Advertisement

ಉಸಿರು ಕಟ್ಟಿಸುತ್ತಿದೆ ತ್ಯಾಜ್ಯದ ಹೊಗೆ

10:31 AM Jan 17, 2019 | |

ಬೆಂಗಳೂರು: ಋತುಮಾನ ಬದಲಾವಣೆ ಹಿನ್ನೆಲೆಯಲ್ಲಿ ನಗರದ ಉದ್ಯಾನವನಗಳು ಹಾಗೂ ರಸ್ತೆಬದಿ ಮರಗಳ ಎಲೆಗಳು ಉದುರಲಾರಂಭಿಸಿವೆ. ಎಲ್ಲೆಡೆ ತರಗು ರಾಶಿ ಬೀಳುತ್ತಿದೆ. ಆದರೆ, ಹೀಗೆ ಉದುರಿದ ಎಲೆಗಳ ವೈಜ್ಞಾನಿಕ ನಿರ್ವಹಣೆಗೆ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜನ ತೊಂದರೆ ಅನುಭವಿಸುವಂತಾಗಿದೆ.

Advertisement

ಋತುಮಾನ ಬದಲಾದಂತೆ ಚಳಿ ಗಾಲದಲ್ಲಿ ಸಾಮಾನ್ಯವಾಗಿ ಹಳೆಯ ಎಲೆಗಳು ಉದುರಿ ಹೊಸ ಎಲೆಗಳು ಚಿಗುರಲಾರಂಭಿಸುತ್ತವೆೆ. ಅದ ರಂತೆ ತಿಂಗಳಿನಿಂದ ಈಚೆಗೆ ಎಲೆಗಳ ಉದುರುವಿಕೆ ಪ್ರಮಾಣ ಹೆಚ್ಚಾಗಿದ್ದು, ನಗರದಾದ್ಯಂತ ತರಗು ರಾಶಿಗೆ ಬೆಂಕಿ ಹಚ್ಚುವುದು, ದಟ್ಟ ಹೊಗೆ ಕಾಣಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ತರಗು ವಿಲೇವಾರಿಗೆ ಇದು ಸುಲಭ ಉಪಾಯ ವೆನಿಸಿದರೂ ಸಾರ್ವಜನಿಕರ ಆರೋಗ್ಯ ಮಾತ್ರವಲ್ಲದೆ ಪರಿಸರಕ್ಕೂ ಮಾರಕವಾಗಿ ಪರಿಣಮಿಸಿದೆ.

ಈಗಾಗಲೇ ನಗರದಲ್ಲಿನ ವಾಯು ಮಾಲಿನ್ಯದಿಂದ ಜನ ಹಲವು ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಇದೀಗ ಎಲ್ಲೆಂದರಲ್ಲಿ ಎಲೆಗಳ ರಾಶಿ ಹಾಗೂ ತ್ಯಾಜ್ಯ ರಾಶಿಗೆ ಬೆಂಕಿ ಹಚ್ಚುತ್ತಿರುವುದರಿಂದ ಉಂಟಾಗುತ್ತಿರುವ ದಟ್ಟ ಹೊಗೆ, ಕಮುಟು ವಾಸನೆ ಜನರನ್ನು ಕಾಡಲಾ ರಂಭಿಸಿದೆ. ನಗರದ ಪ್ರಮುಖ ಉದ್ಯಾನಗಳ ಬಳಿಯೂ ಎಲೆಗಳ ರಾಶಿಗೆ ಬೆಂಕಿ ಹಚ್ಚುತ್ತಿರುವುದರಿಂದ ವಾಯುವಿಹಾರಿಗಳು, ಶಾಲಾ ಮಕ್ಕಳು, ಸಾರ್ವ ಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.

ಜತೆಗೆ ಪ್ರಮುಖ ರಸ್ತೆಗಳನ್ನು ಸ್ವಚ್ಛ ಗೊಳಿಸುತ್ತಿರುವ ಪೌರಕಾರ್ಮಿಕರು ಸಂಗ್ರಹವಾದ ಒಣ ತ್ಯಾಜ್ಯ ಹಾಗೂ ಎಲೆ ರಾಶಿಗೆ ಬೆಂಕಿ ಹಚ್ಚುವುದು ಅಲ್ಲಲ್ಲಿ ನಡೆದಿದೆ. ಕೆಲ ಬಡಾವಣೆಗಳಲ್ಲಿ ಸಾರ್ವಜನಿಕರು ಚಳಿ ಹಾಗೂ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದಾಗಿ ದಟ್ಟ ಹೊಗೆ ಕಾಣಿಸಿಕೊಂಡು ಸಮಸ್ಯೆ ಸೃಷ್ಟಿಯಾಗುತ್ತಿದೆ. ಇನ್ನು ಸಾರ್ವಜನಿಕರಾಗಲಿ, ಪೌರಕಾರ್ಮಿಕರಾಗಲಿ ತ್ಯಾಜ್ಯಕ್ಕೆ ಬೆಂಕಿ ಹಾಕುವುದು ಕಂಡುಬಂದರೆ ಭಾರೀ ದಂಡ ವಿಧಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದರೂ, ತ್ಯಾಜ್ಯಕ್ಕೆ ಬೆಂಕಿ ಹಾಕುವ ಕೃತ್ಯಕ್ಕೆ ಕಡಿವಾಣ ಬಿದ್ದಿಲ್ಲ.

