ಹುಳಿಯಾರು: ಕೆಆರ್‌ಎಸ್ ಜಲಾಶಯ ಕ್ಕಿಂತಲೂ ಮೊದಲೇ ನಿರ್ಮಾಣಗೊಂಡ 125 ವರ್ಷಗಳ ಇತಿಹಾಸವುಳ್ಳ ಹುಳಿಯಾರು ಹೋಬಳಿಯ ಬೋರನಕಣಿವೆ ಜಲಾಶಯದ ಒಳಗೋಡೆಗಳು ಶಿಥಿವಾಗಿದ್ದು, ಸಣ್ಣ ನೀರಾವರಿ ಇಲಾಖೆಯಿಂದ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
1892ರಲ್ಲಿ ಮೈಸೂರು ಮಹಾರಾಜರು ಕಲ್ಲು, ಮಣ್ಣಿನ ಇಟ್ಟಿಗೆ ಮತ್ತು ಗಾರೆಯಿಂದ ಈ ಜಲಾಶಯವನ್ನು ಕಟ್ಟಿಸಿದ್ದರು. ಜಲಾಶಯ ಕಟ್ಟಿ ನೂರಾರು ವರ್ಷವಾಗಿರುವುದರಿಂದ ಸಹಜವಾಗಿ ಜಲಾಶಯದ ಒಳ ಗೋಡೆಯ ಗಾರೆ ಸಂಪೂರ್ಣ ಹಾಳಾಗಿತ್ತು. ಅಲ್ಲದೆ, ಗೋಡೆಯ ಇಟ್ಟಿಗೆಯೂ ಸಹ ನೂರಾರು ವರ್ಷಗಳಿಂದ ನೀರಿನಲ್ಲಿ ನೆನೆದು ಕರಗುತ್ತಿತ್ತು. ಹೀಗೆ ನಿರ್ಲಕ್ಷ್ಯದಿಂದ ಇಡೀ ಜಲಾಶಯವೇ ಶಿಥಿಲವಾಗುವ ಆತಂಕ ಎದುರಾಗಿತ್ತು.
ಕೆಳಮಟ್ಟದಲ್ಲಿದೆ ನೀರು: ಅಲ್ಲದೆ ಜಲಾಶಯದ ಗೋಡೆಯಲ್ಲಿ ಅರಳಿಗಿಡ ಸೇರಿದಂತೆ ವಿವಿಧ ಗಿಡಗಳು ಬೆಳೆದಿದ್ದು, ಇವುಗಳ ಬೇರುಗಳು ಜಲಾಶಯ ಕೊರೆದು ಜಲಾಶಯಕ್ಕೆ ಭಾರಿ ಹಾನಿ ಮಾಡುವ ಸಂಭವವಿತ್ತು. ಕಳೆದ ಎರಡು- ಮೂರು ವರ್ಷಗಳಿಂದ ಬೋರನ ಕಣಿವೆ ಜಲಾಶಯ ಪ್ರದೇಶದಲ್ಲಿ ಉತ್ತಮ ಮಳೆಯಾಗದ ಪರಿಣಾಮ, ಈಗ ಜಲಾಶಯದಲ್ಲಿ ಡೆಡ್ ಸ್ಟೋರೇಜ್ ಮಟ್ಟಕ್ಕಿಂತಲೂ ಕೆಳಮಟ್ಟದಲ್ಲಿ ನೀರಿದ್ದು, ಶಿಥಿಲಗೊಂಡ ಗೋಡೆಗಳನ್ನು ಅನಾಯಾಸ ವಾಗಿ ದುರಸ್ತಿ ಮಾಡಬಹುದಾಗಿತ್ತು.
