ಸಿದ್ದಾಪುರ: ಸೇತುವೆ ಕಾಮಗಾರಿಯೊಂದು ಬರೋಬ್ಬರಿ ಒಂಭತ್ತು ವರ್ಷಗಳಿಂದ ಕುಂಟುತ್ತಾ ಸಾಗಿ ಅಂತೂ ಇಂತೂ ಪೂರ್ಣಗೊಂಡಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಸಂಪಗೋಡ- ಭಂಡಾರಕೇರಿ ನಡುವೆ ಸಂಪರ್ಕ ಕೊಂಡಿಯಾಗಿ ರುವ ಹೊಸಗದ್ದೆ ಬಳಿ ಹರಿಯುವ ಹೊಳೆಗೆ ಸೇತುವೆ ನಿರ್ಮಾಣಕ್ಕೆ 2012-13ರಲ್ಲೇ ಮಲೆನಾಡು ಅಭಿವೃದ್ಧಿ ಯೋಜನೆಯಡಿ 5 ಲಕ್ಷ ರೂ. ಮಂಜೂರಾಗಿತ್ತು.
ನಾಲ್ಕು ಪಿಲ್ಲರ್‌ಗಳನ್ನಷ್ಟೇ ನಿರ್ಮಾಣ ಮಾಡಿ, 9 ವರ್ಷಗಳಿಂದ ಸೇತುವೆ ಕಾಮಗಾರಿ ಅಲ್ಲಿಗೆ ನಿಂತಿತ್ತು. ಇದರಿಂದ ಗ್ರಾಮಸ್ಥರಿಗೆ ಆಗುವ ಸಂಚಾರ ತಾಪತ್ರಯದ ಕುರಿತು, ಅಧಿಕಾರಿಗಳು- ಜನಪ್ರತಿನಿಧಿಗಳ ನಿರ್ಲಕ್ಷ್ಯದ ಕುರಿತು ಉದಯವಾಣಿಯು “ಜನರ ಸುಂಕಕ್ಕೆ ಬೆಲೆಯಿಲ್ಲ; ಗ್ರಾಮಸ್ಥರಿಗೆ ಸಂಕವಿಲ್ಲ’ ಎಂಬ ಶೀರ್ಷಿಕೆಯಡಿ 2021ರ ಸೆ.5ರಂದು ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.
ಇದೀಗ ಗ್ರಾಮಸ್ಥರ ದಶಕದ ಕಾಯುವಿಕೆ ಅಂತ್ಯವಾಗಿದೆ. 2ನೇ ಹಂತದಲ್ಲಿ ಎರಡು ವರ್ಷಗಳ ಹಿಂದೆ ಮಲೆನಾಡು ಅಭಿವೃದ್ಧಿ ಯೋಜನೆಯಡಿ 5 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಸೇತುವೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಉಮಾ ಹೆಗಡೆ ಸೇರಿದಂತೆ ಗ್ರಾಮಸ್ಥರ ಸತತ ಹಕ್ಕೊತ್ತಾಯ ಫಲ ನೀಡಿದ್ದು, ಪಿಲ್ಲರ್‌ಗಳ ಮೇಲೆ ಸ್ಲ್ಯಾಬ್ ಹಾಕಲಾಗಿದೆ. ಮಳೆಗಾಲದ ಹೊಸ್ತಿಲಲ್ಲಿ ಜನರ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಲಾಗಿದೆ.