Advertisement

ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಪಣತೊಟ್ಟ ಕರಾವಳಿಯ ರೈತರು

01:30 AM Dec 23, 2018 | Karthik A |

ತೆಕ್ಕಟ್ಟೆ: ಹಲವು ದಶಕಗಳಿಂದ ಕರಾವಳಿಯ ರೈತರ ಕನಸಾಗಿದ್ದ ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸುವ ನಿಟ್ಟಿನಿಂದ ಕರಾವಳಿ ರೈತ ಸಂಘಟನೆಗಳು ಒಂದಾಗಿ ಹೊಸ ಮಾದರಿಯ ತಂತ್ರಜ್ಞಾನವನ್ನು ಬಳಸಿಕೊಂಡು ಕುಂದಾಪುರ ತಾಲೂಕಿನ ಶಾನಾಡಿ ಪರಿಸರದಲ್ಲಿ ಸುಮಾರು ನಾಲ್ಕು ಎಕ್ರೆಗೂ ಅಧಿಕ ವಿಸ್ತೀರ್ಣದಲ್ಲಿ ಕಬ್ಬಿನ ನಾಟಿ ಕಾರ್ಯಕ್ಕೆ ಡಿ. 19ರಂದು ಚಾಲನೆ ನೀಡಿದ್ದಾರೆ.

Advertisement

ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸುವ ನಿಟ್ಟಿನಿಂದ ಈಗಾಗಲೇ ಕಾರ್ಖಾನೆಯಿಂದ ಕಬ್ಬಿನ ಬೀಜವನ್ನು ವಿತರಿಸಲಾಗಿದ್ದು, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ನರ್ಸರಿಯಿಂದ ಕಬ್ಬಿನ ಸಸಿಗಳನ್ನು ಹಾಗೂ ಕೆಲವು ಕಡೆಗಳಲ್ಲಿ ರೈತರಿಗೆ ಮಂಡ್ಯದಿಂದ ಆಧುನಿಕ ತಳಿಯ ಬೀಜ ವಿತರಿಸಲಾಗಿದೆ. ಬ್ಯಾಡಗಿಯಿಂದ ಎಂಟು ಮಂದಿಯ ತಂಡ ನಾಟಿ ಕಾರ್ಯದ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ನೀಡಿದ್ದಾರೆ.

ಕಬ್ಬಿನ ಬೀಜದ ಸಸಿ ಉತ್ಪಾದನೆ 
ಒಂದು ಎಕ್ರೆ ಕೃಷಿಭೂಮಿಗೆ ಸುಮಾರು 3ಟನ್‌ ಕಬ್ಬಿನ ಬೀಜ ಅನಿವಾರ್ಯವಾಗಿದ್ದು, ಈಗಾಗಲೇ ಬೀಜ ಉತ್ಪಾದನೆಗಾಗಿಯೇ ಗ್ರಾಮೀಣ ನಾಟಿ ಕಾರ್ಯ ಆರಂಭವಾಗಿದೆ. ವಾರಾಹಿ ಕಾಲುವೆ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಮುಂದಿನ ವರ್ಷದಲ್ಲಿ ನೂರಾರು ಎಕ್ರೆ ಕೃಷಿಭೂಮಿಯಲ್ಲಿ ಕಬ್ಬಿನ ನಾಟಿ ಕಾರ್ಯವನ್ನು ಆರಂಭಿಸುವ ಮಹಾತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದಾರೆ ಎಂದು ಕೃಷಿಕ ಉಮಾನಾಥ ಶೆಟ್ಟಿ ಶಾನಾಡಿ ಹೇಳಿದ್ದಾರೆ.

ಪುನಶ್ಚೇತನಕ್ಕೆ ಹಣದ ಕೊರತೆ ಇಲ್ಲ 
ಮುಖ್ಯಮಂತ್ರಿ ಎಚ್‌.ಡಿ.ಕುಮಾರ್‌ ಸ್ವಾಮಿಯವರು ಅಕ್ಟೋಬರ್‌ನಲ್ಲಿ ಉಡುಪಿ ಜಿಲ್ಲಾ ಅಭಿವೃದ್ಧಿ ಪರಿಶೀಲನೆಗೆ ಆಗಮಿಸಿದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ಪುನಶ್ಚೇತನಗೊಳಿಸಬೇಕು ಎನ್ನುವ ಮನವಿಗೆ ಸ್ಪಂದನ ವ್ಯಕ್ತವಾಗಿದೆ. ವಾರಾಹಿ ಕಾಲುವೆ ನೀರಿಗೆ ಪೂರಕವಾಗಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬು ಬೆಳೆದು ತೋರಿಸಿ ಸರಕಾರಕ್ಕೆ ಮನವರಿಕೆ ಮಾಡಬೇಕಾಗಿದೆ. ಕಾರ್ಖಾನೆ ಪುನಶ್ಚೇತನಕ್ಕೆ ಹಣದ ಕೊರತೆ ಇಲ್ಲ ಎಂದು ಬಿಟ್ಕೋನ್‌ ಸಂಸ್ಥೆ ಸಮಗ್ರ ಯೋಜನಾ ವರದಿಯನ್ನು ನೀಡಿದೆ.