ಇದನ್ನೂ ಓದಿ:ನಾಗಾಲೋಟ: ಸಾರ್ವಕಾಲಿಕ ದಾಖಲೆ – 60 ಸಾವಿರ ಸನಿಹಕ್ಕೆ ಬಾಂಬೆ ಷೇರುಪೇಟೆ ಸೆನ್ಸೆಕ್ಸ್
ಜಲಾಶಯದಲ್ಲಿ ನೀರು ಸಂಗ್ರಹ: ಈ ಜಲಾಶಯಕ್ಕೆ ಶೀಘ್ರದಲ್ಲೇ ಹೇಮೆ ಮತ್ತು ಭದ್ರೆಯ ನೀರು ಹರಿಯುವುದರಲ್ಲದೆ ಹುಳಿಯಾರು, ಗಾಣಧಾಳು, ಹೊಯ್ಸಲಕಟ್ಟೆ, ಕೆಂಕೆರೆ ಗ್ರಾಪಂ ವ್ಯಾಪ್ತಿಗೆ ಕುಡಿಯುವ ನೀರು ಪೂರೈಸಲು ಜಲಾಶಯದಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳಬೇಕಿದೆ. ಹೀಗಾಗಿ ಈ ಅವಕಾಶವನ್ನು ಬಿಟ್ಟರೆ, ಇನ್ನೆಂದೂ ದುರಸ್ತಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸಾರ್ವಜನಿಕರು ದುರಸ್ತಿಗೆ ಒತ್ತಡ ಹಾಕಿದ್ದರು. ಈಗ ಸಣ್ಣ ನೀರಾವರಿ ಇಲಾಖೆಯಿಂದ ಜಲಾಶಯದ ದುರಸ್ತಿ ಕಾರ್ಯ ಆರಂಭವಾಗಿದ್ದು, ಯಂತ್ರೋಪಕರಣಗಳು ಜಲಾಶಯದ ಬಳಿ ತೆರಳಲು 3 ಕಿ.ಮೀ ದೂರದಿಂದ ಹೊಸದಾಗಿ ಮಣ್ಣು ಹೊಡೆದು ರಸ್ತೆ ಮಾಡಲಾಗುತ್ತಿದೆ. ಅಲ್ಲದೆ, ಶಿಥಿಲಗೊಂಡ ಗೋಡೆಗಳ ಬಳಿ ಯಂತ್ರಗಳು ನಿಲ್ಲಲು ಅಲ್ಲಿನ ನೀರು ಹಾಗೂ ಹೂಳು ತೆರವು ಮಾಡಿ, ಬಂಡ್ ಹಾಕಲಾಗುತ್ತಿದೆ. ಎರಡು- ಮೂರು ಜೆಸಿಬಿ, ಏಳೆಂಟು ಟಿಪ್ಪರ್‌ಗಳು, ಅನೇಕ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳಲಾಗಿದ್ದು, ಬಿರುಸಿನಿಂದ ಕಾಮಗಾರಿ ನಡೆಯುತ್ತಿದೆ.
10 ದಿನದಲ್ಲಿ ದುರಸ್ತಿ ಪೂರ್ಣ
ಬೋರನಕಣಿವೆ ಗೋಡೆಗಳ ದುರಸ್ತಿ ಕಾರ್ಯವನ್ನು ಸಣ್ಣ ನೀರಾವರಿ ಇಲಾಖೆಯಿಂದ ಕೈಗೆತ್ತಿಕೊಳ್ಳಲಾಗಿದೆ. ನದಿ ನೀರು ಹರಿಯುವ ಮುನ್ನ ದುರಸ್ತಿ ಮಾಡಲೇ ಬೇಕಿರುವುದರಿಂದ ತುರ್ತು ಕಾಮಗಾರಿ ಎಂದು ಪರಿಗಣಿಸಿ, ಟೆಂಡರ್ ಕರೆಯದೆ ಕಾಮಗಾರಿ ಮಾಡಿಸಲಾಗುತ್ತಿದೆ. ಜಲಾಶಯದ ಕೆಳಗೆ ಮೂರು- ನಾಲ್ಕು ಅಡಿಯಿಂದಲೂ ವಾಟರ್ ಪ್ಲಾಸ್ಟ್ರಿಂಗ್ ಮಾಡಲಾಗುತ್ತಿದೆ. ಗೋಡೆಗಳ ಮೇಲೆ ಬೆಳೆದಿರುವ ಗಿಡಗಳನ್ನೂ ಸಹ ತೆರವು ಮಾಡಲಾಗುವುದು. 10 ದಿನಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆಯ ಜೆಇ ಪ್ರಭಾಕರ್ ತಿಳಿಸಿದ್ದಾರೆ.