ಕಲಬುರಗಿ: ಆಶ್ರಯ ಯೋಜನೆಯ ಫಲಾನುಭವಿಗೆ ಎರಡನೇ ಕಂತಿನ ಚೆಕ್ ನೀಡಲು ಲಂಚ ಸ್ವೀಕರಿಸಿದ ಭ್ರಷ್ಟ ಪಂಪ್ ಆಪರೇಟರ್ ಗೆ ಬರೋಬ್ಬರಿ 9 ವರ್ಷ 2 ತಿಂಗಳ ನಂತರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಜಿಲ್ಲೆಯ ಆಳಂದ ತಾಲೂಕಿನ ಬೆಳಮಗಿ ಗ್ರಾಮ ಪಂಚಾಯಿತಿಯ ಪಂಪ್ ಆಪರೇಟರ್ ಅಂಬಾಜಿ ಮಾನೆ ಎಂಬಾತನೆ ಶಿಕ್ಷೆಗೆ ಗುರಿಯಾದ ವ್ಯಕ್ತಿಯಾಗಿದ್ದಾನೆ. ಭಾರತೀಯ ದಂಡ ಸಂಹಿತೆಯ ಕಲಂ 7ರ ಅಡಿಯಲ್ಲಿ ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ಹಾಗೂ 13 (1) (ಡಿ), 13 (2) ಲಂಚ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ 4 ವರ್ಷ ಶಿಕ್ಷೆ, 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ.
ಏನಿದು ಪ್ರಕರಣ? ಬೆಳಮಗಿ ಗ್ರಾಮದ ಜಗದೇವಿ ಕಸನಕರ ಎಂಬುವರು 2009ನೇ ಸಾಲಿನ ಆಶ್ರಯ ಯೋಜನೆ ಫಲಾನುಭವಿಯಾಗಿ ಆಯ್ಕೆಯಾಗಿರುತ್ತಾರೆ. ಇವರಿಗೆ 2ನೇ ಕಂತಿನ ಹಣದ ಚೆಕ್ ನೀಡಲು ಪಂಪ್ ಆಪರೇಟರ್ ಅಂಬಾಜಿ 2 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿರುತ್ತಾನೆ.
ಅಂತೆಯೇ 2011ರ ಜೂ.30ರಂದು ಗ್ರಾಮ ಪಂಚಾಯತಿ ಕಚೇರಿಯಲ್ಲಿ ಫಲಾನುಭವಿ ಜಗದೇವಿ ಅವರಿಂದ ಅಂಬಾಜಿ ಲಂಚ ಸ್ವೀಕರಿಸುವ ಖಚಿತ ಮಾಹಿತಿ ಮೇರೆಗೆ ಅಂದಿನ ಲೋಕಾಯುಕ್ತ ಇನ್ಸ್ ಪೆಕ್ಟರ್ ವಿನಾಯಕ ಬಡಿಗೇರ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿ ಆರೋಪಿಯನ್ನು ಬಲೆಗೆ ಕಡೆವಿರುತ್ತಾರೆ.
ತದ ನಂತರ ಈ ಪ್ರಕರಣದ ತನಿಖೆಯನ್ನು ಇನ್ಸ್ ಪೆಕ್ಟರ್ ಜೇಮ್ಸ್ ಮಿನೇಜಸ್ ನೇತೃತ್ವದ ತಂಡ ಪೂರ್ಣಗೊಳಿಸಿ 2014ರ ಜ.6ರಂದು ಆರೋಪಿ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿರುತ್ತಾರೆ. ಇದೇ 26ರಂದು ಜಿಲ್ಲಾ ಪ್ರಧಾನ ಹಾಗು ವಿಶೇಷ ಸತ್ರ ನ್ಯಾಯಾಧೀಶ ಆರ್.ಜೆ.ಸತೀಶ ಸಿಂಗ್ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ.
ಮುಖ್ಯ ಪೇದೆಗಳಾದ ಸಾತಲಿಂಗಪ್ಪ, ಅಬ್ದುಲ್ ನಬಿ ಪ್ರಕರಣಕ್ಕೆ ಸಂಬಂಧಪಟ್ಟ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದಲ್ಲಿ ಒದಗಿಸಿ ಉತ್ತಮ ಕಾರ್ಯ ನಿರ್ವಹಿಸಿರುತ್ತಾರೆ. ಲೋಕಾಯುಕ್ತದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ವಿರುಪಣ್ಣ ವಾದವನ್ನು ಮಂಡಿಸಿರುತ್ತಾರೆ ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.