ಮುಂಬಯಿ: ಕೋಲ್ಕತಾ ನೈಟ್‌ರೈಡರ್ ಕೋಚ್ ಬ್ರೆಂಡನ್ ಮೆಕಲಮ್‌ಗೆ ಸೋಲಿನ ವಿದಾಯ ಎದುರಾಯಿತು. ಲಕ್ನೋ ವಿರುದ್ಧ ಅನುಭವಿಸಿದ 2 ರನ್ ಅಂತರದ ಸೋಲಿನಿಂದ ಕೆಕೆಆರ್ ಪ್ಲೇ ಆಫ್ ಅವಕಾಶ ವಂಚಿತವಾಯಿತು. ನ್ಯೂಜಿಲ್ಯಾಂಡ್‌ನ ಮಾಜಿ ನಾಯಕ ಈಗ ಇಂಗ್ಲೆಂಡ್ ಟೆಸ್ಟ್ ತಂಡದ ನೂತನ ಕೋಚ್ ಆಗಿ ನೇಮಗೊಂಡಿದ್ದು, ಐಪಿಎಲ್‌ನಿಂದ ದೂರ ಸರಿಯಲಿದ್ದಾರೆ.
“ಕೆಕೆಆರ್ ಜತೆ ಕಳೆದ ಕೆಲವು ವರ್ಷಗಳು ನಿಜಕ್ಕೂ ಸ್ಮರಣೀಯವಾಗಿದ್ದವು. ನಮ್ಮ ತಂಡ ಈ ವರ್ಷ ಶ್ರೇಷ್ಠ ಪ್ರದರ್ಶನವನ್ನೇ ನೀಡಿತು. ಇದನ್ನೇ ಮುಂದುವರಿಸಿಕೊಂಡು ಹೋಗುವ ಬಗ್ಗೆ ವಿಶ್ವಾಸವಿದೆ. ಉತ್ತಮ ದರ್ಜೆಯ ಕೋಚಿಂಗ್ ಸಿಬಂದಿ, ಶ್ರೇಯಸ್ ಅಯ್ಯರ್ ಅವರ ಉತ್ತಮ ಗುಣಮಟ್ಟದ ನಾಯಕತ್ವದಿಂದ ಕೆಕೆಆರ್ ಮುಂದಿನ ವರ್ಷ ಖಂಡಿತವಾಗಿಯೂ ಇನ್ನೂ ಉನ್ನತ ಮಟ್ಟದ ಪ್ರದರ್ಶನ ನೀಡಲಿದೆ. ಕಾದು ನೋಡಿ…’ ಎಂಬುದಾಗಿ ಮೆಕಲಮ್ ಹೇಳಿದರು.
“ಕಳೆದ 3 ವರ್ಷಗಳಿಂದ ಕಾಡುತ್ತಿರುವ ಕೊರೊನಾ ನಡುವೆಯೂ ಐಪಿಎಲ್ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟದ್ದು ಹೆಮ್ಮೆಯ ಸಂಗತಿ. ಇದೊಂದು ಅದ್ಭುತ ಹಾಗೂ ವಿಶ್ವದ ಅತೀ ದೊಡ್ಡ ಟೂರ್ನಿ. ನಾನೂ ಇದರ ಭಾಗವಾಗಿದ್ದೆ ಎಂಬುದು ಅತ್ಯಂತ ಖುಷಿಯ ಸಂಗತಿ. ಈ ಮೂಲಕ ಕೆಲವು ಯುವ ಕ್ರಿಕೆಟಿಗರನ್ನು ದೊಡ್ಡ ಮಟ್ಟಕ್ಕೆ ಅಣಿಗೊಳಿಸುವ ಅವಕಾಶ ನನಗೆ ಸಿಕ್ಕಿತು’ ಎಂದರು.
158 ರನ್ನುಗಳ ಭರ್ಜರಿ ಆಟ :
ಐಪಿಎಲ್ ಕ್ರೇಜ್ ಹೆಚ್ಚಿಸುವಂತೆ ಮಾಡಿದ್ದೇ ಬ್ರೆಂಡನ್ ಮೆಕಲಮ್ ಎಂಬುದನ್ನು ಮರೆಯುವಂತಿಲ್ಲ. ಇದು ಮೊದಲ್ಗೊಂಡಿದ್ದು ಕೂಡ ಕೆಕೆಆರ್ ಮೂಲಕವೇ. ಐಪಿಎಲ್ ಇತಿಹಾಸದ ಪ್ರಪ್ರಥಮ ಮುಖಾಮುಖೀಯಲ್ಲಿ ಆರ್‌ಸಿಬಿ ವಿರುದ್ಧ ಸಿಡಿದು ನಿಂತ ಮೆಕಲಮ್ ಅಜೇಯ 158 ರನ್ ಬಾರಿಸಿದ್ದರು.