Advertisement

ಲಂಚ ನಿಯಂತ್ರಣ, ಅರ್ಹರಿಗೆ ಜನಪರ ಯೋಜನೆಗಳು: ಲೋಕಾಯುಕ್ತ 

03:45 AM Feb 05, 2017 | Team Udayavani |

ಉಡುಪಿ: ಸರಕಾರಿ ಕೆಲಸಗಳಲ್ಲಿ ಲಂಚದ ಪ್ರಭಾವ ಕಡಿಮೆ ಮಾಡಿ, ವಿವಿಧ ಯೋಜನೆಗಳು ಅರ್ಹರಿಗೆ ಸಕಾಲದಲ್ಲಿ ತಲುಪಿಸಲು ಅಗತ್ಯದ ಕ್ರಮ ವಹಿಸುತ್ತೇನೆಂದು ಲೋಕಾಯುಕ್ತ ನ್ಯಾ|ಪಿ.ವಿಶ್ವನಾಥ ಶೆಟ್ಟಿ ತಿಳಿಸಿದರು.

Advertisement

ಶನಿವಾರ ಹುಟ್ಟೂರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಲಂಚ ಕೊಡುವವರು ಇರುವವರೆಗೆ ತೆಗೆದುಕೊಳ್ಳುವವರೂ ಇರುತ್ತಾರೆ. ಇದನ್ನು ನಿಯಂತ್ರಿಸಬೇಕು. ವಿವಿಧ ಯೋಜನೆಗಳನ್ನು ತಲುಪಿಸಲು ಎಲ್ಲ ಅಧಿಕಾರಿಗಳನ್ನು ಸೇರಿಸಿ ಪ್ರಯತ್ನಿಸಲಾಗುವುದು ಎಂದರು.

14 ತಿಂಗಳಿನಿಂದ ಲೋಕಾಯುಕ್ತ ಹುದ್ದೆ ಖಾಲಿ ಇದೆ. ಪ್ರಸ್ತುತ ಲೋಕಾಯುಕ್ತರಿಂದ ತೀರ್ಮಾನವಾಗಬೇಕಾದ ಸುಮಾರು 2,400 ಅರ್ಜಿಗಳು, ಇಬ್ಬರು ಉಪಲೋಕಾಯುಕ್ತರಲ್ಲಿ ಸುಮಾರು 4,000 ಅರ್ಜಿಗಳು ಬಾಕಿ ಇವೆ. ಲೋಕಾಯುಕ್ತ ಹುದ್ದೆ ಖಾಲಿ ಇದ್ದರೂ ಉಳಿದ ಕೆಲಸಗಳು ನಡೆಯುತ್ತಿವೆ ಎಂದರು.

ಅರಸಿದ ಹುದ್ದೆಯಲ್ಲ
ಪ್ರಶ್ನೆಗೆ ಉತ್ತರಿಸಿದ ಅವರು, ನಾನಾಗಿ ಕೇಳಿಕೊಂಡು ಬಂದ ಹುದ್ದೆ ಇದಲ್ಲ. ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಹುದ್ದೆಯಿಂದ ನಿವೃತ್ತಿಯಾಗಿ ಹತ್ತು ವರ್ಷಗಳಾಗಿವೆ. ನಿವೃತ್ತಿಯಾಗುವ ಸಂದರ್ಭ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಬೌದ್ಧಿಕ ಆಸ್ತಿ ಹಕ್ಕು ಮೇಲ್ಮನವಿ ಪ್ರಾಧಿಕಾರ, ಕಂಪ್ಯೂಟರೀಕರಣ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ಬರಲು ಹೇಳಿದರೂ ವಕಾಲತ್ತು ಮಾಡಬೇಕೆಂಬ ಇರಾದೆಯಿಂದ ಬಂದ ಪ್ರಸ್ತಾವನೆಯನ್ನು ನಿರಾಕರಿಸಿದ್ದೆ. ನಾನು ಲಕ್ಷಾಂತರ ರೂ. ತೆರಿಗೆ ಪಾವತಿಸಿದವ, ಯಶಸ್ವಿ ನ್ಯಾಯವಾದಿಯಾಗಿ ಲಕ್ಷಾಂತರ ರೂ. ಆದಾಯವನ್ನು ತ್ಯಜಿಸಿ ಈ ಹುದ್ದೆಗೆ ಬಂದವ ಎಂದರು.

ಆರೋಪ ಕುರಿತು ಪ್ರಶ್ನಿಸಿದಾಗ ನ್ಯಾಯಮೂರ್ತಿಯಾಗುವ ಮೊದಲು ಪಡೆದ ನಿವೇಶನ, ನಿರ್ಮಿಸಿದ ಮನೆ ಬಗ್ಗೆ ನ್ಯಾಯಮೂರ್ತಿಯಾದಾಗಲೂ ಬಾರದ ಪ್ರಶ್ನೆ ಈಗ ಬರುತ್ತಿದೆ. ರಾಜ್ಯಪಾಲರು, ಸಾಂವಿಧಾನಿಕ ಹುದ್ದೆಯ ಮುಖ್ಯಮಂತ್ರಿ, ಸ್ಪೀಕರ್‌, ವಿಪಕ್ಷ ನಾಯಕರೇ ಮೊದಲಾದ ಆರು ಸದಸ್ಯರು ನನ್ನ ಹೆಸರು ಪ್ರಸ್ತಾವಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಯವರ ಶಿಫಾರಸಿನಂತೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯನಾಗಿ ಕೇಂದ್ರ ಸರಕಾರ ನನ್ನನ್ನು ನೇಮಿಸಿತು. ಮುಖ್ಯ ನ್ಯಾಯಮೂರ್ತಿಗಳು ಶಿಫಾರಸು ಮಾಡಬೇಕಾದರೆ ನನ್ನ ಪೂರ್ವಾಪರಗಳನ್ನು ತಿಳಿದಿರುವುದಿಲ್ಲವೆ ಎಂದು ಪ್ರಶ್ನಿಸಿದರು.