200ಎಕ್ರೆಯಲ್ಲಿ ಬೀಜ ಉತ್ಪಾದನೆ ಗುರಿ
ಜಿಲ್ಲೆಯಲ್ಲಿ ವಾರಾಹಿ ಕಾಲುವೆ ನೀರು ಸುಮಾರು 15 ಸಾವಿರ ಎಕ್ರೆ ಪ್ರದೇಶದಲ್ಲಿ  ಹರಿದು ಬರುತ್ತಿದ್ದು, ಗ್ರಾಮೀಣ ಪ್ರದೇಶಗಳಾದ ಶಂಕರನಾರಾಯಣ, ಹಾಲಾಡಿ, ಮೊಳಹಳ್ಳಿ, ಜಪ್ತಿ, ಬಸ್ರೂರು ಹಟ್ಟಿಕುದ್ರು ಸೇರಿದಂತೆ ಈಗಾಗಲೇ ಸುಮಾರು 200 ಎಕ್ರೆ ಕೃಷಿಭೂಮಿಯಲ್ಲಿ ಕಬ್ಬಿನ ಬೆಳೆ ವಿಸ್ತರಣೆ ಮಾಡುವ ನಿಟ್ಟಿನಿಂದ ಕಬ್ಬಿನ ಸಸಿ ನಾಟಿ ಕಾರ್ಯಕ್ಕಾಗಿ ರೈತರಿಗೆ ಉತ್ತಮ ತಳಿಯ ಬೀಜ ವಿತರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ  ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಕನಿಷ್ಠ 8 ಸಾವಿರ ಎಕ್ರೆ  ವಿಸ್ತೀರ್ಣದಲ್ಲಿ ಕಬ್ಬು ಬೆಳೆಯಬೇಕಾದ ಅನಿವಾರ್ಯತೆ ಇದೆ. 2020-21ನೇ ಸಾಲಿನಲ್ಲಿ ಸರಿ ಸುಮಾರು 2.5 ಲಕ್ಷ ಟನ್‌ ಕಬ್ಬು ಬೆಳೆಯಬೇಕಾಗುತ್ತದೆ.
– ಎಚ್‌. ಜಯಶೀಲ ಶೆಟ್ಟಿ, ಅಧ್ಯಕ್ಷರು, ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ

Advertisement

ನಿರೀಕ್ಷಿತ ಗುರಿ ತಲುಪಬೇಕು
ಸಹಕಾರಿ ತತ್ವ ಹುಟ್ಟಿರುವುದೇ ಕರಾವಳಿ ಜಿಲ್ಲೆಯಲ್ಲಿ. ಆದರೆ ಸಹಕಾರಿ ಬ್ಯಾಂಕ್‌, ಹಾಲು ಉತ್ಪಾದನೆಗಳು ಅಭಿವೃದ್ಧಿಯೆಡೆಗೆ ಸಾಗಿದ್ದರೂ ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆ ಮಾತ್ರ ಅಭಿವೃದ್ಧಿ ಕಾಣದಿರುವುದು ದುರಂತ. ಇಂತಹ ಕರಾವಳಿಯ ರೈತರ ಆಸ್ತಿ ಸಹಕಾರಿ ಕಾರ್ಖಾನೆಯ ಉಳಿವಿಗಾಗಿ ಗ್ರಾಮಗಳಿಗೆ ಬಂದಿರುವ ವಾರಾಹಿ ಕಾಲುವೆ ನೀರಾವರಿಯನ್ನು ಸಮರ್ಪಕವಾಗಿ ಬಳಸಿಕೊಂಡು ಕಬ್ಬಿನ ಬೀಜದ ಸಸಿ ಬೆಳೆದು ರೈತರು ಸಂಘಟಿತರಾಗಿ ನಿರೀಕ್ಷಿತ ಗುರಿಯನ್ನು ತಲುಪಬೇಕಾಗಿದೆ.
– ಶಾನಾಡಿ ರಾಮಚಂದ್ರ ಭಟ್‌, ಹಿರಿಯ ಸಾವಯವ ಕೃಷಿಕರು.

— ಟಿ. ಲೋಕೇಶ್‌ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next