ಉದ್ಯಾನಗಳ ನಿರ್ವಹಣೆಯಿಲ್ಲ: ಬಿಬಿಎಂಪಿ ವ್ಯಾಪ್ತಿಯಲ್ಲಿ 1400ಕ್ಕೂ ಹೆಚ್ಚಿನ ಉದ್ಯಾನಗಳಿದ್ದರೂ, ಉದುರುವ ಎಲೆಗಳನ್ನು ಸಂಗ್ರಹಿಸಿ ಗೊಬ್ಬರವಾಗಿ ಪರಿವರ್ತಿಸುವ ಕಾರ್ಯ ನಡೆಯುತ್ತಿರುವುದು ಬೆರಳೆಣಿಕೆಯಷ್ಟು ಉದ್ಯಾನಗಳಲ್ಲಿ ಮಾತ್ರ. ಉಳಿದಂತೆ ಸಾವಿರಕ್ಕೂ ಹೆಚ್ಚಿನ ಉದ್ಯಾನಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ಸಂಗ್ರಹವಾಗುವ ಒಣಗಿದ ಎಲೆಗಳ ವೈಜ್ಞಾನಿಕ ವಿಲೇವಾರಿಗೆ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಂಡಂತಿಲ್ಲ.

Advertisement

ಶ್ವಾಸಕೋಶ ಸುಡುತ್ತದೆ ಜೋಕೆ: ಎಲೆಗಳು ಹಾಗೂ ತ್ಯಾಜ್ಯಕ್ಕೆ ಬೆಂಕಿ ಹಾಕಿದರೆ ಅದರಿಂದ ಬರುವ ಹೊಗೆ, ಮನುಷ್ಯನ ಶ್ವಾಸಕೋಶಕ್ಕೆ ತೀವ್ರ ಹಾನಿಯುಂಟು ಮಾಡುತ್ತದೆ. ವಾತಾವರಣದಲ್ಲಿ ಈಗಾಗಲೇ ಧೂಳಿನ ಕಣಗಳು ಹೆಚ್ಚಾಗಿದ್ದು, ಅದರೊಂದಿಗೆ ಇಂಗಾಲ ಸೇರಿದರೆ ಮತ್ತಷ್ಟು ತೊಂದರೆಯಾಗುತ್ತದೆ. ಹೀಗಾಗಿ ಸಾರ್ವಜನಿಕರಾಗಲಿ, ಪೌರಕಾರ್ಮಿಕರಾಗಲಿ ಬೆಂಕಿ ಹಾಕಬಾರದು ಎಂದು ಪರಿಸರವಾದಿಗಳು ಹಾಗೂ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಎಲೆ ಸಂಗ್ರಹಕ್ಕೆ ಪ್ರತ್ಯೇಕ ಕಾಂಪ್ಯಾಕ್ಟರ್‌: ಪಾಲಿಕೆ ವ್ಯಾಪ್ತಿ ಯಲ್ಲಿ ಹೆಚ್ಚಿನ ಉದ್ಯಾನಗಳು ಹಾಗೂ ಮರಗಳಿರುವ ವಾರ್ಡ್‌ಗಳಿಗೆ ಎಲೆ ತ್ಯಾಜ್ಯ ಸಂಗ್ರಹಕ್ಕೆಂದೇ ಪ್ರತ್ಯೇಕ ಕಾಂಪ್ಯಾಕ್ಟರ್‌ ಹಾಗೂ ಆಟೋ ಟಿಪ್ಪರ್‌ಗಳನ್ನು ನೀಡಲಾಗಿದೆ. ಜತೆಗೆ ಎಲೆಗಳಿಗೆ ಬೆಂಕಿ ಹಾಕುವುದರಿಂದ ಆಗುವ ತೊಂದರೆಗಳ ಕುರಿತಂತೆ ಪೌರಕಾರ್ಮಿಕರಿಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದ್ದು, ಟೀ ಅಂಗಡಿ, ಬೀದಿ ಬದಿ ವ್ಯಾಪಾರಿಗಳು ಬೆಂಕಿ ಹಾಕುತ್ತಿರುವುದು ಕಂಡು ಬಂದಿದೆ. ಹೀಗಾಗಿ ಅವರಿಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಘನ ತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ರಂದೀಪ್‌ ತಿಳಿಸಿದ್ದಾರೆ.

ಹತ್ತು ಸಿಗರೇಟು ಸೇದಿದಾಗ ಶ್ವಾಸಕೋಶದ ಮೇಲಾಗುವಷ್ಟು ಪರಿಣಾಮ, ಎಲೆ, ತ್ಯಾಜ್ಯಕ್ಕೆ ಬೆಂಕಿ ಹಾಕು ವುದರಿಂದ ಬರುವ ಹೊಗೆಯನ್ನು ಒಮ್ಮೆ ಸೇವಿಸುವುದರಿಂದ ಆಗುತ್ತದೆ. ಈ ಸಂಬಂಧ ಪೌರಕಾರ್ಮಿಕರಿಗೆ ಜಾಗೃತಿ ಮೂಡಿಸಬೇಕು. ನಾಗರಿಕರು ಸಹ ಎಲೆಗಳಿಗೆ ಬೆಂಕಿ ಹಾಕದೆ, ಗೊಬ್ಬರವಾಗಿ ಪರಿವರ್ತಿಸಬೇಕು.
 ಯಲ್ಲಪ್ಪರೆಡ್ಡಿ, ಪರಿಸರವಾದಿ

Advertisement

Udayavani is now on Telegram. Click here to join our channel and stay updated with the latest news.

Next