Advertisement

Brics Summit 2024:ಬ್ರಿಕ್ಸ್ ಸಮಾವೇಶಕ್ಕೆ ಮುನ್ನುಡಿ ಬರೆದ ಭಾರತ -ಚೀನಾ ಸಂಘರ್ಷ ಶಮನ

02:40 PM Oct 22, 2024 | Team Udayavani |

ಗಡಿ ಪ್ರದೇಶದಲ್ಲಿ ಗಸ್ತಿಗೆ ಸಂಬಂಧಿಸಿದಂತೆ ಚೀನಾದ ಜೊತೆಗೆ ಒಂದು ಒಪ್ಪಂದಕ್ಕೆ ಬರಲಾಗಿದೆ ಎಂದು ಭಾರತ ಇತ್ತೀಚೆಗೆ ಘೋಷಿಸಿದೆ. ಮುಂಬರುವ ಬ್ರಿಕ್ಸ್ ಸಮಾವೇಶಕ್ಕೆ ಮುನ್ನ ಈ ಬೆಳವಣಿಗೆ ನಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಮಿಲಿಟರಿ ಸಂಘರ್ಷದತ್ತ ಮುಖ ಮಾಡಿ ನಿಂತಿದ್ದ ನೆರೆ ರಾಷ್ಟ್ರಗಳಾದ ಭಾರತ ಮತ್ತು ಚೀನಾಗಳು ತಮ್ಮ ಸಂಬಂಧವನ್ನು ಸುಧಾರಿಸುವತ್ತ ಹೆಜ್ಜೆ ಇಡುವುದರ ಸಂಕೇತವಾಗಿದೆ.

Advertisement

ಅಕ್ಟೋಬರ್ 21, ಸೋಮವಾರದಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಮಾಧ್ಯಮಗಳೊಡನೆ ಮಾತನಾಡುತ್ತಾ, ಭಾರತ ಮತ್ತು ಚೀನಾಗಳ ಗಡಿಯಾದ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ (ಎಲ್ಎಸಿ) ನಲ್ಲಿ ಗಸ್ತು ನಡೆಸುವುದಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳು ಒಂದು ಒಪ್ಪಂದಕ್ಕೆ ಬಂದಿವೆ ಎಂದಿದ್ದಾರೆ. 1962ರಲ್ಲಿ ಭಾರತ ಚೀನಾ ನಡುವೆ ನಡೆದ ಯುದ್ಧದ ಬಳಿಕ ಸ್ಥಾಪಿಸಲಾದ, ಅನಧಿಕೃತವಾದ ಎಲ್ಎಸಿ ಭಾರತದ ನಿಯಂತ್ರಣದಲ್ಲಿರುವ ಪೂರ್ವ ಲಡಾಖ್ ಮತ್ತು ಚೀನಾ ನಿಯಂತ್ರಿತ ಅಕ್ಸಾಯ್ ಚಿನ್ ಪ್ರದೇಶಗಳನ್ನು ಪ್ರತ್ಯೇಕಿಸುತ್ತದೆ. ಯುದ್ಧದ ಬಳಿಕ ಜಾರಿಗೆ ಬಂದ ತಾತ್ಕಾಲಿಕ ಕದನ ವಿರಾಮದ ಬಳಿಕ, ಭಾರತ ಮತ್ತು ಚೀನಾಗಳು ಈ ಗಡಿಯನ್ನು ಅನುಸರಿಸುತ್ತಾ ಬಂದಿವೆ. ವರದಿಗಳ ಪ್ರಕಾರ, ಪ್ರಸ್ತುತ ಒಪ್ಪಂದ ವಿವಾದಾತ್ಮಕ, ಉದ್ವಿಗ್ನ ಪ್ರದೇಶಗಳಾದ ದೆಪ್ಸಾಂಗ್ ಮತ್ತು ದೆಮ್‌ಚೊಕ್ ಪ್ರದೇಶಗಳಲ್ಲಿನ ಗಸ್ತು ಪ್ರಕ್ರಿಯೆಯತ್ತ ಗಮನ ಹರಿಸಲಿದೆ.

