Advertisement

ಲಂಚ ಪ್ರಕರಣಕ್ಕೆ ಎಳ್ಳು ನೀರು ಬಿಟ್ಟ ಅಧಿಕಾರಿ

01:12 PM Mar 15, 2022 | Team Udayavani |

ಕನಕಪುರ: ಇ-ಖಾತೆಗೆ ಲಂಚ ಪಡೆದಿದ್ದ ಪ್ರಕರಣವನ್ನು ವಸ್ತು ನಿಷ್ಠ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು, ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Advertisement

ನಗರದ ಬಾಣಂತ ಮಾರಮ್ಮ ಬಡಾವಣೆಯ ನಿವಾಸಿ ಸತೀಶ್‌ ತಮ್ಮ ನಿವೇಶನಕ್ಕೆ ಈ ಖಾತೆಗೆ ಅರ್ಜಿ ಸಲ್ಲಿಸಿದರು. ಈ ಖಾತೆ ಮಾಡಿಕೊಳ್ಳಲು ನಗರಸಭೆಯ ಕಂದಾಯ ಇಲಾಖೆಯ ನಂಜುಂಡ 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅರ್ಜಿ ಸಲ್ಲಿಸಿದ ಸತೀಶ್‌ ಮುಂಗಡವಾಗಿ 10 ಸಾವಿರ ರೂ. ಲಂಚ ಕೊಡುವಾಗ ದೃಶ್ಯವನ್ನು ಗುಪ್ತವಾಗಿ ವಿಡಿಯೋ ಚಿತ್ರೀಕರಣ ಮಾಡಿದ್ದರು.

ವರದಿ ನೀಡುವಂತೆ ಮೌಖಿಕ ಆದೇಶ: ನಗರಸಭೆಯ ಕಂದಾಯ ಇಲಾಖೆಯ ನಂಜುಂಡ ಲಂಚ ಪಡೆಯುತ್ತಿರುವ ವಿಡಿಯೋ ಕಳೆದ 20 ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಜಿಲ್ಲಾಧಿಕಾರಿ ರಾಕೇಶ್‌ ಕುಮಾರ್‌ ಅವರು, ನಗರಸಭೆಯಲ್ಲಿ ಲಂಚ ಪಡೆದಿದ್ದಾರೆ ಎನ್ನಲಾದ ಪ್ರಕರಣದಲ್ಲಿ ವರದಿ ನೀಡುವಂತೆ ಜಿಲ್ಲಾ ಯೋಜನಾ ನಿರ್ದೇಶಕ ಅಶ್ವಿ‌ನ್‌ ಅವರಿಗೆ ಮೌಖಿಕ ಆದೇಶ ನೀಡಿದರು. ಯೋಜನಾ ನಿರ್ದೇಶಕರು ನಗರ ಸಭೆಯ ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚನೆ ನೀಡಿದರು. ಆದರೆ, ವಸ್ತುನಿಷ್ಠವಾಗಿ ವರದಿ ನೀಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮೇಲಧಿಕಾರಿಗಳಿಗೆ ದಿಕ್ಕುತಪ್ಪಿಸುತ್ತಿದ್ದಾರೆ ಎಂಬುದು ಸಾರ್ವಜನಿಕರು ಆಕ್ರೋಶ.

