ.

ಡಾಂಬರ್‌ ಹಾಕಿ ಎಲ್ಲ ತಗ್ಗು ಮುಚ್ಚಿಸಿದ್ದಾರೆ. ಇದರಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಂತಾಗಿದೆ. ಈ ಮಾರ್ಗವಾಗಿ ನಾನಾ ಕಾರ್ಯಗಳ ನಿಮಿತ್ತ ನಿತ್ಯ ಸಾವಿರಾರು ಜನ ಓಡಾಡುತ್ತಾರೆ. ಅದರಲ್ಲೂ ಚಿಕಿತ್ಸೆಗೆಂದು ಹೋಗುವವರು ಇರುತ್ತಾರೆ. ಆದರೆ, ಈಚೆಗೆ ಕೃಷ್ಣಾ ಸೇತುವೆ ಸಂಪೂರ್ಣ ಹಾಳಾಗಿದ್ದ ಕಾರಣ ಪದೇ ಪದೇ ಗಂಟೆಗಟ್ಟಲೇ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿತ್ತು. ಈ ಬಗ್ಗೆ ಸಂಬಂಧಿಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನ ಸೆಳೆದರೂ ಅವರು ಸರಿಯಾಗಿ ಸ್ಪಂದನೆ ನೀಡಿರಲಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಮುಜಿಬುದ್ದೀನ್‌, ನಾನು ಕೂಡ ಆಗಾಗ ಹೈದರಾಬಾದ್‌ ಗೆ ಓಡಾಡುತ್ತೇನೆ. ಹೆದ್ದಾರಿ ಪ್ರಾಧಿಕಾರದವರು ಈ ಸೇತುವೆ ನಿರ್ವಹಣೆ ಸಂಪೂರ್ಣ ಕೈ ಬಿಟ್ಟಂತೆ ಕಾಣಿಸುತ್ತಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗದಿರುವುದು ಸಮಸ್ಯೆಗೆ ಕಾರಣ. ಜನರ ಸಮಸ್ಯೆ ಕಂಡ ಮೇಲೆ ನಾನೇ ಒಮ್ಮೆ ಪರಿಶೀಲಿಸಿದೆ. ತಾತ್ಕಾಲಿಕ ದುರಸ್ತಿಗೆ ಮಾಡಿದರೆ ಸಂಚಾರ ಸುಗಮವಾಗಲಿದೆ ಎಂಬ ಕಾರಣಕ್ಕೆ ನನ್ನ ಸೈಟ್‌ನಿಂದಲೇ ಎಲ್ಲ ಸಾಮಗ್ರಿ, ಯಂತ್ರೋಪಕರಣ ತರಿಸಿ ದುರಸ್ತಿ ಕೆಲಸ ಮಾಡಿಸಿದ್ದೇನೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next