ಕೋಲ್ಕತ್ತಾ: ಪಶ್ಚಿಮ ಬಂಗಾಲದ ಚಟರ್ಜಿ ಎನ್ನುವ 37 ವರ್ಷದ ವ್ಯಕ್ತಿ ಪತ್ರಿಕೆಯೊಂದರ “ವಧು-ವರರ ವೇದಿಕೆ’ಗೆ ನೀಡಿರುವ ಜಾಹೀರಾತು ಈಗ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾ ವ್ಯಸನವಿರದ ವಧು ಬೇಕು ಎಂದು ಈ ಆಕಾಂಕ್ಷಿ ಬೇಡಿಕೆಯಿಟ್ಟಿರುವುದು ಇದಕ್ಕೆ ಕಾರಣ! ಜಾಹೀರಾತಿನಲ್ಲಿ ಚಟರ್ಜಿ ಅವರ ಕುರಿತೂ ವಿವರಗಳಿವೆ. “”37 ವರ್ಷ, 5.7 ಅಡಿ ಎತ್ತರದ, ಸುಂದರ, ಶ್ವೇತವರ್ಣದ ಯೋಗಪಟು, ಸಂಶೋಧಕ, ಹೈಕೋರ್ಟ್‌ನಲ್ಲಿ ವಕೀಲರಾಗಿ ಕೆಲಸ ಮಾಡುತ್ತಿರುವ ಚಟರ್ಜಿಗೆ ವಧು ಬೇಕಾಗಿದ್ದಾಳೆ. ಹಳ್ಳಿಯಲ್ಲಿ ಸ್ವಂತ ಮನೆ ಹೊಂದಿರುವ ಚಟರ್ಜಿ ಬಳಿ ಕಾರು ಕೂಡ ಇದ್ದು, ಪೋಷಕರೊಂದಿಗೆ ವಾಸಿಸುತ್ತಿದ್ದಾರೆ. ವಧು ಬೆಳ್ಳಗೆ, ತೆಳ್ಳಗೆ, ಸುಂದರವಾಗಿ ಇರಬೇಕು. ಅಲ್ಲದೇ ಸೋಷಿಯಲ್ ಮೀಡಿಯಾದ ವ್ಯಸನಿಯಾಗಿರಬಾರದು” ಎನ್ನುತ್ತದೆ ಈ ಜಾಹೀರಾತು. ಈ ವಿಚಿತ್ರ ಬೇಡಿಕೆಯ ಜಾಹೀರಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, “ಬದಲಾದ ಸಮಯದಲ್ಲಿ, ಹೇಗೆ ಜನರ ನಿರೀಕ್ಷೆಗಳೂ ಬದಲಾಗುತ್ತಿವೆಯಲ್ಲ” ಎಂದು ನೆಟ್ಟಿಗರು ಟ್ರಾಲ್ ಮಾಡುತ್ತಿದ್ದಾರೆ.