ಕೊಪ್ಪಳ: ತಾಲೂಕಿನ ಬೋಚನಹಳ್ಳಿ ಸಮೀಪದಲ್ಲಿ ಇತ್ತೀಚೆಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲಾಗಿದೆಯಾದರೂ ಮಳೆ ನೀರು ನಿಲ್ಲುತ್ತಿಲ್ಲವಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಹಳ್ಳಕ್ಕೆ ನೀರು ಹರಿದು ಬಂದಿದ್ದು, ಗೇಟ್‌ಗಳ ಮಧ್ಯದಲ್ಲಿ ಅಧಿಕ ನೀರು ವ್ಯರ್ಥವಾಗಿ ಸೋರಿಕೆಯಾಗುತ್ತಿದೆ. ಹೊಸ ಸೇತುವೆ ಕಟ್ಟಿದ್ದಾರೆ ಎನ್ನುವ ಖುಷಿ ರೈತರಿಗೆ ಕೆಲವೇ ದಿನಗಳಲ್ಲಿ ಮಾಯವಾಗಿದೆ.
ಅಂದಾಜು 2 ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ಬ್ರಿಡ್ಜ್ ಈ ಕಂ ಬ್ಯಾರೇಜ್ ನಿರ್ಮಿಸಲಾಗಿದೆ. ಬೋಚನಹಳ್ಳಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಅಳವಂಡಿ ಹಳ್ಳದಿಂದ ನೀರು ಹರಿದು ಬಂದಿದ್ದು, 18 ಗೇಟ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ. ಈ ಬಗ್ಗೆ ಯಾರೊಬ್ಬರೂ ಗಮನ ಹರಿಸುತ್ತಿಲ್ಲ.
ಈ ಹಳ್ಳದಲ್ಲಿ ನೀರು ಸುತ್ತಲಿನ ನೂರಾರು ರೈತರಿಗೆ ಆಸರೆಯಾಗಿದೆ. ಬೋಚನಹಳ್ಳಿಯ ಶೇ.90 ರೈತರು ಇದೇ ಹಳ್ಳವನ್ನು ಆಶ್ರಯಿಸಿದ್ದು, ನೀರಾವರಿ ಸೌಲಭ್ಯ ಪಡೆಯುತ್ತಾರೆ. ಇದೇ ನೀರಿನಿಂದ ಎಲ್ಲರ ಬೋರ್‌ವೆಲ್ಗಳು ಪುನಃ ನೀರು ತುಂಬಿಕೊಂಡು ರೀಚಾರ್ಜ್ ಆಗಲಿವೆ. ಆದರೆ ಹೊಸ ಸೇತುವೆ ಕಟ್ಟಿದರೂ ವ್ಯರ್ಥ ಎನ್ನುವಂತಾಗಿದೆ. ಗೇಟ್‌ಗಳ ಮೂಲಕ ನೀರು ನಿತ್ಯವೂ ವ್ಯರ್ಥವಾಗಿ ಹರಿದು ಹೋಗುತ್ತಿದೆ.