ಚೀನಾದ ಜೊತೆಗೆ ಹಲವು ವಾರಗಳ ಕಾಲ, ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ಇದರ ಪರಿಣಾಮವಾಗಿ ಎಲ್ಎಸಿ ಆದ್ಯಂತ ಗಸ್ತು ಪ್ರಕ್ರಿಯೆಗೆ ಒಂದು ಸಮರ್ಪಕ ಮಾರ್ಗೋಪಾಯ ಲಭಿಸಿದೆ ಎಂದು ಮಿಸ್ರಿ ಹೇಳಿದ್ದಾರೆ. ಈ ಒಪ್ಪಂದ ಸೇನಾ ಪಡೆಗಳನ್ನು ಹಿಂಪಡೆಯಲು ಅನುಕೂಲ ಕಲ್ಪಿಸಿದ್ದು, ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಯಾಗಿಸಿ, 2020ರ ಚಕಮಕಿಯ ಬಳಿಕ ಈ ಪ್ರದೇಶದಲ್ಲಿ ತಲೆದೋರಿದ ವಿಷಮ ಪರಿಸ್ಥಿತಿಯನ್ನು ನಿವಾರಿಸಲು ನೆರವಾಗಲಿದೆ. ಆದರೆ, ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (ಎಸ್‌ಸಿಎಂಪಿ) ವರದಿಯ ಪ್ರಕಾರ, ಬೀಜಿಂಗ್ ಇನ್ನೂ ಈ ಒಪ್ಪಂದವನ್ನು ಖಚಿತಪಡಿಸಿಲ್ಲ.

ಭಾರತ ಮತ್ತು ಚೀನಾಗಳ ನಡುವೆ ವಿವಾದಾತ್ಮಕವಾದ, ಅತ್ಯಂತ ದೀರ್ಘವಾದ, 3,440 ಕಿಲೋಮೀಟರ್ (2,100 ಮೈಲಿ) ಉದ್ದನೆಯ ಗಡಿ ಇದ್ದು, ಇದನ್ನು ಇಂದಿಗೂ ಖಚಿತವಾಗಿ ಗುರುತಿಸಲಾಗಿಲ್ಲ. ನೈಸರ್ಗಿಕ ಅಂಶಗಳಾದ ನದಿಗಳು, ಸರೋವರಗಳು, ಮತ್ತು ಹಿಮಾಚ್ಛಾದಿತ ಪ್ರದೇಶಗಳು ಗಡಿ ಪ್ರದೇಶ ಆಗಾಗ್ಗೆ ಬದಲಾಗುವಂತೆ ಮಾಡುತ್ತವೆ. ಇದರಿಂದಾಗಿ ಎರಡೂ ಬದಿಯ ಯೋಧರು ನೇರಾನೇರ ಎದುರಾಗಿ, ಚಕಮಕಿಯ ಸಾಧ್ಯತೆಗಳು ಉಂಟಾಗುತ್ತವೆ. ಭಾರತ ಮತ್ತು ಚೀನಾಗಳೆರಡೂ ಎಲ್ಎಸಿ ಆದ್ಯಂತ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಸ್ಪರ್ಧೆಗಿಳಿದಿವೆ.

Advertisement

ಉಭಯ ದೇಶಗಳ ಯೋಧರ ನಡುವೆ ಇತ್ತೀಚಿನ ಅತ್ಯಂತ ತೀಕ್ಷ್ಣ ಚಕಮಕಿ ಜೂನ್ 15, 2020ರಂದು ಗಲ್ವಾನ್ ಕಣಿವೆಯಲ್ಲಿ ತಲೆದೋರಿತು. ಈ ಚಕಮಕಿಯಲ್ಲಿ ಭಾರತದ 20 ಸೈನಿಕರು ಮತ್ತು ಚೀನಾದ ಕನಿಷ್ಠ 4 ಸೈನಿಕರು ಪ್ರಾಣ ಕಳೆದುಕೊಂಡಿದ್ದರು. ಈ ಚಕಮಕಿಯಲ್ಲಿ ಉಭಯ ದೇಶಗಳ ಸೈನಿಕರು ಮದ್ದು ಗುಂಡುಗಳನ್ನು ಬಳಸದೆ, ಹೊಡೆದಾಟಕ್ಕೆ ಇಳಿದು ಪ್ರಾಣ ಕಳೆದುಕೊಂಡಿದ್ದರು. ಭಾರತ ಒಂದು ಅತ್ಯಂತ ಎತ್ತರದ ವಾಯುನೆಲೆಗೆ ತೆರಳಲು ನೂತನ ಮಾರ್ಗವನ್ನು ನಿರ್ಮಿಸುತ್ತಿತ್ತು. ಇದನ್ನು ಚೀನಾ ಪ್ರಚೋದನೆ ಎಂದು ಪರಿಗಣಿಸಿದ್ದರಿಂದ ಈ ಹೊಡೆದಾಟ ಸಂಭವಿಸಿತ್ತು.

