Advertisement

ಕಲಿಕೆಯ ಅಂತರ ಸರಿದೂಗಿಸಲು ಬ್ರಿಡ್ಜ್ ಕೋರ್ಸ್‌

12:15 AM Mar 03, 2021 | Team Udayavani |

ಬೆಂಗಳೂರು: ಆನ್‌ಲೈನ್‌ ಮತ್ತು ನೇರ ತರಗತಿಗಳಿಂದಾಗಿ ಸೃಷ್ಟಿಯಾಗಿರುವ ಕಲಿಕಾ ಅಂತರ ಸರಿದೂಗಿಸಲು ಮತ್ತು ಶಾಲಾ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಬ್ರಿಡ್ಜ್ ಕೋರ್ಸ್‌ ನಡೆಸಲು ನಿರ್ಧರಿಸಿದೆ.

Advertisement

ನಿತ್ಯ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪಠ್ಯ ವಿಷಯ ಹೆಚ್ಚು ಬೋಧನೆ ಮಾಡಲಾಗುತ್ತಿದೆ ಮತ್ತು ಸಮರ್ಪಕ ಕಲಿಕೆಗೆ ಇದರಿಂದ ಅನುಕೂಲ ವಾಗುತ್ತಿದೆ. ಆದರೆ ಆನ್‌ಲೈನ್‌ ಮತ್ತು ಪೂರ್ವಮುದ್ರಿತ ವೀಡಿಯೋ ತರಗತಿಗಳಲ್ಲಿ ಕಲಿಕೆ ಮುಂದುವರಿಸುತ್ತಿರುವ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಸಮಗ್ರತೆ ಸಿಗುತ್ತಿಲ್ಲ.

ಇದರಿಂದ ಈ ಎರಡು ವಿಧಾನಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಕಲಿಕೆಯ ಅಂತರ ಸೃಷ್ಟಿಯಾಗಿದೆ. ಇದನ್ನು ಸರಿದೂಗಿಸಲು ಬ್ರಿಡ್ಜ್ ಕೋರ್ಸ್‌ ನಡೆಸಲಿದ್ದೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಖಚಿತಪಡಿಸಿದ್ದಾರೆ.

ಸಮಗ್ರ ಶಿಕ್ಷಣದ ಮೂಲಕ ಬ್ರಿಡ್ಜ್ ಕೋರ್ಸ್‌
ಕೇರಳ, ಮಹಾರಾಷ್ಟ್ರದ ಗಡಿ ಭಾಗ ಮತ್ತು ಬಿಬಿಎಂಪಿ ವ್ಯಾಪ್ತಿಯ ಶಾಲೆಗಳ ವಿನಾ ಬೇರೆಲ್ಲ ಕಡೆ 6ರಿಂದ 10ನೇ ತರಗತಿಗಳು ಆರಂಭವಾಗಿವೆ. ಪರೀಕ್ಷೆ ಮತ್ತು ಮೌಲ್ಯ ಮಾಪನವೂ ಆರಂಭವಾಗಿದೆ. ಉಳಿದ 1ರಿಂದ 5ನೇ ವರೆಗಿನ ತರಗತಿಗಳ ಆರಂಭದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಕಲಿಕಾ ಅಂತರ ಗುರುತಿಸುವ ಕಾರ್ಯ ಮೌಲ್ಯಮಾಪನ ಮತ್ತು ಘಟಕ ಪರೀಕ್ಷೆಗಳಲ್ಲಿ ನಡೆಯಲಿದ್ದು, ಅದರ ಆಧಾರದಲ್ಲಿ ಬ್ರಿಡ್ಜ್ ಕೋರ್ಸ್‌ ನೀಡಲಿದ್ದೇವೆ. ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ -ಕರ್ನಾಟಕ ಇದರ ರಾಜ್ಯ ಯೋಜನಾ ನಿರ್ದೇಶಕರ ಮಾರ್ಗದರ್ಶನದಲ್ಲಿ ಪಠ್ಯಕ್ರಮ ಸಿದ್ಧಪಡಿಸಲಾಗುತ್ತದೆ. ಕಲಿಕಾ ಅಂತರ ಎಷ್ಟಿದೆ ಮತ್ತು ಯಾವ ಪಠ್ಯಗಳು ಅಗತ್ಯವಿವೆ ಎಂಬುದನ್ನು ಗಮನಿಸಲಾಗುತ್ತದೆ. ಭಾಷಾ ವಿಷಯವಾಗಿ ವ್ಯಾಕರಣ; ಇಂಗ್ಲಿಷ್‌ ಮತ್ತು ಗಣಿತ ವಿಷಯಗಳನ್ನು ಪ್ರಧಾನ
ವಾಗಿರಿಸಿ ಬ್ರಿಡ್ಜ್ ಕೋರ್ಸ್‌ ಸಿದ್ಧಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Advertisement

ಕಲಿಕೆ ಅಂತರ
ಆನ್‌ಲೈನ್‌ ಮತ್ತು ಪೂರ್ವ ಮುದ್ರಿತ ವೀಡಿಯೋಗಳ ಬೋಧನ ತರಗತಿ ದಿನಕ್ಕೆ ಗರಿಷ್ಠ 2ರಿಂದ 3 ಅವಧಿ ಇರುತ್ತದೆ. ಆದರೆ ನೇರ ತರಗತಿಗಳಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ತಲಾ ಮೂರು- ಒಟ್ಟು 6 ಅವಧಿಯಲ್ಲಿ ಪಾಠ ನಡೆಯುತ್ತದೆ. ಹೀಗಾಗಿ ಆನ್‌ಲೈನ್‌ ವಿದ್ಯಾರ್ಥಿಗಳಿಗೆ ಎಷ್ಟೋ ವಿಷಯಗಳಲ್ಲಿ ಸಮಗ್ರ ಬೋಧನೆ ಸಿಗುವುದಿಲ್ಲ. ದಿನಪೂರ್ತಿ ಆನ್‌ಲೈನ್‌ ತರಗತಿಯಲ್ಲಿ ಪಾಲ್ಗೊಳ್ಳುವುದು ವೈಜ್ಞಾನಿಕವಾಗಿ ಸಾಧ್ಯವೂ ಇಲ್ಲ. ಹೀಗಾಗಿ ಕಲಿಕೆ ಅಂತರ ಸೃಷ್ಟಿ ಸಹಜ. ಇದರ ನಿವಾರಣೆಗೆ ಬ್ರಿಡ್ಜ್ ಕೋರ್ಸ್‌ ಅನಿವಾರ್ಯ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಕ್ಕಳಲ್ಲಿ ಕಲಿಕೆಯ ಅಂತರ ಸಾಕಷ್ಟಿರುವುದು ಖಾಸಗಿ ಸಂಶೋಧನೆಗಳಿಂದ ತಿಳಿದು ಬಂದಿದೆ. ಅದರ ನಿವಾರಣೆಗಾಗಿ ಬ್ರಿಡ್ಜ್ ಕೋರ್ಸ್‌ ನಡೆಸಲಿದ್ದೇವೆ. ಸಮಗ್ರ ಶಿಕ್ಷಣ ವಿಭಾಗವು ಬ್ರಿಡ್ಜ್ ಕೋರ್ಸ್‌ ಸಿದ್ಧಪಡಿಸಲಿದ್ದು, ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಮೌಲ್ಯಮಾಪನ ಆರಂಭಿಸಲಿದ್ದೇವೆ.
-ವಿ. ಅನುºಕುಮಾರ್‌, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next