ಸರ್ಕಾರ ರೈತರ ಅನುಕೂಲಕ್ಕಾಗಿ ಹಳ್ಳಗಳಿಗೆ ಸೇತುವೆ ನಿರ್ಮಿಸುತ್ತಿದೆ. ಆದರೆ ಗುತ್ತಿಗೆದಾರರ ಕಳಪೆ ಕೆಲಸದಿಂದ ಹೊಸ ಸೇತುವೆ ಕಟ್ಟಿದರೂ ವ್ಯರ್ಥ ಎನ್ನುವಂತಾಗಿದೆ. ಗೇಟ್‌ಗಳ ಮೂಲಕ ನೀರು ನಿತ್ಯವೂ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಸೇತುವೆ ಎರಡೂ ಬದಿಯಲ್ಲಿ ಕಲ್ಲು ಹಾಕಲಾಗಿದೆ. ಆದರೆ ಯರೆ ಮಣ್ಣಿನಲ್ಲಿಯೇ ಆ ಕಲ್ಲುಗಳನ್ನು ಇಟ್ಟಿದ್ದರಿಂದ ಅದು ಕುಸಿಯುತ್ತಿದೆ. ಕನಿಷ್ಟ ಪಕ್ಷ ಕೆಂಪು ಮಣ್ಣು ಹಾಕಿ ಗಟ್ಟಿಗೊಳಿಸಿ ಪುಡಿ ಕಲ್ಲುಗಳನ್ನು ಹಾಕಬೇಕಿತ್ತು. ಮಳೆ ನೀರಿನಿಂದ ಆ ತಡೆಗೋಡೆ ನೆನೆದು ಕುಸಿಯುತ್ತಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು, ಗುತ್ತಿಗೆದಾರರು ಈ ಕೂಡಲೇ ಸಮಸ್ಯೆ ಆಲಿಸಿ ರೈತರ ಅನುಕೂಲಕ್ಕಾಗಿ ನಿರ್ಮಿಸಿರುವ ಬ್ರಿಜ್ಡ್ ಕಂ ಬ್ಯಾರೇಜ್ ಅನ್ನು ಪುನಃ ದುರಸ್ತಿ ಮಾಡಿಸಿ ನೀರು ನಿಲ್ಲುವಂತೆ ಮಾಡಿ ರೈತರ ಬಾಳಿಗೆ ಬೆಳಕಾಗಬೇಕಿದೆ.
•ಸರ್ಕಾರದ ಪ್ರಯತ್ನ ವ್ಯರ್ಥ
•ಹಾಕಿದ ತಡೆಗೋಡೆಯೂ ನೆನೆದು ಕುಸಿಯುತ್ತಿದೆ
•ದುರಸ್ತಿ ಮಾಡಿಸಿ ನೀರು ನಿಲ್ಲುವಂತೆ ಮಾಡಬೇಕಿದೆ
ನಮ್ಮ ಗ್ರಾಮ ಸಮೀಪದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಅನ್ನು ನಿರ್ಮಿಸಲಾಗಿದೆ. ಇತ್ತೀಚೆಗೆ ಮಳೆ ಬಂದು ನೀರು ಸಂಗ್ರಹವಾಗಿದೆ. ಆದರೆ ಸಂಗ್ರಹಗೊಂಡ ನೀರೆಲ್ಲ ಗೇಟ್‌ಗಳ ಮೂಲಕ ಸೋರಿಕೆಯಾಗಿ ಹರಿದು ಹೋಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಹೆಚ್ಚು ಗಮನ ಹರಿಸಿ ಹರಿದು ಹೋಗುವ ನೀರು ಉಳಿಸಿಕೊಳ್ಳಬೇಕಿದೆ.
•ಕುಳಳ್ಳೆಪ್ಪ ಹುಲಕೋಟಿ,ಗ್ರಾಮಸ್ಥ
ಬೋಚನಹಳ್ಳಿ ಸಮೀಪದ ಸೇತುವೆ ನಮ್ಮ ಇಂಜಿನಿಯರ್‌ಗಳ ಎಡವಟ್ಟಿನಿಂದ ಕೆಲ ತಾಂತ್ರಿಕ ತೊಂದರೆಯಾಗಿದೆ. 2 ಕೋಟಿ ರೂ.ಗಳಿಗೆ ಟೆಂಡರ್ ಕರೆಯಲಾಗಿತ್ತು. ಅಷ್ಟು ಕಾಮಗಾರಿ ಮಾಡಿದೆ. ಇನ್ನೂ 2 ಕೋಟಿ ಅವಶ್ಯಕತೆಯಿದ್ದು, ಪ್ರಸ್ತಾವನೆ ಸಲ್ಲಿಸಲಾಗಿದೆ. ಬೋಚನಹಳ್ಳಿ ಸ್ಥಳಕ್ಕೆ ತೆರಳಿ ಅಲ್ಲಿನ ಪರಿಸ್ಥಿತಿ ಅವಲೋಕಿಸುವೆ.
•ಬಿ.ಟಿ.ಮೋಹನ, ಸಣ್ಣ ನೀರಾವರಿ ಇಲಾಖೆ ಅಭಿಯಂತರ ಕೊಪ್ಪಳ
•ದತ್ತು ಕಮ್ಮಾರ