Advertisement

ಮನೆ ಜಿಪಿಎಸ್‌ಗೆ ಲಂಚ-ಪ್ರತಿಭಟನೆ

02:37 PM Dec 03, 2020 | Suhan S |

ಗೋಕಾಕ: ಮಳೆ ಹಾಗೂ ಪ್ರವಾಹದಿಂದ ಕುಸಿದ ಮನೆಗಳ ಜಿ.ಪಿ.ಎಸ್‌ ಮಾಡಿ ವರದಿ ಸಲ್ಲಿಸಲು ಜಿ.ಪಂ ಇಂಜಿನಿಯರ್‌ಗಳು ರೈತರಿಂದ ಲಂಚ ಕೇಳಿ, ಅಸಭ್ಯವಾಗಿ ವರ್ತಿಸುತ್ತಿದ್ದಾರೆಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಬುಧವಾರ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ರೈತ ಸಂಘದ ನೂರಾರು ಕಾರ್ಯಕರ್ತರು ಅಸಭ್ಯವಾಗಿ ವರ್ತಿಸಿದ ಜಿ.ಪಂ ಇಂಜಿನಿಯರ್‌ ಪ್ರತಿಭಟನಾ ಸ್ಥಳಕ್ಕೆ ಬಂದು ರೈತರ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದುಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿ.ಪಂ ಎಇಇ ಉದಯಕುಮಾರ ಕಾಂಬ್ಳೆ ಅವರು, ತಪ್ಪಿತಸ್ಥ ಇಂಜಿನಿಯರ್‌ ಮೇಲೆ ಕ್ರಮ ಕೈಗೊಳ್ಳಲು ಉನ್ನತ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು. ಬಾಕಿ ಉಳಿದ ಎಲ್ಲ ರೈತರ ಬಿದ್ದ ಮನೆಗಳ ಜಿಪಿಎಸ್‌ನ್ನು ಮಾಡಿಕೊಡಲು ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿ ರೈತರ ಕ್ಷಮೆ ಕೇಳಿದ ನಂತರ ರೈತರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದು, ತಹಶೀಲ್ದಾರ ಕಚೇರಿಗೆ ತೆರಳಿ ರೈತರೊಂದಿಗೆ ಅಸಭ್ಯವಾಗಿ ವರ್ತಿಸಿ, ಲಂಚ ಕೇಳಿದ ಇಂಜಿನಿಯರ್‌ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ತಹಶೀಲ್ದಾರ ಮುಖಾಂತರ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.

2019 -20 ನೇ ಸಾಲಿನಲ್ಲಿ ಘಟಪ್ರಭಾ ನದಿಗೆ ಉಂಟಾದ ಪ್ರವಾಹಕ್ಕೆ ನದಿಯ ದಡದ ರೈತರು ತಮ್ಮ ಮನೆ ಕಳೆದುಕೊಂಡು ಗುಡಿ-ಗುಂಡಾರ ಹಾಗೂ ಧರ್ಮಶಾಲೆಗಳಲ್ಲಿ ವಾಸಿಸುತ್ತಿದ್ದಾರೆ. 2 ವರ್ಷಗಳು ಕಳೆದರೂ ಸಹ ಇನ್ನೂವರೆಗೆ ಮನೆ ಕಟ್ಟಲು ಸರಕಾರದಿಂದ ಪರಿಹಾರ ಬಂದಿಲ್ಲ. ಇಂತಹ ಸಂದರ್ಭದಲ್ಲಿ ರೈತರಿಗೆ ಅನುಕೂಲ ಮಾಡಬೇಕಾದ ಜಿ.ಪಂ ಇಂಜಿನಿಯರ್‌ ರೈತರಿಂದ ಮನೆ ಜಿಪಿಎಸ್‌ ಮಾಡಲು ಲಂಚ ಕೇಳುತ್ತಿದ್ದು, ಹಣ ಕೊಡದವರ ಮನೆಗಳನ್ನು ಲಾಗ್‌ ಇನ್‌ ಮಾಡದೆ ಕೈ ಬಿಟ್ಟಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಸಂಘಟನೆಯ ರಾಜ್ಯ ಸಂಚಾಲಕ ಗಣೇಶ ಈಳಿಗೇರ, ರಮೇಶ ಬೂದಿಗೊಪ್ಪ, ಮುತ್ತೆಪ್ಪ ಕುರುಬರ,ಶಂಕರ ಹಡಗಿನಾಳ, ಮಹಾವೀರ ದಪ್ಪಾದುಳಿ, ಶಿವಾನಂದ ಇಳಿಗೇರ, ರಾಜು ಜಿಗತಮ್ಮನವರ, ಸಂಜುದೇಮನ್ನವರ, ಆಕಾಶ ಬಂಡಿ, ಮಾರುತಿ ಸನದಿ, ವಿಠಲಮಹಾಕಾಳಿ, ಮಲೀಕ ಬಳಿಗಾರ, ಸಾಗರ ಬಂಡಿ, ಸಿದ್ದಲಿಂಗ ಪೂಜಾರಿ, ಮಲ್ಲಿಕಾರ್ಜುನ ಇಳಿಗೇರ, ದುರ್ಗಪ್ಪ ಬಂಡಿವಡ್ಡರ ಸೇರಿದಂತೆ ಅನೇಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next