Advertisement

ರೆಡ್ಡಿ ಕಪ್ಪೋ? ಬಿಳಿಯೋ? ನೋಡಿಲ್ಲ
ಜನಾರ್ದನ ರೆಡ್ಡಿ, ಡಿ.ಕೆ.ಶಿವಕುಮಾರ್‌ ಅಂತಹವರ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ಹೇಳುತ್ತಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಕಕ್ಷಿದಾರರ ನ್ಯಾಯವಾದಿಗಳು ನಮ್ಮನ್ನು ನೇಮಿಸುತ್ತಾರೆ. ನಾನು ಇದುವರೆಗೆ ಜನಾರ್ದನ ರೆಡ್ಡಿ ಕಪ್ಪಿದ್ದಾರೋ? ಬಿಳಿ ಇದ್ದಾರೋ ನೋಡಿಲ್ಲ. ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಪರವಾಗಿಯೂ ವಾದಿಸಿದ್ದೇನೆ. ಎಷ್ಟೋ ಕ್ರಿಮಿನಲ್‌ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದವರಿಗೆ ಹಣವಿಲ್ಲದಿದ್ದಾಗ ಅತೀ ಕಡಿಮೆ ಶುಲ್ಕ ತೆಗೆದುಕೊಂಡೂ ವಾದಿಸಿದ್ದೇನೆ. ಇದು ಯಶಸ್ವೀ ನ್ಯಾಯವಾದಿತನವನ್ನು ತೋರಿಸುತ್ತದೆ. ನಾನು ಯಾರ ಪರವಾಗಿ ವಾದಿಸಿದ್ದೇನೋ ಲೋಕಾಯುಕ್ತದಲ್ಲಿರುವ ಅವರ ಪ್ರಕರಣಗಳನ್ನು ತೆಗೆದುಕೊಳ್ಳಬಾರದಷ್ಟೆ. ಇದು ನಮ್ಮ ಸಂಬಂಧಿಕರ ಪ್ರಕರಣಗಳಿದ್ದರೂ ಅನ್ವಯವಾಗುತ್ತದೆ. ಕೆಲವರಿಗೆ ಲೋಕಾಯುಕ್ತ ಹುದ್ದೆ ಖಾಲಿ ಇರಬೇಕೆಂಬ ಹಂಬಲವಿರಬಹುದು ಎಂದರು.

ಎಸಿಬಿ- ನಿಭಾವಣೆ
ಎಸಿಬಿ ರಚನೆಯಿಂದ ತೊಡಕುಂಟಾಗಲಿಲ್ಲವೆ ಎಂದು ಪ್ರಶ್ನಿಸಿದಾಗ, ಎಸಿಬಿ ಈಗ ಸರಕಾರದ ಅಧೀನದಲ್ಲಿದೆ. ಪೊಲೀಸ್‌ ಇಲಾಖೆ ಸರಕಾರದ ಅಧೀನದಲ್ಲಿಲ್ಲವೆ? ಇದು ಪ್ರಜಾಪ್ರಭುತ್ವದಲ್ಲಿ ಸಹಜ. ಅತಿಯಾದ ಅಧಿಕಾರದಿಂದ ಅಪಾಯವೂ ಇರುತ್ತದೆ. ಲೋಕಾಯುಕ್ತರು ಶಿಫಾರಸು ಮಾಡಿದರೆ ತನಿಖೆ ಮಾಡಲಾಗುವುದಿಲ್ಲ ಎಂದು ಎಸಿಬಿಗೆ ಹೇಳಲಾಗದು. ನಾವು ಇದನ್ನು ನಿಭಾಯಿಸುವುದರಲ್ಲಿದೆ ಎಂದು ವಿಶ್ವನಾಥ ಶೆಟ್ಟಿ ತಿಳಿಸಿದರು.

ಸಮಸ್ಯೆಗಳಿದ್ದರೆ ನನಗೆ ತಿಳಿಸಬಹುದು
ವಿವಿಧ ಸರಕಾರಿ ಸೇವೆಗಳಲ್ಲಿ ಆಗುವ ಸಮಸ್ಯೆಗಳ ಕುರಿತು ಮಾಧ್ಯಮದವರು ತಿಳಿಸಿದರೂ ಆ ಬಗ್ಗೆ ಕ್ರಮ ವಹಿಸುತ್ತೇನೆ. ನನಗೂ ನೇರವಾಗಿ ತಿಳಿಸಬಹುದು (ಕಚೇರಿ: 080- 22257013). ನ್ಯಾಯಾಧೀಶನಾಗಿ, ನ್ಯಾಯವಾದಿಯಾಗಿ ಸುಮಾರು 50 ವರ್ಷಗಳ ಅನುಭವದಿಂದ ಹೊಸ ಹುದ್ದೆಯನ್ನು ನಿರ್ವಹಿಸುತ್ತೇನೆ.

– ನ್ಯಾ|ವಿಶ್ವನಾಥ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next