Advertisement

ಲಂಚ: ಪುತ್ತೂರು ತಹಶೀಲ್ದಾರ್‌ ಎಸಿಬಿ ಬಲೆಗೆ

09:15 AM Jun 21, 2019 | keerthan |

ಪುತ್ತೂರು: ಚುನಾವಣಾ ಕರ್ತವ್ಯದ ಸಿಬಂದಿಗೆ ಆಹಾರ ಪೂರೈಕೆಗೆ ಸಂಬಂಧಿಸಿದ ಬಿಲ್‌ಗೆ ಸಂಬಂಧಿಸಿ ಕ್ಯಾಟರಿಂಗ್‌ನವರಿಂದ ಲಂಚ ಸ್ವೀಕರಿಸಿದ ಪುತ್ತೂರು ತಹಶೀಲ್ದಾರ್‌ ಡಾ| ಪ್ರದೀಪ್‌ ಕುಮಾರ್‌ ಅವರು ಜೂ. 20ರಂದು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಲೋಕಸಭಾ ಚುನಾವಣೆ ಸಂದರ್ಭ ಕಂದಾಯ ಇಲಾಖೆ ಹಾಗೂ ಇತರ ಚುನಾ ವಣಾ ಕರ್ತವ್ಯದ ಸಿಬಂದಿಗೆ ಮಾ. 30ರಿಂದ ಎ. 18ರ ತನಕ ತರಬೇತಿ ಆಯೋಜಿಸಿದ್ದು ಅವರಿಗೆ ಪುತ್ತೂರಿನ ಪೈ ಕ್ಯಾಟರರ್ ಮೂಲಕ ಊಟ, ಉಪಾಹಾರ ಪೂರೈಸಲಾಗಿತ್ತು. ಅದರ ಒಟ್ಟು ಬಿಲ್‌ 9.39 ಲಕ್ಷ ರೂ. ಆಗಿತ್ತು.

ಕ್ಯಾಟರಿಂಗ್‌ನವರಿಗೆ ಬಿಲ್‌ ಪಾವತಿ ಸಂದರ್ಭ ತಹಶೀಲ್ದಾರ್‌ ಲಂಚಕ್ಕೆ ಬೇಡಿಕೆ ಸಲ್ಲಿಸಿದ್ದರು. ಮೂರು ಹಂತಗಳಲ್ಲಿ ಚೆಕ್‌ ನೀಡಿ ಕ್ಯಾಶ್‌ ಮಾಡಿಕೊಳ್ಳುವಂತೆ, ಅದರಲ್ಲಿ ತಮ್ಮ ಪಾಲು ನೀಡುವಂತೆ ತಿಳಿಸಿದ್ದರು. ಕ್ಯಾಟರಿಂಗ್‌ವರು ಅದಾಗಲೇ 99 ಸಾವಿರ ರೂ.ಗಳನ್ನು ತಹಶೀಲ್ದಾರ್‌ಗೆ ಲಂಚವಾಗಿ ಪಾವತಿಸಿದ್ದರು. 1.24 ಲಕ್ಷ ರೂ. ಮತ್ತೆ ನೀಡುವಂತೆ ಕ್ಯಾಟರಿಂಗ್‌ನವರಿಗೆ ತಮ್ಮ ಅಧೀನ ಅಧಿಕಾರಿಗಳ ಮೂಲಕ ದೂರವಾಣಿ ಕರೆ ಮಾಡಿಸಿ ಒತ್ತಡ ಹೇರಿದ್ದರು.

ಇದರಿಂದ ಬೇಸೆತ್ತ ಕ್ಯಾಟರಿಂಗ್‌ನವರು ಎಸಿಬಿಗೆ ದೂರು ನೀಡಿದ್ದರು. ಲಂಚಕ್ಕಾಗಿ ತಹಶೀಲ್ದಾರ್‌ ಪೀಡಿಸುತ್ತಿರುವುದನ್ನು ಖಚಿತಪಡಿಸಿಕೊಂಡ ಎಸಿಬಿ ಅಧಿಕಾರಿಗಳು ಜೂ. 20ರಂದು ಸಂಜೆ ಪುತ್ತೂರಿನಲ್ಲಿ ಕಾರ್ಯಾಚರಣೆ ನಡೆಸಿದರು.

ಬಲೆಬೀಸಿದ್ದು ಹೀಗೆ ಕ್ಯಾಟರಿಂಗ್‌ನವರು ಸಂಜೆ ತಹಶೀಲ್ದಾರ್‌ ಕಚೇರಿಗೆ ಬಂದು ಲಂಚದ ಹಣ 1.25 ಲಕ್ಷ ರೂ. ನೀಡಲು ಮುಂದಾದಾಗ ಡಾ| ಪ್ರದೀಪ್‌ ಕುಮಾರ್‌ ಅವರು ಕಚೇರಿಯ ಹೊರ ಭಾಗದಲ್ಲಿ ನೀಡುವಂತೆ ಸೂಚಿಸಿದ್ದಾರೆ.
ಅನಂತರದ ಕಚೇರಿಯಿಂದ ತಮ್ಮ ಸರಕಾರಿ ವಾಹನದಲ್ಲಿ ಹೊರಟ ತಹಶೀಲ್ದಾರ್‌ ಕ್ಯಾಟರಿಂಗ್‌ನವರಿಂದ ನಗರದ ಮಹಮ್ಮಾಯಿ ದೇವಸ್ಥಾನದ ಬಳಿ ಹಣವನ್ನು ವಾಹನದ ಡ್ರಾಯರ್‌ಗೆ ಹಾಕಿಸಿಕೊಂಡರು. ತಮ್ಮ ವಸತಿಯ ಕಡೆಗೆ ತಹಶೀಲ್ದಾರ್‌ ವಾಹನ ಸಾಗುತ್ತಿದ್ದಂತೆ ಪರ್ಲಡ್ಕ ರಸ್ತೆಯ ಕಲ್ಲಿಮಾರ್‌ನಲ್ಲಿ ಎಸಿಬಿ ಪೊಲೀಸರು ತಡೆದು ಹಣವನ್ನು ಹಾಗೂ ತಹಶೀಲ್ದಾರ್‌ ಅವರನ್ನು ವಶಕ್ಕೆ ಪಡೆದರು. ಬಳಿಕ ದರ್ಬೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ತನಿಖೆ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತಹಶೀಲ್ದಾರ್‌ ಅವರನ್ನು ರಾತ್ರಿ ಮಂಗಳೂರು ನ್ಯಾಯಾಧೀಶರ ಎದುರು ಹಾಜರುಪಡಿಸಲು ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ.

Advertisement

ಭ್ರಷ್ಟಾಚಾರ ನಿಗ್ರಹದ ಎಸ್ಪಿ ಉಮಾಪ್ರಶಾಂತ್‌ ನಿರ್ದೇಶನದಲ್ಲಿ ಡಿವೈಎಸ್ಪಿ ಮಂಜುನಾಥ ಕೌರಿ, ಇನ್ಸ್‌ಪೆಕ್ಟರ್‌ಗಳಾದ ಯೋಗೀಶ್‌ ಕುಮಾರ್‌, ಮೋಹನ್‌ ಕೊಟ್ಟಾರಿ, ಸಿಬಂದಿ ಹರಿಪ್ರಸಾದ್‌, ಉಮೇಶ್‌, ರಾಧಾಕೃಷ್ಣ ಕೆ., ರಾಧಾಕೃಷ್ಣ ಡಿ., ವೈಶಾಲಿ, ಪ್ರಶಾಂತ್‌, ಗಣೇಶ್‌, ರಿತೇಶ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next