ಅಂದಿನಿಂದ, ಭಾರತ ಮತ್ತು ಚೀನಾಗಳು ತಮ್ಮ ಯೋಧರನ್ನು ಗಡಿಯಾದ್ಯಂತ ನಿಯೋಜಿಸಿವೆ. ಇದೇ ಸಮಯದಲ್ಲಿ, ಉಭಯ ದೇಶಗಳು ರಾಜತಾಂತ್ರಿಕ ವಿಧಾನದಲ್ಲೂ ಸುದೀರ್ಘ ಮಾತುಕತೆಗಳನ್ನು ಮತ್ತು ಮಿಲಿಟರಿ ಸಭೆಗಳನ್ನು ನಡೆಸುತ್ತಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಿವೆ. ಆದರೆ ಪ್ರಸ್ತುತ ಉದ್ವಿಗ್ನ ಪರಿಸ್ಥಿತಿ ಜಗತ್ತಿನ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಾದ ಭಾರತ ಮತ್ತು ಚೀನಾಗಳ ನಡುವಿನ ಆರ್ಥಿಕ ಸಹಕಾರ ಮತ್ತು ಇತರ ಕ್ಷೇತ್ರಗಳ ಮೇಲೆ ದುಷ್ಪರಿಣಾಮ ಬೀರಿದೆ. ಅದರಲ್ಲೂ ಭಾರತ ಚೀನಾದ ಹೂಡಿಕೆಯ ಮೇಲೆ ಅತ್ಯಂತ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿದೆ.

ರಷ್ಯಾದ ಕಜಾ಼ನ್ ನಲ್ಲಿ ಅಕ್ಟೋಬರ್ 22ರಿಂದ 24ರ ತನಕ ನಡೆಯಲಿರುವ, ಬೆಳೆಯುತ್ತಿರುವ ಆರ್ಥಿಕತೆಗಳ‌ ಸಭೆಯಾದ ಬ್ರಿಕ್ಸ್ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ತೆರಳುವ ಒಂದು ದಿನ ಮುನ್ನ ಮಿಸ್ರಿ ನೂತನ ಒಪ್ಪಂದದ ಘೋಷಣೆ ಮಾಡಿದ್ದಾರೆ. ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಮಾತುಕತೆ ನಡೆಸುವ ಸಾಧ್ಯತೆಗಳಿವೆ. ಬ್ರಿಕ್ಸ್ ಒಕ್ಕೂಟವನ್ನು 2009ರಲ್ಲಿ ಸ್ಥಾಪಿಸಿದಾಗ, ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾಗಳು ಅದರ ಸ್ಥಾಪಕ ಸದಸ್ಯ ರಾಷ್ಟ್ರಗಳಾಗಿದ್ದವು. ಕಾಲಕ್ರಮೇಣ, ಈ ಒಕ್ಕೂಟಕ್ಕೆ ದಕ್ಷಿಣ ಆಫ್ರಿಕಾ, ಈಜಿಪ್ಟ್, ಇಥಿಯೋಪಿಯ, ಇರಾನ್, ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳು ಸೇರ್ಪಡೆಗೊಂಡವು.

*ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Advertisement

Udayavani is now on Telegram. Click here to join our channel and stay updated with the latest news.

Next