ಬೆಂಗಳೂರು: ಲಂಚ ಪಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಎಲೆಕ್ಟ್ರೊಲ್ ಇನ್ ಸ್ಪೆಕ್ಯುರೇಟ್‌ನ ಡೆಪ್ಯುಟಿ ಚೀಫ್ ಎಲೆಕ್ಟ್ರೋಲ್ ಆಫೀಸರ್ ಕೆ.ವಿ.ಸದಾನಂದ ಹಾಗೂ ಬೆಂಗಳೂರು ಉತ್ತರ ತಾಲೂಕಿನ ಸೊಣ್ಣಪ್ಪನಹಳ್ಳಿಯ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್(ಗುತ್ತಿಗೆ ಆಧಾರಿತ ನೇಮಕ) ಎಚ್. ಮೂರ್ತಿಗೆ ನ್ಯಾಯಾಲ ಯವು 3 ವರ್ಷ ಶಿಕ್ಷೆ ವಿಧಿಸಿದೆ.
2016ರ ನ.30ರಂದು ಆರೋಪಿ ಸದಾನಂದ ಅವರು, ನಕ್ಷೆ ಅನುಮೋದನೆಗಾಗಿ ದೂರುದಾರ ಆರ್.ಬಿ. ದಯಾನಂದ ಅವರಿಂದ ಲಂಚ ಪಡೆಯುತ್ತಿದ್ದ ವೇಳೆ ಹಿಂದಿನ ಎಸಿಬಿ ಪೊಲೀಸರು ಬಂಧಿಸಿದ್ದರು.
ತನಿಖೆಯ ನಂತರ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಬೆಂಗಳೂರಿನ 23ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಇದೀಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರಿಗೆ 3 ವರ್ಷ ಶಿಕ್ಷೆ ಹಾಗೂ 1.50 ಲಕ್ಷ ರೂ. ದಂಡವಿಧಿಸಿ ಆದೇಶಿ ಸಿದೆ. ದಂಡ ಪಾವತಿ ವಿಫಲವಾದರೆ ಹೆಚ್ಚುವರಿ 2 ತಿಂಗಳ ಸಾದಾ ಶಿಕ್ಷೆ ಅನುಭವಿಸಬೇಕೆಂದು ಆದೇಶದಲ್ಲಿ ತಿಳಿಸಿದೆ.
ಲಂಚಕ್ಕೆ ಬೇಡಿಕೆಯಿಟ್ಟು ಜೈಲು ಸೇರಿದ ಬಿಲ್ ಕಲೆಕ್ಟರ್: ಮತ್ತೂಂದು ಪ್ರಕರಣದಲ್ಲಿ ಖಾತಾ ಬದಲಾವಣೆ ಮಾಡಿಕೊಡುವುದಕ್ಕಾಗಿ 6 ಸಾವಿರ ರೂ. ಲಂಚಕ್ಕೆ ಪಡೆದ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ತಾಲೂಕಿನ ಸೊಣ್ಣಪ್ಪನಹಳ್ಳಿಯ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ (ಗುತ್ತಿಗೆ ಆಧಾರಿತ ನೇಮಕ) ಎಚ್.ಮೂರ್ತಿಗೆ ಇದೇ ನ್ಯಾಯಾಲಯವು 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 1 ಲಕ್ಷ ರೂ. ದಂಡ ವಿಧಿಸಿದೆ.
2017ರ ನ.24ರಂದು ಎಚ್. ಮೂರ್ತಿ ದೂರುದಾರರಿಂದ ಜಮೀನಿನ ಖಾತಾ ವರ್ಗಾವಣೆ ಮಾಡಿಕೊಡಲು 6 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಪೊಲೀಸರು ಬಂಧಿಸಿದ್ದರು. ನಂತರ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.