ಪ್ರಕರಣ ಮುಚ್ಚಿಹಾಕಲು ಯತ್ನ: ಲಂಚ ಪಡೆದಿ ರುವ ಪ್ರಕರಣದ ಅಧಿಕಾರಿ ನಂಜುಂಡ ಅವರಿಗೆ 15 ಸಾವಿರಕ್ಕೆ ಬೇಡಿಕೆಯಿಟ್ಟು ಮುಂಗಡವಾಗಿ 10 ಸಾವಿರ ಪಡೆದು ಉಳಿದ 5ಸಾವಿರ ಯಾವಾಗ ಕೊಡ್ತೀರಾ? ಇದು ರಿಜಿಸ್ಟರ್‌ ಆಗಿರುವ ಖಾತೆ; ಮೇಡಂಗೆ ಗೊತ್ತಾದ್ರೆ ತೊಂದರೆ ಆಗುತ್ತೆ ಕೆಲಸ ಮಾಡಿ ಕೊಟ್ಟರೆ ಮಾತ್ರ ನಾವು ಹಣ ಪಡೆಯುತ್ತೇವೆ. ಇಲ್ಲದಿದ್ದರೆ ಹಣ ತೆಗೆದುಕೊಳ್ಳುವುದಿಲ್ಲ ಕೆಲಸವಾಗು ತ್ತಿದ್ದಂತೆ ಉಳಿದ 5 ಸಾವಿರ ರೂ. ತಲುಪಿಸಬೇಕು ಎಂದು ನಗರಸಭೆಯ ನೆಲಮಹಡಿಯಲ್ಲಿ ಹೇಳುವ ದೃಶ್ಯ ವಿಡಿಯೋದಲ್ಲಿ ಸ್ಪಷ್ಟವಾಗಿ ಚಿತ್ರೀಕರಣವಾಗಿದೆ.

ಆದರೆ, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಕರಣವನ್ನು ಮುಚ್ಚಿ ಹಾಕಲು ವಿಡಿಯೋ ಬಿಡುಗಡೆ ಮಾಡಿರುವ ಅರ್ಜಿದಾರನ ಮೇಲೆ ನಗರಸಭೆಯ ಅಧಿಕಾರಿಗಳು ಒತ್ತಡ ಹಾಕಿದ್ದಾರೆ. ನಾನು ಯಾವುದೇ ಲಂಚ ಕೊಟ್ಟಿಲ್ಲ; ನಾನು ತೆರಿಗೆ ಹಣ ಪಾವತಿ ಮಾಡಿದ್ದೇನೆ ಎಂದು ಹೇಳಿಕೆ ನೀಡುವಂತೆ ಸಂದರ್ಭವನ್ನು ಸೃಷ್ಟಿಮಾಡಿ ಬಳಿಕ ಇಬ್ಬರಿಗೂ ನೆಪ ಮಾತ್ರಕ್ಕೆ ನೋಟಿಸ್‌ ಕೊಟ್ಟು ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಸುತ್ತಿದ್ದಾರೆ.

Advertisement

ನಂಜುಂಡ ಎಂಬುವವರು ಲಂಚ ಪಡೆದಿರುವುದು ಸ್ಪಷ್ಟವಾಗಿ ದೃಶ್ಯದಲ್ಲಿದೆ. ಇಷ್ಟೆಲ್ಲಾ ಸಾಕ್ಷ್ಯಾಧಾರಗಳು ಇದ್ದರೂ ಸಹ ತಪ್ಪಿತಸ್ಥರ ವಿರುದ್ಧ ಈವರೆಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರುವುದು ಅಧಿಕಾರಿಗಳೂ ಇದರಲ್ಲಿ ಶಾಮಿಲಾಗಿದ್ದಾರಾ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಲು ಕಾರಣವಾಗಿದೆ.

ಡೀಸಿ ಈ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿ ಸೂಕ್ತ ತನಿಖೆ ನಡೆಸಿ ಲಂಚ ಪಡೆದ ಅಧಿಕಾರಿ, ಲಂಚ ನೀಡಿ ಸುಳ್ಳು ಹೇಳಿಕೆ ನೀಡಿರುವ ಅರ್ಜಿದಾರ ಮತ್ತು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧಮ್ಮ ದೀವಿಗೆ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ರೈತ ಸಂಘ ಯುವಶಕ್ತಿ ವೇದಿಕೆ ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡಪರ ಸಂಘಟನೆಗಳ ಸಹಯೋಗದೊಂದಿಗೆ ನಗರಸಭೆ ಭ್ರಷ್ಟಾಚಾರದ ವಿರುದ್ಧ ಮಾ.16ರಂದು ಬೃಹತ್‌ ಪ್ರತಿಭಟನಾ ಧರಣಿ ಹಮ್ಮಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next